Advertisement

ಆಪರೇಷನ್‌ ಗೋಜಲು​​​​​​​

12:30 AM Jan 15, 2019 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ “ಆಪರೇಷನ್‌ ಗೋಜಲು’ ಗುಮ್ಮ ಮುಂದುವರಿದಿದ್ದು, ಯಾರು ಯಾರನ್ನು “ಆಪರೇಷನ್‌’ ಮಾಡುತ್ತಿದ್ದಾರೆ ಎಂಬುದೇ ತಿಳಿಯದಂಥ ಸನ್ನಿವೇಶ ಸೃಷ್ಟಿಯಾಗಿದೆ. 

Advertisement

ನಮ್ಮ ಎಲ್ಲ ಶಾಸಕರು ನಮ್ಮಲ್ಲೇ ಇದ್ದಾರೆ, ಎಲ್ಲಿಗೂ ಹೋಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರೆ, ಬಿಜೆಪಿಯ ಶಾಸಕರಿಗೆ ಮೈತ್ರಿ ಸರಕಾರವೇ ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡುತ್ತಿದೆ ಎಂದು ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದ್ದಾರೆ. ಇದರ ನಡುವೆ  ನಮಗೂ “ಆಪರೇಷನ್‌’ ಮಾಡಲು ಗೊತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ದಶಕದ ಬಳಿಕ “ಆಪರೇಷನ್‌’ ಮತ್ತೆ ಪ್ರತಿಧ್ವನಿಸಿದ್ದು, ಮೈತ್ರಿ ಸರಕಾರದ ಪಕ್ಷಗಳಲ್ಲೂ ತಲ್ಲಣ ಸೃಷ್ಟಿಸಿದೆ. ಒಟ್ಟಾರೆ ಮೂರು ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಸಂಕ್ರಾಂತಿಯ “ಕ್ರಾಂತಿ’ ಅಯೋಮಯವಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಮೂರ್ನಾಲ್ಕು ದಿನಗಳಿಂದ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದ 90 ಮಂದಿ ಬಿಜೆಪಿ ಶಾಸಕರು ಸೋಮವಾರ ಸಂಜೆ ಗುರುಗ್ರಾಮಕ್ಕೆ ತೆರಳಿದ್ದಾರೆ. ದಿಲ್ಲಿಯಿಂದ ಗುರು ಗ್ರಾಮಕ್ಕೆ ಏಕೆ ವಾಸ್ತವ್ಯ ಬದಲಿಸಿದ್ದಾರೆ ಎಂಬುದೇ ನಿಗೂಢವಾಗಿದ್ದು,  ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನೂ 2-3 ದಿನ ಬಿಜೆಪಿ ಶಾಸಕರೆಲ್ಲರೂ ಗುರು ಗ್ರಾಮದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ನಿಂದಲೇ ಆಪರೇಷನ್‌
ದಿಲ್ಲಿಯಲ್ಲಿ  ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, “ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟಕ್ಕೆ ಬಹು ಮತವಿದ್ದರೂ ಆ ಪಕ್ಷಗಳ ನಾಯಕರು ಬಿಜೆಪಿಯ ಶಾಸಕರನ್ನು ಸೆಳೆಯಲು ಕುದುರೆ ವ್ಯಾಪಾರ ಶುರು ಮಾಡಿದ್ದಾರೆ. ನಾವು 104 ಶಾಸಕರು ವಿಪಕ್ಷ ಸ್ಥಾನದಲ್ಲೇ ಕುಳಿತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ’ ಎಂದಿದ್ದಾರೆ. 

“ಜೆಡಿಎಸ್‌-ಕಾಂಗ್ರೆಸ್‌ ನಾಯಕರು ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿ ನಮ್ಮ ಶಾಸಕರನ್ನು ಸೆಳೆಯುತ್ತಿದ್ದಾರೆ. ನಾವು ಆಪರೇಷನ್‌ ಕಮಲ ಮಾಡುತ್ತಿಲ್ಲ, ಬದಲಾಗಿ ಕುಮಾರಸ್ವಾಮಿಯವರೇ ಮಾಡುತ್ತಿದ್ದಾರೆ’ ಎಂದೂ ಬಿಎಸ್‌ವೈ ಆರೋಪಿಸಿದರು. ನಾವು ಮುಂಬಯಿಯಲ್ಲೂ ಯಾವುದೇ ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಇಟ್ಟಿಲ್ಲ, ಈ ಬಗ್ಗೆ ಅವರನ್ನೇ ಕೇಳಿ ಎಂದರು. 

Advertisement

ಆಪರೇಷನ್‌ ಕಮಲದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕಾಂಗ್ರೆಸ್‌ ಸಚಿವ ರಿಗೆ ಸಿದ್ದರಾಮಯ್ಯ ಮತ್ತು ಡಾ| ಜಿ. ಪರಮೇಶ್ವರ್‌ ಸೂಚನೆ ನೀಡಿದ್ದಾರೆ. 

