Advertisement

ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠೆ ವೇಳೆ ಪೇಜಾವರ ಶ್ರೀಗಳ ಜತೆಗಿದ್ದೆ :ಬಿಎಸ್‌ವೈ

09:12 PM Dec 24, 2020 | sudhir |

ಉಡುಪಿ : ಅಯೋಧ್ಯೆಯಲ್ಲಿ 1992ರ ಡಿ. 6ರಂದು ವಿವಾದಿತ ಕಟ್ಟಡ ಧ್ವಂಸಗೊಂಡ ಬಳಿಕ ಅದೇ ಜಾಗದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿ ಕರಸೇವಕರ ಸಮ್ಮುಖ ರಾಮಲಲ್ಲಾ ವಿಗ್ರಹವನ್ನು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪ್ರತಿಷ್ಠೆ ಮಾಡಿದ ಸಂದರ್ಭ ನಾನೂ ಅಲ್ಲಿದ್ದು ಅದಕ್ಕೆ ಸಾಕ್ಷಿಯಾದದ್ದು ನನ್ನ ಈ ಜನ್ಮದ ಮಹಾಭಾಗ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಹೇಳಿದ್ದಾರೆ.

Advertisement

ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 82ನೇ ಸನ್ಯಾಸ ಪೀಠಾರೋಹಣ ವರ್ಧಂತಿ ಸಂಸ್ಮರಣಾರ್ಥ ಬೆಂಗಳೂರು ಕತ್ರಿಗುಪ್ಪೆಯ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಶ್ರೀಗಳ ವೃಂದಾವನ ಸನ್ನಿಧಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು .

8ನೇ ವರ್ಷ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ 80 ವರ್ಷಗಳ ಸುದೀರ್ಘ‌ ಅವಧಿಗೆ ವೇದಾಂತ ಸಾಮ್ರಾಜ್ಯವನ್ನು ಪರಿಶುದ್ಧ ಚಾರಿತ್ರ್ಯ, ಕಠಿನ ತಪಸ್ಸು, ಸ್ವಾಧ್ಯಾಯ, ವಿದ್ವತ್ತು ಹಾಗೂ ಮಾನವೀಯ ಕಳಕಳಿಯ ಅಸಂಖ್ಯ ಸೇವಾಕಾರ್ಯಗಳಿಂದ ಯಶಸ್ವಿಯಾಗಿ ಮುನ್ನಡೆಸಿ ಕೋಟ್ಯಂತರ ಭಕ್ತರ ಶ್ರದ್ಧೆ ನಂಬಿಕೆಗೆ ಪಾತ್ರರಾದ ಶ್ರೀ ವಿಶ್ವೇಶತೀರ್ಥರು ಈ ದೇಶ ಕಂಡ ಮಹಾನ್‌ ಯೋಗಿ, ಸಾಧಕ ಯತಿ ಎಂದು ಅವರು ಬಣ್ಣಿಸಿದರು.

ಇದನ್ನೂ ಓದಿ:ಉತ್ತರ ಒಡಿಶಾ ವಿಶ್ವವಿದ್ಯಾಲಕ್ಕೆ ಮಹಾರಾಜ ಭಂಜ್‌ ದೇವರ ಹೆಸರು

ಶ್ರೀಪಾದರ ನೂತನ ವೃಂದಾವನ ದರ್ಶನ ಪಡೆದ ಅವರು ಮಂಗಳಾರತಿಯನ್ನು ವೀಕ್ಷಿಸಿ ಭಕ್ತಿ ಸಮರ್ಪಣೆಗೈದರು.
ಶ್ರೀವಿಶ್ವಪ್ರಸನ್ನತೀರ್ಥರು ಮಾತನಾಡಿ ಗುರುಗಳೊಂದಿಗೆ ಯಡಿಯೂರಪ್ಪನವರಿಗಿದ್ದ ಸುದೀರ್ಘ‌ ಒಡನಾಟ, ಬಾಂಧವ್ಯ, ರಾಮಜನ್ಮಭೂಮಿ ಆಂದೋಲನದಲ್ಲಿ ಅವರಿಬ್ಬರೂ ಜತೆಯಾಗಿ ಭಾಗವಹಿಸಿದ್ದು ಮತ್ತು ಅಧಿಕಾರದಲ್ಲಿದ್ದಾಗಲೆಲ್ಲ ಉಡುಪಿಯ ಅಭಿವೃದ್ಧಿಗೆ ಹಾಗೂ ಉಡುಪಿ ಮಠಗಳಿಗೆ ವಿಶೇಷ ಸಹಕಾರ ನೀಡಿದ್ದನ್ನು ಸ್ಮರಿಸಿಕೊಂಡರು. ಈ ವೇಳೆ ರಾಮಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಕೋರಿದ ಪತ್ರವನ್ನು ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.

Advertisement

ಇತ್ತೀಚೆಗಷ್ಟೇ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನಿಗೆ ಶಾಸನಸಭೆಯಲ್ಲಿ ಅಂಗೀಕಾರ ಪಡೆದು ಕೋಟ್ಯಂತರ ಹಿಂದೂಗಳ, ಗೋಪ್ರೇಮಿಗಳ ಆಗ್ರಹಕ್ಕೆ ಮನ್ನಣೆ ನೀಡಿರುವುದಕ್ಕೆ ಅಭಿನಂದಿಸಿದರು. ಶಾಸಕರಾದ ರವಿಸುಬ್ರಹ್ಮಣ್ಯ, ಕೆ. ರಘುಪತಿ ಭಟ್‌ ಉಪಸ್ಥಿತರಿದ್ದರು. ವಿದ್ವಾನ್‌ ಪ್ರಭಂಜನಾಚಾರ್ಯ ಪ್ರಸ್ತಾವನೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next