Advertisement

ಮೂಗಿಗೆ ತುಪ್ಪ ಹಚ್ಚುವ ಬಿಎಸ್‌ವೈ: ಸಿದ್ದರಾಮಯ್ಯ

06:17 PM Jan 27, 2021 | Team Udayavani |

ಬಸವಕಲ್ಯಾಣ: ಬಸವಾದಿ ಶರಣರು ಕಂಡ ಕನಸಿನ ಸಮಾಜದ ಆಶಯಗಳನ್ನೇ ಭಾರತ ಸಂವಿಧಾನ ಒಳಗೊಂಡಿದೆ. ಆದರೆ ಸರ್ಕಾರಗಳು ಅದರ ವಿರುದ್ಧ
ನಡೆದುಕೊಳ್ಳುತ್ತಿವೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದ ಅಕ್ಕಮಹಾದೇವಿ ಮೈದಾನದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಸಂವಿಧಾನ ಸಂರಕ್ಷಣೆ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಚನ ಸಾಹಿತ್ಯ ಹಾಗೂ ಸಂವಿಧಾನ ಕುರಿತು ಜಾಗೃತಿ ಕಾರ್ಯಕ್ರಮವನ್ನು ವಚನ ಪಠಣ ಮೂಲಕ ಉದ್ಘಾಟಿಸಿ ಮಾತನಾಡಿದರು.

Advertisement

ಬಸವಕಲ್ಯಾಣದಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಅನುಭವ ಮಂಟಪಕ್ಕೆ ಅಡಿಗಲ್ಲು ಹಾಕಿ ಹೋಗಿದ್ದಾರೆ. ಚುನಾವಣೆ ಇಲ್ಲದಿದ್ದರೆ ಅವರು ಅಗಿಡಲ್ಲು ಸಮಾರಂಭ ಮಾಡುತ್ತಿರಲಿಲ್ಲ. ಏಕೆಂದರೆ ಸರ್ಕಾರದ ಹತ್ತಿರ ದುಡ್ಡೇ ಇಲ್ಲ. ಖಜಾನೆ ಸಂಪೂರ್ಣ ಖಾಲಿಯಾಗಿದೆ. ಇದು ನಾನು ಹೇಳಿದ್ದಲ್ಲ ಸ್ವತಃ ಮುಖ್ಯಮಂತ್ರಿ ಹೇಳಿರುವ ಮಾತಾಗಿದೆ. ಹೀಗಾಗಿ 600 ಕೋಟಿ ರೂ. ಎಲ್ಲಿಂದ ತರುತ್ತಾರೆ?, ಇದು ಬಸವಕಲ್ಯಾಣದ ಜನತೆಗೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆಯೇ
ಹೊರತು ಪ್ರಾಮಾಣಿಕವಾಗಿ ಮಾಡಿರುವ ಕಾರ್ಯಕ್ರಮ ಇಲ್ಲ ಎಂದು ಇಲ್ಲಿನ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಅನುಭವ ಮಂಟಪ ಪುನರ್‌ ಸ್ಥಾಪನೆ ಮಾಡಬೇಕು ಎಂದು ನಾನು ಮುಖ್ಯಮಂತ್ರಿ ಇದ್ದಾಗ ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್‌ ಮತ್ತು ದಿ.ಬಿ. ನಾರಾಯಣರಾವ್‌ ಒತ್ತಡ ಹೇರಿದ್ದರು. ನಾನು ಮಾಡೋಣ ಎಂದು 2018ರಲ್ಲಿ ಘೋಷಣೆ ಮಾಡಿ ಸಾಹಿತಿ ಗೋ.ರು.ಚ. ಅಧ್ಯಕ್ಷರನ್ನಾಗಿ ಮಾಡಿ ಒಂದು ಸಮಿತಿ ರಚನೆ ಮಾಡಲಾಯಿತು. ನಂತರ ಸಮಿತಿ ಅಧ್ಯಯನ ಮಾಡಿ ಸುಮಾರು 600 ಕೋಟಿ ರೂ. ಆಯವ್ಯಯದ ವರದಿ ಮಾಡಿರುವುದು ಸಿದ್ದರಾಮಯ್ಯ
ಹೊರತು ಬಿಜೆಪಿ ಅವರಲ್ಲ ಎಂದರು.