ಜೆಡಿಎಸ್‌ನಲ್ಲೂ ಆಪರೇಷನ್‌ ಕಮಲದ ಬಗ್ಗೆ ತೀವ್ರ ನಿಗಾ ಇರಿಸಲಾಗಿದೆ. ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ಜೆಡಿಎಸ್‌ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.   

ಡಿಸಿಎಂ, ಡಿಕೆಶಿ ಜತೆ ಸಭೆ
ಕೆಪಿಸಿಎಲ್‌ ಕಚೇರಿಯಲ್ಲಿ ಡಾ| ಜಿ. ಪರಮೇಶ್ವರ್‌, ಡಿ.ಕೆ.ಶಿ. ಜತೆ ಸಮಾಲೋಚನೆ ನಡೆಸಿದ ಸಿಎಂ ಕುಮಾರಸ್ವಾಮಿ ಬಿಜೆಪಿಯವರ ಸಂಪರ್ಕ ದಲ್ಲಿರುವ ಶಾಸಕರ ಜತೆ ಖುದ್ದು ಮಾತುಕತೆ ನಡೆಸಿದರು. ಒಂದೊಮ್ಮೆ ಬಿಜೆಪಿಯವರು ಹೇಳುತ್ತಿರುವಂತೆ ಕಾಂಗ್ರೆಸ್‌ನ 18 ಶಾಸಕರು ಬಿಜೆಪಿ ಜತೆ ಗುರುತಿಸಿಕೊಂಡರೆ ಏನು ಮಾಡಬೇಕು, ಬಿಜೆಪಿ ಜತೆ ಹೋಗಬಹುದಾದ ಶಾಸಕರು ಯಾರ್ಯಾರು ಎಂಬ ಬಗ್ಗೆ ಚರ್ಚಿಸಿದರು. ಇದೇ ವೇಳೆ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾದ ಶಾಸಕ ಆನಂದ್‌ಸಿಂಗ್‌ ಅವರನ್ನು ಸಚಿವ ಜಮೀರ್‌ ಅಹಮದ್‌ ಸಂಪರ್ಕಿಸಿ ಪಕ್ಷ ಬಿಡದಂತೆ ಸೂಚಿಸಿದರು.

ಬಿಜೆಪಿಯ 5 ಶಾಸಕರನ್ನು ಸೆಳೆಯಲು ಜೆಡಿಎಸ್‌ ಕಾರ್ಯತಂತ್ರ ರೂಪಿಸಿದೆ. ಚಿತ್ರದುರ್ಗ ಹಾಗೂ ಮೈಸೂರು ಭಾಗದ ನಾಲ್ವರು ಬಿಜೆಪಿ ಶಾಸಕರ ಜತೆ ಜೆಡಿಎಸ್‌ ಸಂಪರ್ಕದಲ್ಲಿದೆ. ಇಬ್ಬರಿಗೆ ಸಚಿವ ಸ್ಥಾನ ಹಾಗೂ ಮತ್ತಿಬ್ಬರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಫ‌ರ್‌ ನೀಡಿದೆ ಎಂದು ಹೇಳಲಾಗಿದೆ. 

ಅತೃಪ್ತ ಕಾಂಗ್ರೆಸ್‌ ಶಾಸಕರಾದ ರಮೇಶ್‌ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್‌ ಕುಮಠಳ್ಳಿ ಹಾಗೂ ಪಕ್ಷೇತರ ಶಾಸಕರಾದ ಆರ್‌. ಶಂಕರ್‌, ನಾಗೇಶ್‌ ಅವರು ಮುಂಬಯಿಯಲ್ಲಿದ್ದಾರೆ ಎನ್ನಲಾಗಿತ್ತು. ಇನ್ನೂ ಕೆಲವು ಕಾಂಗ್ರೆಸ್‌ ಶಾಸಕರು ಅವರನ್ನು ಸೇರಿಕೊಳ್ಳಲಿದ್ದು, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂತು. ಕಾಂಗ್ರೆಸ್‌ನ ಕೆಲವು ಶಾಸಕರು ಹಿರಿಯ ನಾಯಕರ ಸಂಪರ್ಕಕ್ಕೆ ಸಿಗದಿದ್ದುದು ಇದಕ್ಕೆ ಪುಷ್ಟಿ ನೀಡುವಂತಿತ್ತು.

