ಮುಂಬಯಿ : ನಾಲ್ಕು ದಿನಗಳ ನಿರಂತರ ಸೋಲಿನ ಬಳಿಕ ನಿನ್ನೆ ಬುಧವಾರವಷ್ಟೇ ಗೆಲುವಿನ ಮುಖ ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟಿನಲ್ಲಿ ಮತ್ತೆ ಸೋಲನ್ನು ಕಂಡಿತು. ಅಂತೆಯೇ ದಿನದ ವಹಿವಾಟನ್ನು ಸೆನ್ಸೆಕ್ಸ್ 343.87 ಅಂಕಗಳ ಭಾರೀ ನಷ್ಟದೊಂದಿಗೆ 33,690.09 ಅಂಕಗಳ ಮಟ್ಟದಲ್ಲಿ ಮುಗಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 99.85 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,124.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಅಮೆರಿಕದ ವಾಲ್ ಸ್ಟ್ರೀಟ್ ನಿನ್ನೆ ಬುಧವಾರದ ವಹಿವಾಟಿನಲ್ಲಿ ಕುಸಿತಕ್ಕೆ ಗುರಿಯಾದದ್ದು ಇಂದು ಮುಂಬಯಿ ಸಹಿತ ಏಶ್ಯನ್ ಶೇರು ಪೇಟೆಗಳ ಮೇಲೆ ಕರಾಳ ಛಾಯೆಯನ್ನು ಹರಿಸಿತು. ಅಲ್ಲದೆ ಡಾಲರ್ ಎದುರು ರೂಪಾಯಿ ದುರ್ಬಲವಾದದ್ದು, ವಿದೇಶಿ ಬಂಡವಾಳದ ಹೊರ ಹರಿವು ಎಗ್ಗಿಲ್ಲದೆ ಸಾಗುತ್ತಿರುವುದು ಮುಂತಾಗಿ ಹಲವಾರು ನೇತ್ಯಾತ್ಮಕ ಕಾರಣಗಳು ಮುಂಬಯಿ ಶೇರು ಪೇಟೆಯನ್ನು ನಿಸ್ತೇಜಗೊಳಿಸಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,637 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 933 ಶೇರುಗಳು ಮಾತ್ರವೇ ಮುನ್ನಡೆ ಕಂಡವು; 1,573 ಶೇರುಗಳು ಹಿನ್ನಡೆಗೆ ಗುರಿಯಾದವು, 131 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ವಿಪ್ರೋ, ಎಚ್‌ಸಿಎಲ್ ಟೆಕ್, ಐಓಸಿ, ಕೋಲ್ ಇಂಡಿಯಾ, ಏಶ್ಯನ್ ಪೇಂಟ್; ಟಾಪ್ ಲೂಸರ್‌ಗಳು : ಇಂಡಿಯಾ ಬುಲ್ಸ್ ಹೌಸಿಂಗ್, ಭಾರ್ತಿ ಏರ್‌ಟೆಲ್, ಯುಪಿಎಲ್, ವೇದಾಂತ, ಹಿಂಡಾಲ್ಕೊ.