Advertisement

ಬಿ.ಎಸ್‌.ಯಡಿಯೂರಪ್ಪ ಆಪ್ತ ಮಂಜುನಾಥಗೌಡ ಜೆಡಿಎಸ್‌ಗೆ

09:28 AM Jan 24, 2018 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರ ಆಪ್ತ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ ಗೌಡ ಜೆಡಿಎಸ್‌ ಸೇರ್ಪಡೆಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. 

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಂಜುನಾಥಗೌಡ, ಕಡಿಮೆ ಅಂತರದ ಮತಗಳಿಂದ ಪರಾಭವಗೊಂಡಿದ್ದರು. ಪದ್ಮನಾಭನಗರದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಸಮ್ಮುಖದಲ್ಲಿ ಮಂಜು ನಾಥಗೌಡ ಮಂಗಳವಾರ ಜೆಡಿಎಸ್‌ ಸೇರ್ಪಡೆಗೊಂಡರು. ಈ ವೇಳೆ ಎಚ್‌.ಡಿ.ದೇವೇಗೌಡರು ಮಾತನಾಡಿ, ಜೆಡಿಎಸ್‌ ರಾಜ್ಯದಲ್ಲಿ ಶಕ್ತಿಯುತವಾಗುತ್ತಿದೆ ಎಂಬುದಕ್ಕೆ ಪ್ರಮುಖ ನಾಯಕರು ಪಕ್ಷ ಸೇರ್ಪಡೆಯೇ ಸಾಕ್ಷಿ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ನಾಯಕರು ಜೆಡಿಎಸ್‌ ಸೇರ್ಪಡೆ ಯಾಗಲಿದ್ದಾರೆ ಎಂದರು. ಮಧು ಬಂಗಾರಪ್ಪ, ಶಿವಮೊಗ್ಗ ಜೆಡಿಎಸ್‌ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಇತರರು ಇದ್ದರು.

ಮಧು ಬಂಗಾರಪ್ಪ “ಆಪರೇಷನ್‌’
ಇತ್ತೀಚೆಗಷ್ಟೇ ಕಾರವಾರದ ಮಾಜಿ ಸಚಿವ ಆನಂದ್‌ ಅಸ್ನೋಟಿಕರ್‌ ಅವರನ್ನು ಜೆಡಿಎಸ್‌ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಧು ಬಂಗಾರಪ್ಪ, ಮಂಜುನಾಥಗೌಡರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಉಸ್ತುವಾರಿ ಆಗಿರುವ ಅವರು, ಜೆಡಿಎಸ್‌ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಎರಡೂ ಜಿಲ್ಲೆಗಳಲ್ಲಿ ಬೇರೆ ಬೇರೆ ಪಕ್ಷಗಳ ನಾಯಕರಿಗೆ ಗಾಳ ಹಾಕಿದ್ದಾರೆ. ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ನಾಯಕರು ಮಧು ಬಂಗಾರಪ್ಪರ ಸಂಪರ್ಕದಲ್ಲಿದ್ದಾರೆಂದು ಹೇಳಲಾಗಿದೆ.

ಜ. 25, ಫೆ. 4 ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜೆಡಿಎಸ್‌ ಬೆಂಬಲವೂ ಇಲ್ಲ, ವಿರೋಧವೂ ಇಲ್ಲ. ಬಂದ್‌ಗಳಿಂದ ಮಹದಾಯಿ ವಿವಾದಕ್ಕೆ ಪರಿಹಾರ ಸಿಗುತ್ತಾ? ಇದನ್ನು ಸರ್ಕಾರಿ ಪ್ರೇರಿತ ಬಂದ್‌ ಎನ್ನುತ್ತಿದ್ದಾರೆ.
 ●ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next