Advertisement

ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಟಾಪ್‌ 3 ರಾಜ್ಯಗಳಲ್ಲಿ ಒಂದಾಗಬೇಕು: ಬಿ.ಎಸ್‌.ಯಡಿಯೂರಪ್ಪ

08:26 PM Dec 28, 2020 | sudhir |

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ದೇಶದ ಟಾಪ್‌ 3 ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಬೇಕು ಎಂಬ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆರೋಗ್ಯ ಸೌಧ ಕಟ್ಟಡ ಉದ್ಘಾಟಸಿ ಅವರು ಮಾತನಾಡಿದರು.

ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ ಆಧಾರದಲ್ಲಿ ಕರ್ನಾಟಕ ನೂರರಲ್ಲಿ 66 ಅಂಕಗಳಿಸಿ 6ನೇ ಶ್ರೇಯಾಂಕದಲ್ಲಿದೆ. ಈ ಶ್ರೇಯಾಂಕ ಸುಧಾರಿಸಿ ನೀತಿ ಆಯೋಗ ನಿಗದಿ ಪಡಿಸಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಮೂಲಕ ದೇಶದ ಮೊದಲ ಮೂರು ಸ್ಥಾನಗಳಲ್ಲಿ ರಾಜ್ಯ ಕೂಡ ಒಂದಾಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದರು.

ಆರೋಗ್ಯ ಇಲಾಖೆಯ ಎಲ್ಲಾ ಕಚೇರಿಗಳು ಒಂದೇ ಸೂರಿನಲ್ಲಿ ಇರಲಿ ಎಂಬ ಉದ್ದೇಶದಿಂದ ಸರ್ಕಾರ 238 ಕೋಟಿ ರೂ. ವೆಚ್ಚ ಮಾಡಿ ಎರಡು ಹಂತಗಳಲ್ಲಿ ಕಟ್ಟಡ ನಿರ್ಮಾಣ ಮಾಡಿದೆ. ಆರೋಗ್ಯ ಇಲಾಖೆಯ 53 ಕಚೇರಿಗಳು ಈ ಸೌಧದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಇದನ್ನೂ ಓದಿ:ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆ ಸಂಭ್ರಮ

Advertisement

ರಾಜ್ಯದ ಎಲ್ಲಾ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ದೊರೆಯಬೇಕು ಎಂಬುವುದು ಸರ್ಕಾರದ ಆಶಯವಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಭಾರತ ಯೋಜನೆಯಡಿಯಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ: ರಾಜ್ಯದಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ 1500 ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಪ್ರಾರಂಭ ಮಾಡಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕಾಗಿ ಮುಂದಿನ ಆಯುವ್ಯಯದಲ್ಲಿ ಅನುದಾನ ಮೀಸಲಿಡಲು ಸರ್ಕಾರ ತೀರ್ಮಾನಿಸಿದೆ. ರಾಜ್ಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡಗಳು ಮತ್ತು ಸಿಬ್ಬಂದಿಗಳು ಅಗತ್ಯವಿದ್ದು ಈ ಬಗ್ಗೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.

ಎಂಬಿಬಿಎಸ್‌ ಪೂರೈಸಿದ ಎಲ್ಲಾ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಜನರ ಸೇವೆ ಮಾಡುವ ಮೂಲಕ ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು. ಆಸ್ಪತ್ರೆಗೆ ಬಂದ ರೋಗಿಗಳನ್ನು ಸಿಬ್ಬಂದಿಗಳು ತಮ್ಮ ಮನೆ ಮಕ್ಕಳ ರೀತಿಯಲ್ಲಿ ಆರೈಕೆ ಮಾಡಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ
ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ಆರೋಗ್ಯಕರ ಸಮಾಜದಿಂದ ದೇಶದ ಪ್ರಗತಿ ಸಾಧ್ಯ. ಆ ಹಿನ್ನೆಲೆಯಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ಸರ್ಕಾರದ ವೈದ್ಯಕೀಯ ಕಾಲೇಜುಗಳಿದ್ದು ಮುಂದಿನ ಹಂತದಲ್ಲಿ 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುವುದು ಎಂದರು.
ಕೊರೊನೊ ವೇಳೆ ವೈದ್ಯರು ಮತ್ತು ಆರೋಗ್ಯಕ್ಷೇತ್ರದ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ.ಆ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಭತ್ಯಯನ್ನು ನೀಡಲು ಸರ್ಕಾರ 125 ಕೋಟಿ ರೂ.ಮೀಸಲಿಡುವ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು. ಆರೋಗ್ಯ ವಿಚಾರದಲ್ಲಿ ಕೇರಳ ಮತ್ತು ತಮಿಳುನಾಡುಗಳನ್ನು ಮಾದರಿಯಾಗಿ ತೆಗೆದು ಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಕೂಡ ಇಂಡಿಯಾ ಮಾಡೆಲ್‌ ಆಗಬೇಕು ಎಂಬುವುದು ಸರ್ಕಾರದ ಆಶಯವಾಗಿದೆ ಎಂದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next