ಬೆಂಗಳೂರು: ಕೇಂದ್ರ ಕೋರ್ ಕಮಿಟಿ, ಪಾರ್ಲಿಮೆಂಟರಿ ಬೋರ್ಡ್ ಸಭೆ ನಡೆಯುತ್ತಿದೆ. ಸಿಎಂ ಆಯ್ಕೆ ಸಂಬಂಧ ದೆಹಲಿಯಲ್ಲಿ ಸರಣಿ ಸಭೆಯಾಗುತ್ತಿವೆ. ಇನ್ನೂ ಎರಡು ಮೂರು ದಿನಗಳಲ್ಲಿ ಎಲ್ಲಾಅಂತಿಮವಾಗಲಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೆಸರೂ ಸಹ ಮಾಧ್ಯಮಗಳಲ್ಲಿ ಬರುತ್ತಿದೆ. ನನ್ನ ಜಿಲ್ಲೆಯ ಶಾಸಕರು ನನ್ನಸಿಎಂ ಆಗಬೇಕೆಂದು ಇಚ್ಛೆ ಪಡುವುದರಲ್ಲಿ ವಿಶೇಷವಿಲ್ಲ. ಪಕ್ಷ ಏನು ನಿರ್ಧಾರ ಮಾಡುತ್ತದೆ ಎನ್ನುವುದು ಮುಖ್ಯ ಎಂದರು.
ಸಭೆಯಲ್ಲಿ ಯಾವ ಆಯಾಮದಲ್ಲಿ ಚರ್ಚೆಯಾಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಧರ್ಮೇಂದ್ರ ಪ್ರಧಾನ್ ರಾಜ್ಯಕ್ಕೆ ಬರುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಬರುವ ಸಾಧ್ಯತೆ ಇದೆ. ಆದಷ್ಟು ಬೇಗ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮುಂದಿನ ಮೂರ್ನಾಲ್ಕು ದಿನದಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ. ಶಾಸಕಾಂಗ ಕಮಿಟಿ, ಕೋರ್ ಕಮಿಟಿ, ಪಾರ್ಲಿಮೆಂಟರಿ ಬೋರ್ಡ್ ಅಭಿಪ್ರಾಯದ ಮೇರೆಗೆ ಸಿಎಂ ಆಯ್ಕೆ ಅಂತಿಮ ಆಗುತ್ತದೆ ಎಂದರು.
ಇದನ್ನೂ ಓದಿ:ಯಾರಿಗೆ ಪಟ್ಟಾಭಿಷೇಕ?; ಬಿಎಸ್‌ವೈ ಜೊತೆ ನಿರಾಣಿ, ಬೊಮ್ಮಾಯಿ ಎರಡು ಗಂಟೆ ಕಾಲ ಚರ್ಚೆ
ಬಿಜೆಪಿಯ ಮುಂದಿನ ಮುಖ್ಯಮಂತ್ರಿಯೂ ಭ್ರಷ್ಟಚಾರಿಯಾಗಿರುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು. ಚುನಾವಣೆಯಲ್ಲಿ ಸೋತವರು ನಮ್ಮ ಪಕ್ಷದ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ಇದು ಅವರ ಮನಸ್ಥಿತಿ ತೋರಿಸುತ್ತದೆ. ಇನ್ನು ಹೊಸ ಮುಖ್ಯಮಂತ್ರಿ ಆಗದ ಸಂಧರ್ಭದಲ್ಲಿ ಜನರಲ್ಲಿ ಇಂತಹ ಮನಸ್ಥಿತಿ ಹುಟ್ಟಿಸುವಂತ ಮಾತಗಳನ್ನು ಮಾಜಿ ಮುಖ್ಯಮಂತ್ರಿ ಆಡುವಂತದ್ದಲ್ಲ ಎಂದರು.