ಕೊಪ್ಪಳ: ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಜನಾದೇಶ ಇಲ್ಲದಿದ್ದರೂ ಅಡ್ಡ ದಾರಿ ಹಿಡಿದು ಅಧಿಕಾರಕ್ಕೆ ಬಂದಿದ್ದಾರೆ. ಇವರಿಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಲಿ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಸವಾಲೆಸಿದಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಉತ್ತರ ಕರ್ನಾಟಕ ಹಲವು ಜಿಲ್ಲೆಯಲ್ಲಿ ನೆರೆ ಬಂದು ಲಕ್ಷ ಕೋಟಿ ಹಾನಿಯಾಗಿದೆ. ರಾಜ್ಯ ಸರ್ಕಾರವೇ ಕೇಂದ್ರಕ್ಕೆ ವರದಿ ನೀಡಿದೆ. ನಾವು ರಾಜ್ಯಪಾಲರಿಗೆ ಅಧ್ಯಯನದ ವರದಿ ನೀಡಿದ್ದೇವೆ. ಕೇಂದ್ರಕ್ಕೂ ಒತ್ತಾಯ ಮಾಡಿದ್ದೇವೆ. ಸಾಲ ಮನ್ನಾ ಮಾಡಿ ಮನೆ ಕಟ್ಟಿ ಕೊಡಿ ಎಂದು ಹೇಳಿದ್ದೇವೆ. ಆದರೆ ಇದೇ ಯಡಿಯೂರಪ್ಪ ಈ ಹಿಂದೆ ನಾನು ಕೇಳಿದ ಪ್ರಶ್ನೆಗೆ ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮಿಷಿನ್ ಇಟ್ಟಿಲ್ಲ ಎಂದು ಪರಿಷತ್ ನಲ್ಲಿ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಅಲ್ಪ ಅನುದಾನ ಕೊಟ್ಟಿದ್ದು ಬಿಟ್ಟರೆ ಈವರೆಗೂ ಪರ್ಯಾಯ ವ್ಯವಸ್ಥೆ ಮಾಡುವ ಕೆಲಸ ಆಗಿಲ್ಲ. ನೆರೆ ಸಂತ್ರಸ್ತರ ಸಮಸ್ಯೆ ಆಲಿಸುವುದು ಬಿಟ್ಟು ಉಪ ಚುನಾವಣೆಗೆ ಬಿಎಸ್ ವೈ ಸಮಯ ನಿಗದಿ ಮಾಡುತ್ತಾರೆ.
ಕಾಂಗ್ರೆಸ್ ನಾಯಕರ ಮನೆ ಮೇಲೆ ಮಾತ್ರ ಐಟಿ ದಾಳಿ ನಡೆಯುತ್ತಿವೆ. ಹಾಗಾದರೆ ಬಿಜೆಪಿ ಅವರು ಸತ್ಯ ಹರಿಶ್ಚಂದ್ರರಾ ? ಐಟಿ ಅಧಿಕಾರಿಗಳಿಗೆ ಇದು ಕಣ್ಣಿಗೆ ಕಾಣುತ್ತಿಲ್ಲವಾ ? ಮಹಾರಾಷ್ಟ್ರ ಚುನಾವಣೆ ಸಂಬಂಧ ಸಾವರ್ಕರ್ ವಿಷಯ ಚರ್ಚೆಗೆ ತಂದರು. ರಾಮ ಮಂದಿರ ವಿಷಯ ಕೂಡ ಚರ್ಚಗೆ ಬಂದವು. ಇವೆಲ್ಲ ಚುನಾವಣೆ ಇದ್ದಾಗ ಮಾತ್ರ ನೆನಪಾಗುತ್ತವೆ. ಜನರಿಗೆ ಭಾವನಾತ್ಮಕ ವಿಷಯ ಮುಂದಿಟ್ಟು ಸತ್ಯವನ್ನೆ ಮರೆ ಮಾಚುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗುತ್ತಿದ್ದರೂ ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಗುಡುಗಿದರು.
ಇನ್ನೂ ಸಿದ್ದರಾಮಯ್ಯ ಅವರು ವಿಪಕ್ಷದ ನಾಯಕರಾಗಿ ನೆರೆ ಸಂತ್ರಸ್ತರ ಅಳಲು ಆಲಿಸಿದ್ದಾರೆ. ಆದರೆ ಬಿ ಎಸ್ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಮೊದಲು ನೆರೆ ಸಂತ್ರಸ್ತರಿಗೆ ಅನುದಾನ ಬಿಡುಗಡೆ ಮಾಡಿಸಲಿ ಎಂದರು.
ಟಿಪ್ಪು ವಿಷಯ ಪಠ್ಯದಿಂದ ತೆಗೆಯುವ ವಿಚಾರದ ಕುರಿತು ಮಾತನಾಡಿದ ಅವರು ಟಿಪ್ಪು ಜಯಂತಿಯಲ್ಲಿ ಜಗದೀಶ ಶೆಟ್ಟರ್ ಸಹಿತ ಬಿಜೆಪಿಯವರೇ ಪಾಲ್ಗೊಂಡಿದ್ದಾರೆ. ಈಗ ಅವರೇ ಟಿಪ್ಪು ಜಯಂತಿ ಆಚರಣೆಯನ್ನು ಕೈ ಬಿಟ್ಟಿದ್ದಾರೆ. ಇವರು ಭಾವನಾತ್ಮಕ ವಿಷಯ ಮುಂದಿಟ್ಡು ಜನರಿಗೆ ಯಾಮಾರಿಸುತ್ತಿದ್ದಾರೆ. ಇವರೆಲ್ಲ ಸತ್ಯ ಹರಿಶ್ಚಂದ್ರನ ಮೊಮ್ಮೊಕ್ಕಳಾ ಎಂದರಲ್ಲದೆ ರಾಷ್ಟ್ರಪತಿ ಕೋವಿಂದ್ ಅವರು ರಾಜ್ಯಕ್ಕೆ ಬಂದಾಗ ಟಿಪ್ಪು ಬಗ್ಗೆ ಗುಣಗಾನ ಮಾಡಿ ದೇಶಪ್ರೇಮಿ ಎಂದಿದ್ದಾರೆ ಅದನ್ನ ಬಿಜೆಪಿ ಅರಿತುಕೊಳ್ಳಲಿ ಎಂದರು.