Advertisement

21 ರಿಂದ ರೈತ ಸಂಘದಿಂದ ಬೃಹತ್‌ ಬೆಂಗಳೂರು ಚಲೋ

04:30 PM Mar 12, 2022 | Team Udayavani |

ಚಿಕ್ಕಮಗಳೂರು: ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಮತ್ತು ಎಂಎಸ್‌ಪಿ ಖಾತ್ರಿಪಡಿಸಬೇಕೆಂದು ಆಗ್ರಹಿಸಿ ಮಾ.21ರಿಂದ ಮೂರು ದಿನಗಳ ಕಾಲ ರಾಜ್ಯ ರೈತ ಸಂಘದಿಂದ ಬೃಹತ್‌ ಬೆಂಗಳೂರು ಚಲೋ ಮತ್ತು ಪರ್ಯಾಯ ಜನಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್‌ ಪುಣಚ ತಿಳಿಸಿದರು.

Advertisement

ಶುಕ್ರವಾರ ನಗರದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.21ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ಬೃಹತ್‌ ಅಧಿವೇಶನ ಮತ್ತು ಮಾ.22 ಮತ್ತು 23ರಂದು ಪರ್ಯಾಯ ಜನಾಧಿವೇಶನವನ್ನು ಆಯೋಜಿಸಲಾಗಿದೆ. ಈ ಅಧಿವೇಶನದಲ್ಲಿ ಜಿಲ್ಲೆಯ ರೈತರು, ದಲಿತ, ಕಾರ್ಮಿಕರು, ಮಹಿಳೆಯರು ಯುವ ಜನತೆ ಪಾಲ್ಗೊಳ್ಳುವಂತೆ ವಿನಂತಿಸಿದರು.

ರೈತ ವಿರೋಧಿ  ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದುಕೊಂಡಿದೆ. ಆದರೆ, ರಾಜ್ಯ ಸರ್ಕಾರ ಎಂಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆದುಕೊಂಡಿಲ್ಲ, ಈ ಕಾಯ್ದೆಗಳನ್ನು ಹಿಂಪಡೆದುಕೊಳ್ಳುವಂತೆ ಸಂಘಟನೆಗಳ ಐಕ್ಯ ವೇದಿಕೆ ಸಂಯುಕ್ತ ಹೋರಾಟ ಹಮ್ಮಿಕೊಂಡಿದೆ ಎಂದರು.

ಈ ಹಿಂದೆ ರೈತರಿಗೆ ಅನುಕೂಲವಾಗುವ ಕಾಯ್ದೆಗಳನ್ನು ತರುವಂತೆ ಹೋರಾಟ ಮಾಡಲಾಗುತ್ತಿತ್ತು. ಆದರೆ ಇಂದು ರೈತ ವಿರೋಧಿ  ಮಸೂದೆಗಳನ್ನು ಹಿಂಪಡೆಯುವಂತೆ ಹೋರಾಟ ಮಾಡುವ ಸ್ಥಿತಿ ಬಂದಿರುವುದು ಶೋಚನೀಯ ಎಂದು ವಿಷಾದಿಸಿದರು.

ಎಪಿಎಂಸಿ ಕಾಯ್ದೆಯಿಂದ ಎಪಿಎಂಸಿಗಳು ಬಾಗಿಲು ಮುಚ್ಚುತ್ತಿದ್ದು ಖಾಸಗಿ ಮಾರುಕಟ್ಟೆಗಳು ತಲೆ ಎತ್ತುತ್ತಿವೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದ ರೈತರು ಅನುಪಯುಕ್ತ ಜಾನುವಾರುಗಳನ್ನು ಏನು ಮಾಡಬೇಕೆಂಬುದು ಅವರಿಗೆ ತೋಚುತ್ತಿಲ್ಲ. ಹೀಗೆ ರೈತರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Advertisement

ರೈತರು ಬೆಳೆಯುವ ಭತ್ತ, ರಾಗಿ, ಜೋಳ, ಎಣ್ಣೆಕಾಳು, ತೊಗರಿ ಇತರೆ ಧವಸ ಧಾನ್ಯಗಳ ಖರೀದಿಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸುವ ಕಾನೂನು ಜಾರಿ ಮಾಡಬೇಕು ಎಂದರು.

ವನಶ್ರೀ ಲಕ್ಷ್ಮಣ್‌ಗೌಡ ಮಾತನಾಡಿ, ಜಿಲ್ಲೆಯಲ್ಲಿ ಆರ್‌ಟಿಸಿಯಲ್ಲಿ ಬೆಳೆ ಕಾಲಂ ನಮೂದಿಸದಿರುವುದರಿಂದ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಶೀಘ್ರವೇ ಆರ್‌ಟಿಸಿಯಲ್ಲಿ ಬೆಳೆ ಕಾಲಂ ನಮೂದಿಸಬೇಕು. ಅತಿವೃಷ್ಟಿ ಪರಿಹಾರ ಫಲಾನುಭವಿಗಳಿಗೆ ತಲುಪಿಲ್ಲ, ಬೆಳೆ ಕಳೆದುಕೊಂಡ ಎಲ್ಲರಿಗೂ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು.

ಕಾಫಿ ಬೆಳೆಗಾರಿಗೆ ವಿದ್ಯುತ್‌ ಸಮಸ್ಯೆ ಉಂಟಾಗುತ್ತಿದ್ದು, ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಬೇಕು ಮತ್ತು 10 ಎಚ್‌.ಪಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ವಿನಾಯಕ್‌, ಲೋಕೇಶ್‌ ಇತರರು ಇದ್ದರು.

 

ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಜಿಲ್ಲೆಯ ಕಾಫಿ  ಬೆಳೆಗಾರರಿಗೆ ಕನಿಷ್ಟ 12 ಗಂಟೆಗಳ ಕಾಲ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡುವಂತೆ ಇಂಧನ ಸಚಿವರಲ್ಲಿ ಮನವಿ ಮಾಡಿದ್ದು, ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆ ನೀಡಿದಲ್ಲಿಂದ 12 ಗಂಟೆ ಇರಲಿ ಯಾವಾಗ ಕರೆಂಟ್‌ ಇರುತ್ತೆ, ಇರಲ್ಲ ಎನ್ನುವುದೇ ತಿಳಿಯುತ್ತಿಲ್ಲ ಎಂ.ಕೆ.ಪ್ರಾಣೇಶ್‌ ತಮ್ಮ ಹೇಳಿಕೆಗೆ ಬದ್ಧರಾಗಿ ಕಾಫಿ ಬೆಳೆಗಾರರಿಗೆ 12ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಕೆಯಾಗುವಂತೆ ನೋಡಿಕೊಳ್ಳಲಿ.

ವಿನಾಯಕ್‌, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ

 

 

Advertisement

Udayavani is now on Telegram. Click here to join our channel and stay updated with the latest news.

Next