Advertisement

ದೇಶದ ಮೊದಲ ಆಟಿಕೆ ಕ್ಲಸ್ಟರ್‌ಗೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ

04:54 PM Jan 09, 2021 | Team Udayavani |

ಕೊಪ್ಪಳ: ಕುಕನೂರು ತಾಲೂಕಿನ ಭಾನಾಪೂರ ಬಳಿ 400 ಎಕರೆಯಲ್ಲಿ ಆರಂಭಗೊಳ್ಳಲಿರುವ ದೇಶದ ಮೊದಲ ಆಟಿಕೆ ಹಬ್‌ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಮಾರಂಭದಲ್ಲಿ ಆರು
ದೇಶ ವಿದೇಶಿ ಕಂಪನಿಗಳೊಂದಿಗೆ ಆಟಿಕೆ ಸಾಮಗ್ರಿಗಳ ಉತ್ಪಾದನೆಗೆ ಒಡಂಬಡಿಕೆ ಮಾಡಿಕೊಳ್ಳುವ ಪ್ರಕ್ರಿಯೆ ಜರುಗಿತು.

Advertisement

ಬಳಿಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ದೇಶದ ಆಟಿಕೆ ಕ್ಲಸ್ಟರ್ ಶಂಕುಸ್ಥಾಪನೆ ಮಾಡಿ. ಕಿನ್ನಾಳದ ಪಾರಂಪರಿಕ ಆಟಿಕೆಗೆ ಹೆಸರಾದ ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆಯ ಕ್ಲಸ್ಟರ್ ಶಂಕುಸ್ಥಾಪನೆ ನೆರವೇರುತ್ತಿರುವುದು ಸಂಭ್ರಮದ ಸಂಗತಿ. ಏಕಸ್ ಸಂಸ್ಥೆಯ ಅರವಿಂದ್ ಮೆಳ್ಳಿಗೇರಿ ಕ್ಲಸ್ಟರ್ ಅಭಿವೃದ್ಧಿಪಡಿ ಪಣ ತೊಟ್ಟಿದ್ದು, ಕರ್ನಾಟಕದವರಾಗಿದ್ದಾರೆ. ಇದೇ ವರ್ಷದಲ್ಲಿ ಕ್ಲಸ್ಟರ್ ಕಾರ್ಯಾರಂಭಗೊಳ್ಳುವ ಭರವಸೆಯಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕ್ಲಸ್ಟರ್ ಗಮನ ಸೆಳೆಯಲಿದೆ. ಒಂದು ವರ್ಷದಲ್ಲಿ ಘಟಕ ಕಾರ್ಯಾರಂಭ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನೆ ಕೊಪ್ಪಳಕ್ಕೆ ಕರೆ ತಂದು ಉದ್ಘಾಟನೆಗೊಳಿಸಲಾಗುವುದು ಎಂದರು.

ಮುಂದಿನ ವರ್ಷಗಳಲ್ಲಿ ಕ್ಲಸ್ಟರ್ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. 25 ಸಾವಿರ ಜನತೆಗೆ ನೇರವಾಗಿ ಉದ್ಯೋಗ ಸಿಗಲಿದೆ. ಪರೋಕ್ಷವಾಗಿ 1 ಲಕ್ಷ ಜನತೆ ಉದ್ಯೋಗ ದೊರೆತಂತಾಗಲಿದೆ. ಅದರಲ್ಲೂ ಮಹಿಳೆಯರಿಗೆ ಇಲ್ಲಿ ಕೆಲಸ ದೊರೆಯಲಿದೆ. ಈ ಭಾಗದ ಮಹಿಳೆಯರಿಗೆ ಉದ್ಯೋಗ ಸಿಗುವ ಭರವಸೆ ನಾನು ಕೊಡುವೆ ಎಂದರು.

ಭೂ ಸ್ವಾಧೀನಕ್ಕೆ ಇದ್ದ ತೊಡಕನ್ನು ನಿವಾರಿಸಿದ್ದೇವೆ. ಹೊಸದಾಗಿ ಕೃಷಿಯನ್ನು ಉದ್ಯೋಗವನ್ನಾಗಿ ಸ್ವೀಕರಿಸುವ ಆಸಕ್ತರಿಗೆ
ಕೃಷಿ ಭೂಮಿ ಖರೀದಿಸಬಹುದು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಉದ್ಯಮ ಪ್ರಸ್ತಾಪಿತಗಳಿಗೆ ತ್ವರಿತ ಅನುಮೋದನೆ ನೀಡುತ್ತಿರುವುದರಿಂದ ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಯಾಗಿವೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯ ವಾತಾವರಣವು ಸೃಷ್ಟಿಯಾಗುತ್ತಿದೆ.

Advertisement

2-3 ಹಂತದಲ್ಲಿ ನಗರದಲ್ಲಿ ಕೈಗಾರಿಕೆ :
ಹೊಸ ಕೈಗಾರಿಕೆ ನೀತಿಯಡಿ 2,3ನೇ ಹಂತದ ನಗರದಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆಯನ್ನು ನೀಡಿದ್ದೇವೆ. ಬೆಂಗಳೂರು ಕೇಂದ್ರಿತ ಕೈಗಾರಿಕೆಗಳ ಸ್ಥಾಪನೆ ತಪ್ಪಿಸಲು ರಾಜ್ಯದಲ್ಲಿ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿ, ವಲಯ ನಿರ್ದಿಷ್ಟ ಕ್ಲಸ್ಟರ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಹುಬಳ್ಳಿ-ಧಾರವಾಡದಲ್ಲಿ ಕೈಗಾರಿಕೆ, ಯಾದಗಿರಿ ಜಿಲ್ಲೆಯಲ್ಲಿ ಫಾರಂ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗುತ್ತಿದೆ. ಕೈಗಾರಿಕೆ ಸ್ಥಾಪನೆಯಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದ್ದು, ಈ ಭಾಗದ ಜನರು ಗುಳೆ ಹೋಗುವುದನ್ನು ತಗ್ಗಿಸಲು ಈ ಕಾರ್ಯಕ್ಕೆ ಮುಂದಾಗಿದೆ. ಔದ್ಯೋಗಿಕವಾಗಿ ಕರ್ನಾಟಕವನ್ನು ವಿಶ್ವದರ್ಜೆಯಡಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರವು ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್‌ನಡಿ 1700 ಕೋಟಿ ರೂ. ಮೀಸಲಿಟ್ಟಿದೆ. ಇದರಿಂದ 88500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next