ಚುನಾವಣೆ ಇದೆ ಎಂದು ಗುದ್ದಲ್ಲಿ ಪೂಜೆ ಮಾಡಿದ್ದರಲ್ಲ ಬಿಎಸ್‌ವೈ ಅವರೇ ಅನುಭವ ಮಂಟಪದ ಅಡಿಗಲ್ಲು ಸಮಾರಂಭದ ದಿವಸ ಕೊಟ್ಟಿರುವ ಜಾಹೀರಾತು ನೋಡಿದ್ದರೆ ವಿಶ್ವಗುರು ಬಸವಣ್ಣನವರ ಬಗ್ಗೆ ಮೂರು ಕಾಸಿನ ಕಾಳಜಿ ಇಲ್ಲವೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಜಾಹೀರಾತಿನಲ್ಲಿ ಸನಾತನ ಧರ್ಮದ ಮರುಸೃಷ್ಟಿ ಎಂದು ನೀಡಿದ್ದಾರೆ. ಇವರು ಯಾರು ಪರವಾಗಿ ಇದ್ದಾರೆ ಎನ್ನುವುದನ್ನು ತೀರ್ಮಾನ ಮಾಡಬೇಕು. ಸನಾತನ
ಧರ್ಮದ ವಿರುದ್ಧವೇ ಬಸವಣ್ಣವರು ಹೋರಾಟ ಮಾಡಿದ್ದರು. ಹೀಗಾಗಿ ಬಿಎಸ್‌ವೈ ಯಡಿಯೂರಪ್ಪನವರೇ ಬಸವಣ್ಣನವರು ಬೇಕು ಅಂದರೆ ಸನಾತನ ಧರ್ಮದ ವಿರೋಧ ಮಾಡಬೇಕು. ಬಸವಣ್ಣ, ಕನಕ, ಅಂಬೇಡ್ಕರ್‌ ಅವರು ಬದಲಾವಣೆಯಲ್ಲಿ ನಂಬಿಕೆ ಇಟ್ಟಿಕೊಂಡವರು. ಅದನ್ನು ಜನರಿಗೆ ತಿಳಿಸಬೇಕು. ಇಲ್ಲದಿದ್ದರೆ ಸನಾತನ ಧರ್ಮದ ಜನರಿಗೆ ದಾರಿ ತಪ್ಪಿಸುತ್ತಾರೆ ಎಂದರು.

Advertisement

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿದರು. ಸಮಿತಿ ಕಾರ್ಯಾಧ್ಯಕ್ಷ ಆನಂದ ದೇವರ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ರಾಜಶೇಖರ ಪಾಟೀಲ್‌, ರಹೀಂಖಾನ್‌, ವಿಧಾನ ಪರಿಷತ್‌ ಸದಸ್ಯರಾದ ವಿಜಯಸಿಂಗ್‌, ಡಾ| ಚಂದ್ರಶೇಖರ ಪಾಟೀಲ, ಹಿರಿಯ ನ್ಯಾಯವಾದಿಗಳಾದ ಮಹಿಮೂದ ಪ್ರಾಚಾ, ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನೀಲಕುಮಾರ  ರಗಟೆ, ನಗರಸಭೆ ಅಧ್ಯಕ್ಷೆ ನಾಯಿದಾ ಸುಲ್ತಾನಾ, ಮಾಜಿ ಶಾಸಕ ಎಂ.ಜಿ. ಮುಳೆ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೆ ಮೂಲಗೆ ಸೇರಿದಂತೆ ಇತರರು ಇದ್ದರು. ಮುಜಾಹಿದ್‌ ಪಾಶಾ ಖುರೇಶಿ ನಿರೂಪಿಸಿದರು. ಅರ್ಜುನ ಕನಕ ನಿರೂಪಿಸಿದರು. ಚಂದ್ರಕಾಂತ ಮೇತ್ರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next