ನಾನೂ ಆಪರೇಷನ್‌ ಮಾಡಬಹುದು!
“ನಾನು ಮನಸ್ಸು ಮಾಡಿದರೆ ಈಗ ಆಪರೇಷನ್‌ ಮಾಡಬಹುದು. ಆದರೆ ಅದರ ಆವಶ್ಯಕತೆ ಇಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು. 
ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಸಮಾಧಾನ ಮಾಡುವ ಹೊಣೆಯನ್ನು ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಲಾಗಿದೆ. ಹೀಗಾಗಿ ಮಂಗಳವಾರವೇ ಮುಂಬಯಿಗೆ ತೆರಳಲಿರುವ ಡಿಕೆಶಿ ಅಲ್ಲಿ ರಮೇಶ್‌ ಜಾರಕಿಹೊಳಿ ಸಹಿತ ಅವರ ಜತೆಯಲ್ಲಿರುವ ಶಾಸಕರ ಸಮಾಧಾನ ಮಾಡಿ ಕರೆತರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪರ್ಕಕ್ಕೆ ಸಿಗದ ಹೆಬ್ಟಾರ್‌, ಉಮೇಶ್‌ ಜಾಧವ್‌
ಕಳೆದ 4 ದಿನಗಳಿಂದ ಚಿಂಚೊಳ್ಳಿ ಶಾಸಕ ಉಮೇಶ್‌ ಜಾಧವ್‌ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗ  ದಿರುವುದು ಕಾಂಗ್ರೆಸ್‌ ನಾಯಕ ರಿಗೆ ತಲೆಬಿಸಿ  ಯಾಗಿದೆ. ರಮೇಶ್‌ ಜಾರಕಿಹೊಳಿ ತಂಡ ದೊಂದಿಗೂ ಗುರುತಿಸಿ ಕೊಳ್ಳದೆ ಪ್ರತ್ಯೇಕವಾಗಿ ಉಳಿದಿರುವ ಉಮೇಶ್‌ ಜಾಧವ್‌ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಸಮಾಧಾನ ಗೊಂಡಿ ದ್ದಾರೆ ಎನ್ನ ಲಾಗಿದೆ. ಸಚಿವ ಸ್ಥಾನದ ಆಕಾಂಕ್ಷಿ ಯಾಗಿದ್ದ ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಟಾರ್‌ ಕೂಡ ರವಿವಾರದಿಂದ ಪಕ್ಷದ ನಾಯಕರ ದೂರವಾಣಿ ಕರೆಗಳನ್ನು ಸ್ವೀಕರಿಸಿಲ್ಲ. ಇವರೂ ಮುಂಬಯಿಗೆ ತೆರಳಿ ರಮೇಶ್‌ ಜಾರಕಿಹೊಳಿ ತಂಡ ಸೇರಿದ್ದಾರೆ ಎಂಬ ಆತಂಕ ಕಾಂಗ್ರೆಸ್‌ ನಾಯಕರಿಗೆ ಶುರುವಾಗಿದೆ. 

ಆನಂದ್‌ ಸಿಂಗ್‌ ಮತ್ತು ನಾಗೇಂದ್ರ ಸಹ ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಇಬ್ಬರ ಜತೆಯೂ ಮಾತನಾಡಿದ್ದೇನೆ. ಬಿಜೆಪಿಯವರು ಅನಗತ್ಯ ಕಸರತ್ತು ನಡೆಸುತ್ತಿದ್ದಾರೆ. ಅವರ ಆಸೆಯೂ ಫ‌ಲಿಸುವುದಿಲ್ಲ. ಸರಕಾರ ಬೀಳುವ ಹಾಗಿದ್ದರೆ ನಾನು ಇಷ್ಟು ಕೂಲಾಗಿ ಇರ್ತಿದ್ದೆನಾ. ನಾವು ಬಿಜೆಪಿ ಶಾಸಕರನ್ನು ಸೆಳೆಯುವ ಯತ್ನ ಮಾಡಿಲ್ಲ, ಅದರ ಅಗತ್ಯವೂ ನಮಗಿಲ್ಲ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ನಾವು ಯಾವುದೇ ಕಾಂಗ್ರೆಸ್‌-ಜೆಡಿಎಸ್‌ ಶಾಸಕರಿಗೆ ಆಮಿಷ ಒಡ್ಡಿಲ್ಲ. ಸಿಎಂ ಕುಮಾರಸ್ವಾಮಿ ಅವರೇ ಕುದುರೆ ವ್ಯಾಪಾರ ಶುರು ಮಾಡಿದ್ದು, ಬಿಜೆಪಿ ಶಾಸಕರಿಗೆ ಹಣ ಮತ್ತು ಸಚಿವ ಸ್ಥಾನದ ಆಫ‌ರ್‌ ನೀಡಿದ್ದಾರೆ. 
– ಬಿ.ಎಸ್‌. ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ

ಆಪರೇಷನ್‌ ಕಮಲದ ಬಗ್ಗೆ  ನಮಗೆ ಆತಂಕ ವಿಲ್ಲ. ನಮ್ಮ ಶಾಸಕರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಬಿಜೆಪಿಯವರು ಸರಕಾರವನ್ನು ಅಸ್ಥಿರ ಗೊಳಿ ಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರು ಯಶಸ್ವಿ ಯಾಗುವುದಿಲ್ಲ. ಮುಂಬಯಿಗೆ ತೆರಳಿರುವ ಶಾಸಕರ ಬಗ್ಗೆ ಬೇರೆ ರೀತಿ ವಿಶ್ಲೇಷಣೆ ಮಾಡುವುದು ಬೇಡ. ಕಾಂಗ್ರೆಸ್‌ನ ಯಾವ ಶಾಸಕರೂ ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ.    
– ಡಾ| ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next