Advertisement

ತಂಗಿ ಸಾವಿನ ಸೇಡು ತೀರಿಸಿಕೊಂಡ ಸೋದರ!

06:00 AM Nov 18, 2018 | |

ಕಲಬುರಗಿ: ತನ್ನ ತಂಗಿಗಾದ ಅನ್ಯಾಯದ ಸೇಡು ತೀರಿಸಿಕೊಳ್ಳಲು ಸಹೋದರನೊಬ್ಬ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ ಘಟನೆ ಗುರುವಾರ ನಗರ ಹೊರವಲಯದ ರಾಮನಗರದಲ್ಲಿ ನಡೆದ ವಿಷಯ ತನಿಖೆಯಿಂದ ಬಹಿರಂಗವಾಗಿದೆ.

Advertisement

ರಾಮನಗರದಲ್ಲಿ ನಡೆದ ಗೃಹಿಣಿ ಶರ್ಮಿಳಾ ಸಂಜಯ ಕಾವಲೆ (27) ಕೊಲೆ ಪ್ರಕರಣವನ್ನು ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಶರ್ಮಿಳಾ ಕೊಲೆ ಪ್ರಕರಣ ಸಂಬಂಧ 26 ವರ್ಷದ ಶಿವಾಜಿ ನಗರದ ನಿವಾಸಿ ಕೃಷ್ಣ ಲಾಲಪ್ಪ ಗಾಜರೆ ಎಂಬಾತನನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.

ಕೃಷ್ಣ ತನ್ನ ಸಹೋದರಿಯನ್ನು ವರಿಸಬೇಕಿದ್ದ ಸಹೋದರ ಮಾವ ಸಂಜಯನನ್ನು ಶರ್ಮಿಳಾ ಮದುವೆಯಾಗಿದ್ದರಿಂದ ಕೃಷ್ಣನ ತಂಗಿ ಪೂಜಾ ಮಾನಸಿಕವಾಗಿ ನೊಂದು ಕಾಯಿಲೆಯಿಂದ ನರಳಿ ಮೃತಪಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಶರ್ಮಿಳಾ ಮೇಲೆ ದ್ವೇಷ ಬೆಳೆಸಿಕೊಂಡು ಅವಳ ಕೊಲೆಗೆ ಸಂಚು ಹೂಡಿದ್ದ ಕೃಷ್ಣ ಗುರುವಾರ ಶರ್ಮಿಳಾ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಆರೋಪಿ ಬಾಯಿಟ್ಟಿದ್ದಾನೆ ಎಂದು ಎಸ್‌ಪಿ ಎನ್‌. ಶಶಿಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಂಗಿ ಸಾವಿನ ಸೇಡು:
ಕೊಲೆಯಾದ ಶರ್ಮಿಳಾ ಪತಿ ಸಂಜಯ ಕುಮಾರ ಮತ್ತು ಆರೋಪಿ ಕೃಷ್ಣ ಸೋದರ ಮಾವ-ಅಳಿಯ ಸಂಬಂಧಿಗಳಾಗಿದ್ದಾರೆ. ಸಂಜಯ ಆರೋಪಿ ಕೃಷ್ಣನಿಗೆ ಅಕ್ಕನ ಮಗ. ಅಂತೆಯೇ ಕೃಷ್ಣನ ತಂಗಿ ಪೂಜಾ ಎಂಬಾಕೆಯನ್ನು ಸಂಜಯನಿಗೆ ಕೊಟ್ಟು ವಿವಾಹ ಮಾಡಬೇಕೆಂದು ಇಬ್ಬರ ಮನೆಯವರು ಮಾತುಕತೆ ನಡೆಸುತ್ತಿದ್ದರು. ಆದರೆ, ಪೂಜಾಳನ್ನು ಮದುವೆಯಾಗಲು ಸಂಜಯ ನಿರಾಕರಿಸಿ, ಆಳಂದ ತಾಲೂಕಿನ ಸರಸಂಬಾ ಗ್ರಾಮದ ನಿವಾಸಿಯಾಗಿದ್ದ ಶರ್ಮಿಳಾಳನ್ನು 3 ವರ್ಷಗಳ ಹಿಂದೆ ಮದುವೆಯಾಗಿದ್ದ.

ಇದೇ ವೇಳೆ ತನ್ನ ಮದುವೆ ನಿಂತಿದ್ದರಿಂದ ಪೂಜಾ ಅನಾರೋಗ್ಯಕ್ಕೆ ತುತ್ತಾಗಿ, ಮೂಗು ಮತ್ತು ಹಲ್ಲಿನಲ್ಲಿ ರಕ್ತ ಸ್ರಾವವಾಗುತ್ತಿತ್ತು. ಹೀಗಾಗಿ ವರ್ಷದ ಹಿಂದೆ ಪೂಜಾಳನ್ನು ಹೆಚ್ಚಿನ ಚಿಕಿತ್ಸೆಗೆಂದು ಸೊಲ್ಲಾಪುರದ ಯಶೋಧರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರ್ಮಿಳಾ ಪೂಜಾಳನ್ನು ನೋಡಲೆಂದು ಯಶೋಧರ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಇದಾದ ಅರ್ಧ ಗಂಟೆಯಲ್ಲಿ ಪೂಜಾ ಅಸುನೀಗಿದ್ದು, ಶರ್ಮಿಳಾ ಭಾನಾಮತಿ ಮಾಡಿಸಿದ್ದರಿಂದ ಪೂಜಾ ಮೃತಪಟ್ಟಿರಬೇಕೆಂಬ ಅನುಮಾನ ಕೃಷ್ಣನಲ್ಲಿ ಹುಟ್ಟಿಕೊಂಡಿತ್ತು.

Advertisement

ಕೊಲೆ ಮಾಡಿ ತಂಗಿಗೆ ಶ್ರದ್ಧಾಂಜಲಿ:
ಸಹೋದರಿ ಪೂಜಾ ಮೃತಪಟ್ಟ ನಂತರ ಶರ್ಮಿಳಾಳ ಮೇಲೆ ಕೃಷ್ಣನಿಗೆ ದ್ವೇಷ ಕಾಡುತ್ತಿತ್ತು. ನ.15ರಂದು ಶರ್ಮಿಳಾ ಒಬ್ಬಳೇ ಮನೆಯಲ್ಲಿದ್ದಾಗ ಕೃಷ್ಣ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಕೊಲೆ ಮಾಡಿದ ನಂತರ ಹಂತಕ ಪ್ರಕರಣದ ದಾರಿ ತಪ್ಪಿಸುವ ಉದ್ದೇಶದಿಂದ ಮನೆಯಲ್ಲಿನ ವಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿ, ಶರ್ಮಿಳಾಳ ಮಾಂಗ್ಯಲ ಸರ, ಮತ್ತಿತರ ಆಭರಣ ಮತ್ತು ಆಕೆಯ ಮೊಬೈಲ್‌, ಹಣ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ. ಬಳಿಕ ಹಂತಕ ಕೃಷ್ಣ ತನ್ನ ಮನೆಗೆ ಹೋಗಿ ಮೃತ ತಂಗಿ ಪೂಜಾಳ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next