ಹೈದರಾಬಾದ್: ಸಿಎಂ ಕೆಸಿಆರ್ ಪುತ್ರಿ, ಎಂಎಲ್ ಸಿ ಕೆ.ಕವಿತಾ ಅವರು ಗುರುವಾರ ( ಮಾ.16 ರಂದು) ಇಡಿ ಅಧಿಕಾರಿಗಳ ಮುಂದೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ನಡುವೆ ತೆಲಂಗಾಣದಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ದೆಹಲಿ ಅಬಕಾರಿ ನೀತಿಯ ಅಕ್ರಮಗಳಿಗೆ ಇಡಿ ಕವಿತಾ ಅವರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಇಡಿ ಕವಿತಾ ಅವರಿಗೆ 9 ಗಂಟೆಗಳ ಕಾಲ ವಿಚಾರಣೆಯನ್ನು ನಡೆಸಿತ್ತು. ಆ ಬಳಿಕ ಮಾ. 16 ರಂದು ಮತ್ತೆ ವಿಚಾರಣೆಗೆ ಬರಬೇಕೆಂದು ಸಮನ್ಸ್ ನೀಡಿತ್ತು.
ಅದರಂತೆ ಇಂದು ಕವಿತಾ ಅವರು ವಿಚಾರಣೆಗೆ ಹಾಜರಾಗಲಿದ್ದು, ಕೇಂದ್ರದ ವಿರುದ್ಧ ಭಾರತ್ ರಾಷ್ಟ್ರ ಸಮಿತಿ ಸದಸ್ಯರು ಮತ್ತೆ ರಸ್ತೆಗಿಳಿದು ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಪೋಸ್ಟರ್ ಅಂಟಿಸಿ ʼವಾಂಟೆಡ್ʼ, ಇವರು ಶಾಸಕರನ್ನು ಖರೀಸುವಲ್ಲಿ ಖ್ಯಾತಿ ಎಂದು ಬರೆದು ಪೋಸ್ಟರ್ ಕೆಳಗೆ ಪ್ರಧಾನಿ ಮೋದಿ ಅವರ ಯೋಜನೆ ಬಗ್ಗೆಯೂ ವ್ಯಂಗ್ಯವಾಗಿ ಬರೆದು ತೆಲಂಗಾಣ ವಿವಿಧ ಭಾಗದಲ್ಲಿ ಅಂಟಿಸಲಾಗಿದೆ.
ಕಳೆದ ವಾರ ಬಿಜೆಪಿ ವಿರುದ್ಧ ಬಿಆರ್ ಎಸ್ ಕಾರ್ಯಕರ್ತರು ಇದು ರೇಡ್ ಮಾಡುವ ಸರ್ಕಾರ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿತ್ತು.
ಇಡಿಯ ಸಮನ್ಸ್ ಪ್ರಶ್ನಿಸಿ ಹಾಗೂ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಕವಿತಾ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಇದರ ವಿಚಾರಣೆ ಮಾ. 24 ರಂದು ನಡೆಯಲಿದೆ.