ಮುಂಬಯಿ : ಏಶ್ಯನ್ ಶೇರುಮಾರುಕಟ್ಟೆಗಳಲ್ಲಿ ಧನಾತ್ಮಕ ಸ್ಥಿತಿ ಕಂಡು ಬಂದಿರುವುದನ್ನು ಅನುಲಕ್ಷಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 100 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 34,000 ಮನೋಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿತು.
ಹೂಡಿಕೆದಾರರು ಮತ್ತು ವಹಿವಾಟುದಾರರ ಜನವರಿ ತಿಂಗಳ ವಾಯಿದೆ ವಹಿವಾಟಿನ ಬಗ್ಗೆ ಆಶಾದಾಯಕರಾಗಿರುವುದರಿಂದ ಮುಂಚೂಣಿ ಶೇರುಗಳ ಖರೀದಿಯಲ್ಲಿ ಆಸಕ್ತಿ ತೋರಿದರು. ಮೇಲಾಗಿ ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ಹತ್ತು ಪೈಸೆ ಸುಧಾರಿಸಿ ಎರಡೂವರೆ ವರ್ಷಗಳ ಉನ್ನತ ಮಟ್ಟವಾಗಿ 63.31 ರೂ. ಮಟ್ಟವನ್ನು ತಲುಪಿದುದು ಕೂಡ ಮುಂಬಯಿ ಶೇರು ಮಾರುಕಟ್ಟೆಗೆ ಉತ್ಸಾಹ ತುಂಬಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 164.58 ಅಂಕಗಳ ಮುನ್ನಡೆಯೊಂದಿಗೆ 34,134.22 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯ 45.40 ಅಂಕಗಳ ಏರಿಕೆಯೊಂದಿಗೆ 10,550.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಐಡಿಯಾ ಸೆಲ್ಯುಲರ್, ಮಾರುತಿ ಸುಜುಕಿ, ಎಸ್ ಬ್ಯಾಂಕ್, ಟಾಟಾ ಸ್ಟೀಲ್, ಇನ್‌ಫೋಸಿಸ್ ಶೇರುಗಳ ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಮುಂಬಯಿ ಶೇರು ಪೇಟೆಯಲ್ಲಿಂದು ಬೆಳಗ್ಗೆ 2,632 ಶೇರುಗಳು ವಹಿವಾಟಿಗೆ ಒಳಪಟ್ಟವು; 1,759 ಶೇರುಗಳು ಮುನ್ನಡೆ ಸಾಧಿಸಿದವು, 758 ಶೇರುಗಳು ಹಿನ್ನಡೆಗೆ ಗುರಿಯಾದವು; 115 ಶೇರುಗಳ ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.