Advertisement

ರಾಜ್ಯದಲ್ಲಿ ಹಗಲು ಅಥವಾ ರಾತ್ರಿ ಕರ್ಫ್ಯೂ ಇಲ್ಲ : ಮಾಸ್ಕ್ ಕಡ್ಡಾಯ, ತಪ್ಪಿದರೆ ಕ್ರಮ ; BSY

07:09 PM Mar 17, 2021 | sudhir |

ಬೆಂಗಳೂರು: ರಾಜ್ಯದಲ್ಲಿ ಹಗಲು ಅಥವಾ ರಾತ್ರಿ ಕರ್ಫ್ಯೂ ಜಾರಿ ಪ್ರಸ್ತಾವನೆಯೇ ಇಲ್ಲ. ಸಾರ್ವಜನಿಕ ಸಭೆ-ಸಮಾರಂಭಗಳಿಗೂ ಯಾವುದೇ ಅಡ್ಡಿ ಆತಂಕವೂ ಇಲ್ಲ. ಆದರೆ, ಮಾಸ್ಕ್ ಧರಿಸುವುದು ಹಾಗೂ ಭೌತಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

ಕೊರೊನಾ ಎರಡನೇ ಅಲೆ ಆತಂಕ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜತೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಭಯ ಅಥವಾ ಆತಂಕ ಬೇಡ. ಮುನ್ನಚ್ಚರಿಕೆ ಕ್ರಮಗಳ ಮೂಲಕ ಪರಿಸ್ಥಿತಿ ನಿಭಾಯಿಸಲಾಗುವುದು. ಸಭಾಂಗಣ ಸೇರಿ ನಾಲ್ಕು ಗೋಡೆಯ ನಡುವೆ ನಡೆಯುವ ಕಾರ್ಯಕ್ರಮಗಳಲ್ಲಿ ನಿಯಮ ಪಾಲಿಸಬೇಕು ಎಂದು ತಿಳಿಸಿದರು.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆಂಗಳೂರು ನಗರ, ಬೀದರ್‌ ಹಾಗೂ ಕಲಬುರಗಿಯಲ್ಲಿ ವಿಶೇಷ ನಿಗಾ ವಹಿಸುವಂತೆ ಪ್ರಧಾನಿಯವರು ಸೂಚಿಸಿದ್ದಾರೆ. ಅಲ್ಲಿ ತಪಾಸಭೆ, ಚಿಕಿತ್ಸೆ, ಲಸಿಕೆ ಅಭಿಯಾನಕ್ಕೆ ಒತ್ತು ಸೇರಿ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಅಗತ್ಯ ಇರುವ ಕಡೆ ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗುವುದು. ಬೆಂಗಳೂರಿನಲ್ಲಿ ಮೂರು ಕೋವಿಡ್‌ ಕೇರ್‌ ಕೇಂದ್ರ ತೆರೆಯಲಾಗುವುದು ರಾಜ್ಯದಲ್ಲಿರುವ 3500 ಕ್ಕೂ ಹೆಚ್ಚಿನ ಲಸಿಕಾ ಕೇಂದ್ರಗಳಲ್ಲಿ ಅಭಿಯಾನ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ :ಗಿನ್ನಿಸ್ ದಾಖಲೆಯಲ್ಲಿ ಹೆಸರನ್ನು ಗಿಟ್ಟಿಸಿಕೊಂಡ ಬೆಂಗಳೂರು ಪೋರ

Advertisement

ಪ್ರಧಾನಿಯವರು ಸಹ ಜನರಲ್ಲಿ ಭಯ ಸೃಷ್ಟಿಸಬಾರದು ಎಂದು ತಿಳಿಸಿದ್ದಾರೆ. ರಾಜ್ಯಕ್ಕೆ ಅವಶ್ಯಕತೆ ಇರುವಷ್ಟು ಲಸಿಕೆ ಪೂರೈಸುವುದಾಗಿಯೂ ತಿಳಿಸಿದ್ದಾರೆ. ಈಗಾಗಲೇ ಬಂದಿರುವ ಲಸಿಕೆ ಮೊದಲು ಬಳಕೆ ಮಾಡಬೇಕು. ನಂತರ ಹೊಸದಾಗಿ ಬಂದಿರುವ ಲಸಿಕೆ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ ಎಂದರು.

ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಆದರೆ ವೈರಸ್‌ ಸಾಯುವುದಿಲ್ಲ. ರಾಜ್ಯದಲ್ಲಿ ಕಳೆದ ಹತ್ತು ದಿನಗಳಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರು ಗತಿಯಲ್ಲಿದ್ದು ಪಾಸಿಟಿವಿಟಿ ದರ ಮಾರ್ಚ್‌ 15 ರಂದು ಶೇ.1.65 ರಷ್ಟು ವರದಿಯಾಗಿದೆ. ಪ್ರಕರಣಗಳ ಸಂಖ್ಯೆಯು ಬೆಂಗಳೂರು, ಮಹಾರಾಷ್ಟ್ರ ಮತ್ತು ಕೇರಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಇಲ್ಲಿ ಪರೀಕ್ಷಾ ಪ್ರಮಾಣ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಪ್ರತಿ ದಿನ ಮೂರು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಲಸಿಕೆ ಅಭಿಯಾನಕ್ಕೆ ಗುರುತಿಸಿರುವ 2042 ಆಸ್ಪತ್ರೆಗಳ ಪೈಕಿ 1439 ಆಸ್ಪತ್ರೆಗಳಲ್ಲಿ ಇನ್ನೂ ಲಸಿಕೆ ಅಭಿಯಾನ ಆರಂಭಿಸಿಲ್ಲ. ತಕ್ಷಣ ಆರಂಭಿಸುವಂತೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ :ಕಾಸರಗೋಡು : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ

ಟೆಸ್ಟ್‌, ಟ್ರೇಸ್‌, ಟ್ರೀಟ್‌ ಸೂತ್ರ ಅನುಸರಿಲಾಗುವುದು. ರಾಜ್ಯದಲ್ಲಿ ಶೇ.93 ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿರುವುದಕ್ಕೆ ಕೇಂದ್ರದ ಗೃಹ ಸಚಿವರು ಮೆಚ್ಚುಗೆ ಸೂಚಿಸಿದಾರೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೇರಿ ಹಿರಿಯ ಆಧಿಕಾರಿಗಳು ಪಾಲ್ಗೊಂಡಿದ್ದರು.

ಕ್ರಮ ಆನಿವಾರ್ಯ
ಮಾಸ್ಕ್ ಕಡ್ಡಾಯ. ಆದರೆ, ಜನತೆ ಖುಷಿ ಬಂದಂತೆ ವರ್ತಿಸಿ ಮಾಸ್ಕ್ ಹಾಕಿಕೊಳ್ಳದಿದ್ದರೆ ಕ್ರಮ ಅನಿವಾರ್ಯ. ಶೇ.50 ರಷ್ಟು ಜನರಿಗೆ ಮಾಸ್ಕ್ ಹಾಕುವುದು ಮರತೇ ಹೋಗಿದೆ. ಹೀಗಾಗಿ, ಪೊಲೀಸರಿಗೆ ಮತ್ತಷ್ಟು ಕೆಲಸ ಬಿದ್ದಿದೆ. ದಂಡ ಹಾಕೋದು ಆಮೇಲೆ, ಮೊದಲು ಜಾಗೃತಿ ಮೂಡಿಸುತ್ತೇವೆ. ಮಿತಿ ಮೀರಿದರೆ ಕ್ರಮ ಅನಿವಾರ್ಯ. ಸಿನಿಮಾ, ಹೋಟೆಲ್‌ ಎಲ್ಲೆಡೆ ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು.
– ಬಿ.ಎಸ್‌.ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next