Advertisement
ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ, ನಗರ ಮತ್ತು ಗ್ರಾಮೀಣ ಪರಿಸರದಲ್ಲಿ ಬೆಳೆದವರು. ಬಾಲವಾಡಿಯಿಂದ ಸ್ನಾತಕೋತ್ತರ ಪದವಿ ತನಕ ಅವರಿಬ್ಬರೂ ಕಲಿತದ್ದು ಮಹಾನಗರ ಪುಣೆಯಲ್ಲಿ. ಪುಣೆ ವಿಶ್ವವಿದ್ಯಾಲಯದಿಂದ ಎಂಬಿಎ ಗಳಿಸಿದ ನಂತರ ಸಿಟಿ ಬ್ಯಾಂಕ್, ಎಚ್‌ಡಿಎಫ್ಸಿ, ಎಚ್‌ಎಸ್‌ಬಿಸಿ ಬ್ಯಾಂಕ್‌ನಂಥ ಕಾರ್ಪೊರೆಟ್ ಬ್ಯಾಂಕುಗಳಲ್ಲಿ ಇಬ್ಬರೂ ಹತ್ತು ವರ್ಷ ಉದ್ಯೋಗ ಮಾಡಿದರು. ಕೈತುಂಬಾ ಸಂಬಳ, ಐಷಾರಾಮಿ ಜೀವನ ಅವರದಾಗಿತ್ತು. ಆದರೆ ಅವರಿಗೆ ನೆಮ್ಮದಿ ಇರಲಿಲ್ಲ. ಕೊನೆಗೊಮ್ಮೆ ಉದ್ಯೋಗ ತೊರೆದು ಎರಡು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಆರಂಭಿಸಿದರು…
ಅವರ ಜಮೀನು ಪಶ್ಚಿಮ ಮಹಾರಾಷ್ಟ್ರದಲ್ಲಿದೆ. ಅಲ್ಲಿ ರಾಸಾಯನಿಕಗಳನ್ನು ಸುರಿದು ಬೆಳೆಸುವ ಪ್ರಧಾನ ಬೆಳೆ ಕಬ್ಬು. ಆದರೆ ಸೋದರರ ನಿರ್ಧಾರ ಬಹುಬೆಳೆಗಳ ಸಾವಯವ ಕೃಷಿ. ಆರಂಭದಲ್ಲಿ ದೇಸಿ ತಳಿಯ ದಾಳಿಂಬೆ, ತೊಗರಿ ಹಾಗೂ ಪಪ್ಪಾಯಿ ಬೆಳೆದರು. ಇಪ್ಪತ್ತು ಗಿರ್ ದನಗಳನ್ನು ಸಾಕತೊಡಗಿದರು. ಮೊದಲ ನಾಲ್ಕು ವರ್ಷ ಕೃಷಿಯಿಂದ ಅವರಿಗಾದದ್ದು ನಷ್ಟ. ಅದು ನಮಗೆ ಬಹಳ ಕಷ್ಟದ ಕಾಲ. ನಾವು ಉದ್ಯೋಗ ತೊರೆದಿದ್ದೆವು. ಸಾಂಪ್ರದಾಯಿಕ ಕೃಷಿಯನ್ನೂ ತೊರೆದಿದ್ದೆವು. ಒಂದು ಟನ್ ಪಪ್ಪಾಯಿ ಕೊಯ್ಲು ಮಾಡಿದಾಗ ನಮಗೆ ದೊಡ್ಡ ಆಘಾತ ಕಾದಿತ್ತು. ಬೆಲ್ಲದಷ್ಟು ಸಿಹಿಯಾದ ಆ ಪಪ್ಪಾಯಿಯನ್ನು ಸ್ಥಳೀಯ ಮಾರುಕಟ್ಟೆಗೆ ಒಯ್ದಾಗ ಅಲ್ಲಿನ ಮಾರಾಟಗಾರರು ಹೇಳಿದ ಖರೀದಿ ದರ ಕಿಲೋಗೆ ಕೇವಲ ನಾಲ್ಕು ರೂಪಾಯಿ ಎನ್ನುತ್ತಾ ತಮಗಾದ ಕಹಿ ಅನುಭವ ತಿಳಿಸುತ್ತಾರೆ ಅಜಿಂಕ್ಯಾ. ಜಾಗ ಕೊಟ್ಟ ಸ್ಟಾರ್ ಬಜಾರ್
ನಂತರ, ಪುಣೆಯ ಮಾಲ್‌ಗಳನ್ನು ಸಂಪರ್ಕಿಸಿದಾಗಲೂ ಇವರಿಗೆ ನಿರಾಶೆ ಕಾದಿತ್ತು. ಅನಂತರ ಸೋದರರಿಬ್ಬರೂ ಒಂದು ಟೆಂಪೋದಲ್ಲಿ ಪಪ್ಪಾಯಿ ತುಂಬಿಸಿ ಒಯ್ದರು- ಸೇತುವೆಗಳ ಕೆಳಗೆ ಕೈಗಾಡಿಗಳಲ್ಲಿ ಹಣ್ಣು ತರಕಾರಿ ಮಾರುವವರ ಬಳಿಗೆ. ಅವರು ಕಿಲೋಗೆ 20 ರೂಪಾಯಿ ದರದಲ್ಲಿ ಖರೀದಿಸಲು ಒಪ್ಪಲಿಲ್ಲ. ಆಗ, ಪುಕ್ಕಟೆಯಾಗಿ ರುಚಿ ನೋಡಿ ಎಂದು ನಮ್ಮ ಪಪ್ಪಾಯಿ ತಿನ್ನಲು ಕೊಟ್ಟೆವು. ಕೊನೆಗೆ ನಮ್ಮ ತೋಟದ ಫಸಲನ್ನೆಲ್ಲ ಲಾಭದಲ್ಲಿ ಮಾರಿದೆವು ಎಂದು ನೆನಪು ಮಾಡಿಕೊಳ್ಳುತ್ತಾರೆ ಸತ್ಯಜಿತ್. ಈ ರೀತಿಯಲ್ಲಿ ಸೋದರರ ಪಪ್ಪಾಯಿ ಮಾರಾಟ ಎಂಟು ತಿಂಗಳು ಸಾಗಿತು. ಅದೊಂದು ದಿನ ಸ್ಟಾರ್ ಬಜಾರ್ ಮಾಲ್‌ನ ಮುಖ್ಯಸ್ಥರು ಇವರು ಬೆಳೆದ ಪಪ್ಪಾಯಿಯ ರುಚಿ ನೋಡಿ ಖುಷಿಪಟ್ಟರು. ತದನಂತರ, ಅವರ ಮಾಲ್‌ನ ಎಲ್ಲ ಬ್ರಾಂಚುಗಳಲ್ಲಿಯೂ ಇವರ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಯಾವುದೇ ಶುಲ್ಕವಿಲ್ಲದೆ ಪ್ರತ್ಯೇಕ ಜಾಗ ಒದಗಿಸಿದರು.
