Advertisement

ಟಿಪ್ಪು ಜಯಂತಿಗೆ ಬಿಎಸ್‌ವೈ ಇತಿಶ್ರೀ

09:57 AM Aug 01, 2019 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ, ತೀವ್ರ ವಿವಾದಿತ ಕಾರ್ಯಕ್ರಮ ಟಿಪ್ಪು ಜಯಂತಿಗೆ ಹಾಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇತಿಶ್ರೀ ಹಾಡಿದೆ.

Advertisement

ತೀವ್ರ ವಿವಾದಕ್ಕೊಳಗಾಗಿ ಒಂದು ವರ್ಗದಿಂದ ಆಕ್ಷೇಪಣೆಗೂ ಕಾರಣವಾಗಿದ್ದ ಟಿಪ್ಪು ಜಯಂತಿ ರದ್ದುಪಡಿಸುವ ಸಂಬಂಧ ಬಿಜೆಪಿ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಲೇ ಇತ್ತು. ಹೀಗಾಗಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ತಕ್ಷಣದಿಂದಲೇ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಅಧಿಕಾರಕ್ಕೆ ಬಂದ 24 ಗಂಟೆಗೊಳಗಾಗಿ ಟಿಪ್ಪು ಜಯಂತಿ ರದ್ದುಪಡಿಸುವುದಾಗಿ ಯಡಿಯೂರಪ್ಪ ಹಿಂದೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಬಹುಮತ ಪಡೆದ 24 ಗಂಟೆಗೊಳಗಾಗಿ ಈ ಆದೇಶ ಹೊರಬಿದ್ದಿದೆ. ಇದರ ಜತೆಗೆ, ಸೋಮವಾರವಷ್ಟೇ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸೇರಿ ಹಲವು ಶಾಸಕರು ಟಿಪ್ಪು ಜಯಂತಿ ರದ್ದುಗೊಳಿಸುವ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಕೊಡಗು ಜಿಲ್ಲೆಯ ಸಾಮರಸ್ಯಕ್ಕೆ ಟಿಪ್ಪು ಜಯಂತಿ ಮಾರಕವಾಗಿದ್ದು, ಅದನ್ನು ಮುಂದುವರೆಸಕೂಡದು ಎಂದು ಅವರು ಮನವಿ ಮಾಡಿದ್ದರು. ಹೀಗಾಗಿ ಮಂಗಳವಾರ ಸಂಪುಟ ಸಭೆಯಲ್ಲಿ ಟಿಪ್ಪು ಜಯಂತಿ ರದ್ದುಗೊಳಿಸುವ ತೀರ್ಮಾನವನ್ನು ಸಿಎಂ ಕೈಗೊಂಡರು. ಈ ಪ್ರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಆಚರಿಸುತ್ತಿರುವ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.

ಈ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದು, ಇದು ದುರುದ್ದೇಶದಿಂದ ಕೈಗೊಂಡಿರುವ ನಿರ್ಧಾರ. ಇದೊಂದು ದೊಡ್ಡ ಅಪರಾಧ ಎಂದಿದ್ದಾರೆ.

ಮಾಜಿ ಸಚಿವ ಜಮೀರ್‌ ಅಹಮದ್‌, ಸರ್ಕಾರ ರದ್ದು ಮಾಡಿದೆ ಎಂದು ಟಿಪ್ಪು ಜಯಂತಿ ನಿಲ್ಲಲ್ಲ ಎಂದು ಹೇಳಿದ್ದಾರೆ.

Advertisement

ಸಿದ್ದರಾಮಯ್ಯ ಸರ್ಕಾರ 2016ರಲ್ಲಿ ಅಧಿಕೃತವಾಗಿ ಟಿಪ್ಪು ಜಯಂತಿ ಆಚರಣೆಗೆ ತೀರ್ಮಾನಿಸಿದ ನಂತರ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಹಿಂದೂಪರ ಕಾರ್ಯಕರ್ತ ಕುಟ್ಟಪ್ಪ ಎಂಬವರು ಸಾವನ್ನಪ್ಪಿದ್ದರು. ಘಟನೆಯಿಂದಾಗಿ ಇಡೀ ಜಿಲ್ಲೆಯಲ್ಲಿ ಬಿಗು ವಿನ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದ ವಿವಿಧೆ ಡೆಯೂ ಪ್ರತಿಭಟನೆಗಳು ನಡೆದಿದ್ದವು.

ಜಯಂತಿಗೆ ಎಚ್‌ಡಿಕೆ ಗೈರು: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಟಿಪ್ಪು ಜಯಂತಿ ರದ್ದುಪಡಿಸುವ ಒತ್ತಾಯವಿತ್ತು. ಆದರೆ, ಸಿದ್ದರಾಮಯ್ಯ ಅವರು ಒಪ್ಪದ ಕಾರಣ ತೀರ್ಮಾನವಾಗಿರಲಿಲ್ಲ. ಕಳೆದ ವರ್ಷ ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರ ಸ್ವಾಮಿಯವರು ಗೈರು ಹಾಜರಾಗಿದ್ದರು.

ಟಿಪ್ಪು ಜಯಂತಿ ಆಚರಣೆಯಿಂದ ಹಿಂದೆಲ್ಲಾ ಆಗಿದ್ದ ಗಲಾಟೆ, ಪ್ರತಿಭಟನೆ ಪುನರಾವರ್ತನೆಯಾಗಬಾರದು ಎಂದು ಶಾಸಕರು ಮನವಿ ಮಾಡಿದ್ದರು. ಹೀಗಾಗಿ ಆಚರಣೆ ರದ್ದು ಮಾಡಲಾಗಿದೆ.
• ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಬಿಜೆಪಿ ಸರ್ಕಾರದ ಕ್ರಮ ಅಲ್ಪಸಂಖ್ಯಾತರ ವಿರುದ್ಧ ಹಾಗೂ ದ್ವೇಷದಿಂದ ಕೂಡಿದೆ. ಅವರಿಗೆ ಚರಿತ್ರೆಯೇ ಗೊತ್ತಿಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಾದ ಕಾರಣ ಈ ಆಚರಣೆಯನ್ನು ನಾವು ಆರಂಭಿಸಿದ್ದೆವು.
● ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
Advertisement

Udayavani is now on Telegram. Click here to join our channel and stay updated with the latest news.

Next