Advertisement

ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಸಾಫ್ಟ್ ಆಗಿದ್ದ ಬಿಎಸ್‌ವೈ

03:17 PM Jul 27, 2019 | Sriram |

ಬೆಂಗಳೂರು: ರಾಜಕೀಯವಾಗಿ ಕಾಂಗ್ರೆಸ್‌ ವಿರುದ್ಧವೂ ಬಿ.ಎಸ್‌.ಯಡಿಯೂರಪ್ಪ ಅವರು ಗುಡುಗುತ್ತಿದ್ದರಾದರೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಬಗ್ಗೆ ತೀರಾ ಕಳೆದ ವಿಧಾನಸಭೆ ಚುನಾವಣೆ ಅನಂತರ ಸ್ವಲ್ಪ ಸಾಫ್ಟ್ ಆಗಿದ್ದರು.

Advertisement

ಕಳೆದ ವರ್ಷ ವಿಧಾನಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ವಿಶ್ವಾಸಮತ ಸಂದರ್ಭದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯನ್ನು ಟೀಕಿಸಿದ್ದ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರನ್ನು ಕುರಿತು ನಿಮ್ಮ ಶ್ರಮದಿಂದ ಕಾಂಗ್ರೆಸ್‌ಗೆ ಇಷ್ಟು ಸೀಟು ಬಂದಿದೆ. ಚುನಾವಣ ಪ್ರಚಾರ ಸಭೆಗಳಲ್ಲಿ ರಾಹುಲ್ ಬಂದಾಗ ಅವರು ಮಾತನಾಡಿದ ಅನಂತರ ನೀವು ಮಾತನಾಡುತ್ತಿದ್ದೀರಿ. ನಿಮಗೆ ಏನು ಗೌರವ, ಬೆಲೆ? ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನೀವು ಯಾವುದೋ ಮೂಲೆಯಲ್ಲಿದ್ದಿರಿ. ನಾಡಿನ ಆರೂವರೆ ಕೋಟಿ ಜನ ಇದನ್ನು ಗಮನಿಸುವುದಿಲ್ಲವಾ? ಆ ಸಮುದಾಯದವರು ನೋಡಿಲ್ಲವಾ? ಎಂದು ಹೇಳಿದ್ದರು.

ಸಿದ್ದರಾಮಯ್ಯ ಅವರೇ, ನಿಮ್ಮ ವಿರುದ್ದ ಜಿ.ಟಿ. ದೇವೇಗೌಡರನ್ನು ಕಣಕ್ಕಿಳಿಸಿ ಬೇಕೆಂದೇ ಸೋಲಿಸಿದರು. ನಿಮಗೆ ತೊಂದರೆ ಕೊಟ್ಟರು. ಸಿದ್ದರಾಮಯ್ಯ ಅವರೇ ನಿಮ್ಮನ್ನು ನಾನು ಹೊಗಳಿ ಲಾಭ ಮಾಡಿಕೊಳ್ಳುವಂತದ್ದು ಏನೂ ಇಲ್ಲ ಎಂದು ಹೇಳಿದ್ದರು. ಆಗ ಯಡಿಯೂರಪ್ಪ ಅವರು, ನಾನು ಇನ್ನು ಮುಂದೆ ಯಾವುದೇ ಕಾಂಗ್ರೆಸ್‌ ನಾಯಕರ ವಿರುದ್ಧ ಟೀಕೆ ಮಾಡುವುದಿಲ್ಲ ಎಂದಿದ್ದರು.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಇದ್ದಾಗ ಡಿ.ಕೆ.ಶಿವಕುಮಾರ್‌ ಅವರ ನಿವಾಸಕ್ಕೆ ತಮ್ಮ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಿವಮೊಗ್ಗ ಬಿಜೆಪಿ ನಾಯಕರ ನಿಯೋಗ ಕರೆದುಕೊಂಡು ಬಂದು ನೀರಾವರಿ ಯೋಜನೆಗಳಿಗೆ ಅನುದಾನ ಕೋರಿದ್ದರು.

ಡಿಕೆಶಿಗೂ ನಿಕಟ
ಡಿ.ಕೆ.ಶಿವಕುಮಾರ್‌ ಅವರನ್ನು ಕುರಿತು ಒಂದು ಹಂತದಲ್ಲಿ ಜೆಡಿಎಸ್‌ ಜತೆ ಸರಕಾರ ಮಾಡಲು ಶ್ರಮ ಹಾಕಿ ಖಳನಾಯಕರಾಗಿದ್ದೀರಿ ಎಂದರು. ಆಗ ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿ ನಾನು ನನ್ನ ಪಕ್ಷ ವಹಿಸಿದ ಕೆಲಸ ಮಾಡಿದ್ದೇನೆ ಎಂದರು. ಆಗ ಯಡಿಯೂರಪ್ಪ ಅವರು, ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿರುವ ನಿನ್ನನ್ನು ನಾನು ಖಳನಾಯಕ ಅಂತೀನಾ? ಅಲ್ಲಿದ್ದರೆ (ಕಾಂಗ್ರೆಸ್‌) ನೀವು ಮುಖ್ಯಮಂತ್ರಿ ಆಗ್ತೀರಾ ಎಂದು ಕಿಚಾಯಿಸಿದ್ದರು. ಡಿ.ಕೆ.ಶಿವಕುಮಾರ್‌ ಅವರು ಸಹ ನನಗೂ ಯಡಿಯೂರಪ್ಪ ಆವರಿಗೆ ಇರುವ ವೈಯಕ್ತಿಕ ಸಂಬಂಧ ಬೇರೆ ಎಂದೂ ಹೇಳಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next