ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಿಂದ ಬಂಧಿಸಲ್ಪಟ್ಟು ಜೈಲುಶಿಕ್ಷೆ ಅನುಭವಿಸುತ್ತಿದ್ದ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ.ಕವಿತಾಗೆ ಸುಪ್ರೀಂಕೋರ್ಟ್ (Supreme court) ಮಂಗಳವಾರ (ಆ.27) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೆಸರು ಕೂಡಾ ಎಫ್ ಐಆರ್ ನಲ್ಲಿ ದಾಖಲಾಗಿತ್ತು.
ಕಳೆದ ವರ್ಷ ಫೆಬ್ರವರಿಯಲ್ಲಿ ಬಂಧನಕ್ಕೊಳಗಾಗಿದ್ದ ಮನೀಶ್ ಸಿಸೋಡಿಯಾಗೆ ಆಗಸ್ಟ್ ಮೊದಲ ವಾರದಲ್ಲಿ ಜಾಮೀನು ನೀಡಿದ್ದು, ಸಿಸೋಡಿಯಾ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಈ ಪ್ರಕರಣದ ಕವಿತಾಗೆ ಜಾಮೀನು ಸಿಕ್ಕಂತಾಗಿದೆ.
ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವ ಬಗ್ಗೆ ಗಮನಸೆಳೆದಿದ್ದ ಸುಪ್ರೀಂಕೋರ್ಟ್, ಆರೋಪಿಯನ್ನು ದೀರ್ಘಕಾಲದವರೆಗೆ ಬಂಧನದಲ್ಲಿಡುವುದು ಆಕೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದೆ.
ಸುಪ್ರೀಂಕೋರ್ಟ್ ನ ಜಸ್ಟೀಸ್ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ, ಕೆ.ಕವಿತಾ ಈಗಾಗಲೇ ಐದು ತಿಂಗಳಿಗಿಂತಲೂ ಹೆಚ್ಚು ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ. ಒಂದು ವೇಳೆ ಪ್ರಾಸಿಕ್ಯೂಷನ್ ತನಿಖೆ ಮುಕ್ತಾಯವಾಗಿದೆ ಎಂದು ಹೇಳಿದ್ದರೂ ಕೂಡಾ ವಿಚಾರಣೆ ಶೀಘ್ರವೇ ಆರಂಭವಾಗಲಿದೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.