Advertisement
ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದ ಸಂದರ್ಭದಲ್ಲಿ, ಜನವರಿ 22 ರಂದು ಏರ್ಪಡಿಸಿದ್ದ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನವೆಂಬರ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಉದ್ಯಮಿಗಳು ಹಾಗೂ ಹೂಡಿಕೆದಾರರಲ್ಲಿ ಮನವಿ ಮಾಡಿದರು. ಕೈಗಾರಿಕೋದ್ಯಮ ವಲಯದ ಪ್ರಮುಖರೆಲ್ಲರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Related Articles
Advertisement
ಉದ್ಯಮ ವಲಯದ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ಬೆಂಗಳೂರಿನಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಫೆಬ್ರುವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಸ್ಥಿರ ಉತ್ಪಾದನಾ ವಲಯ ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಎರಡು ಹಾಗೂ ಮೂರನೇ ಹಂತದ ನಗರಗಳಿಗೆ ಸಂಪರ್ಕವನ್ನು ಸುಧಾರಿಸಲಾಗಿದೆ; ಭೂ ಬ್ಯಾಂಕ್ ಸೃಷ್ಟಿಸಲಾಗಿದೆ. ಆ ಮೂಲಕ ಕರ್ನಾಟಕದ ಬೆಳವಣಿಯ ವೇಗ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ನುಡಿದರು.
ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯವು ಉತ್ಪನ್ನ ಆಧಾರಿತ ಕೈಗಾರಿಕಾ ಕ್ಲಸ್ಟರುಗಳ ಅಭಿವೃದ್ಧಿಗೆ ಕ್ರಮ ವಹಿಸುತ್ತಿದೆ. ಆ ಮೂಲಕ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಅವರು ಮಾತನಾಡಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ, ಆ ಮೂಲಕ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯಾಗಿ ರೂಪಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ .ಕನಸನ್ನು ನನಸಾಗಿಸುವಂತೆ ಉದ್ಯಮಿಗಳಿಗೆ ಮನವಿ ಮಾಡಿದರು. “ನೀವು ನಿಮ್ಮ ಉದ್ಯಮವನ್ನು ಭಾರತದ ಎಲ್ಲ ಭಾಗಗಳಲ್ಲಿ ವಿಸ್ತರಿಸಿ, ವಿಶೇಷವಾಗಿ ಕೈಗಾರಿಕೆಗಳಿಗೆ ಪೂರಕ ವಾತಾವರಣವಿರುವ ಕರ್ನಾಟಕದಲ್ಲಿ” ಎಂದು ಅವರು ನುಡಿದರು.
ಸಿಐಐ ಅಧ್ಯಕ್ಷ ಹಾಗೂ ಟಯೊಟಾ ಕಿರ್ಲೋಸ್ಕರ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಕಿರ್ಲೋಸ್ಕರ್ ಅವರು ಮಾತನಾಡಿದರು. ಮಹೀಂದ್ರ ಗ್ರೂಪ್ ನ ಆನಂದ್ ಮಹೀಂದ್ರ, ಭಾರತ್ ಫೋರ್ಜ್ ನ ಬಾಬಾ ಕಲ್ಯಾಣಿ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸಹ ಉಪಸ್ಥಿತರಿದ್ದರು.
ಸಭೆಗೆ ಮುನ್ನ ಕರ್ನಾಟಕದ ಕೈಗಾರಿಕೆಗಳ ಒಟ್ಟಾರೆ ಸ್ಥಿತಿಗತಿ ಮತ್ತು ಕರ್ನಾಟಕದ ಆರ್ಥಿಕತೆ ಹಾಗೂ ಹೆಚ್ಚಿನ ಹೂಡಿಕೆಯ ಹೊಣೆಗಾರಿಕೆಯನ್ನು ನಿಭಾಯಿಸಲು ಸರ್ಕಾರದ ಪೂರ್ವಸಿದ್ಧತೆಯ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಕರ್ನಾಟಕ ರಾಜ್ಯ ಮಾತ್ರ ಹೂಡಿಕೆದಾರರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುವ ಬದಲು ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕರ್ಟನ್ ರೈಸರ್ ಕಾರ್ಯಕ್ರಮದಿಂದಾಗಿ ಹೂಡಿಕೆದಾರರು, ರಾಜ್ಯದಲ್ಲಿ ಹೂಡಿಕೆ ಮಾಡುವ ಕುರಿತು ಸಿದ್ಧತೆ ನಡೆಸಿಕೊಂಡು, ಸಮಾವೇಶದಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಅಭಿಪ್ರಾಯಪಟ್ಟರು.