Related Articles
ಹೀಗೆ ವಿವಿಧ ಮಾಲ್‌ಗಳಲ್ಲಿ ಇಬ್ಬರು ಸೋದರರ ಕೃಷಿ ಉತ್ಪನ್ನಗಳು ಬಿರುಸಿನಿಂದ ಮಾರಾಟವಾಗುತ್ತಿದ್ದಂತೆ, ಅವರು ಒಂದು ಸಂಗತಿ ಗಮನಿಸಿದರು. ರಾಸಾಯನಿಕಗಳನ್ನು ಹಾಕಿ ಬೆಳೆಸಿದ ಕೃಷಿ ಉತ್ಪನ್ನಗಳಂತೆಯೇ ಮಾಲ್‌ಗಳಲ್ಲಿ ತಮ್ಮದನ್ನೂ ಮಾರಾಟ ಮಾಡುತ್ತಿದ್ದರು. ಆದರೆ ನಾವು ಬೆಳೆಯುತ್ತಿದ್ದದ್ದು ಚಿನ್ನದಂಥ ಹಣ್ಣು- ತರಕಾರಿ ಧಾನ್ಯಗಳನ್ನು. ಹಾಗಾಗಿ ನಮ್ಮ ಫಸಲನ್ನು ಯೋಗ್ಯ ಬೆಲೆಗೆ ಮಾರಲಿಕ್ಕಾಗಿ ಹುಡುಕಾಟ ಶುರು ಮಾಡಿದೆವು ಎನ್ನುತ್ತಾರೆ ಅಜಿಂಕ್ಯಾ. ಮುಂದಿನ ಹಂತದಲ್ಲಿ ಅವರು ಮಾರಲು ಶುರುವಿಟ್ಟದ್ದು ರೈತರ ಮಾರುಕಟ್ಟೆಗಳಲ್ಲಿ. ಇದೀಗ ವಾರಾಂತ್ಯಗಳಲ್ಲಿ ಮುಂಬೈಯ ಬಾಂದ್ರಾದಲ್ಲಿ ಪ್ರಸಿದ್ಧ ರೈತರ ಮಾರುಕಟ್ಟೆಯಲ್ಲಿ ತಮ್ಮ ಫಸಲು ಮಾರುವುದರ ಜೊತೆಗೆ, ದಾದರಿನಲ್ಲಿಯೂ ಕೃಷಿಕರ ಮಾರುಕಟ್ಟೆ ಸಂಘಟಿಸಿದ್ದಾರೆ. ಅದಕ್ಕಾಗಿಯೇ ಪ್ರತಿ ವಾರಾಂತ್ಯ ಪುಣೆಯಿಂದ 350 ಕಿ.ಮೀ. ದೂರದ ಮುಂಬೈಗೆ ಸೋದರರ ಪ್ರಯಾಣ.
Advertisement
ದೇಸಿ ದನದ ತುಪ್ಪ, ಬೆಲ್ಲ, ಬೆಲ್ಲದ ಹುಡಿ, ನುಗ್ಗೆ ಎಲೆ ಹುಡಿ, ಎಣ್ಣೆಗಳು ಹಾಗೂ ಪಾಲಿಷ್ ಮಾಡದ ಧಾನ್ಯಗಳು- ಅವರ ತೋಟದ ಈ ವಿಷಮುಕ್ತ ಉತ್ಪನ್ನಗಳಿಗೆ ರೈತರ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ. ಜೊತೆಗೆ, ಮುಂಬೈಯ 250 ಗ್ರಾಹಕರ ಮನೆಬಾಗಿಲಿಗೆ ತಮ್ಮ ಉತ್ಪನ್ನ ತಲಪಿಸುವ ವ್ಯವಸ್ಥೆ ಮಾಡಿರುವುದು ಅವರ ಹೆಗ್ಗಳಿಕೆ. ಬಹುಬೆಳೆ ಕೃಷಿ ಈ ಸೋದರರ ಯಶಸ್ಸಿನ ಮಂತ್ರ. ದಾಳಿಂಬೆ, ಪಪ್ಪಾಯಿ, ಬಾಳೆ, ತೊಗರಿ, ಹೆಸರುಕಾಳು, ಉದ್ದು, ಕಪ್ಪುಚುಕ್ಕೆ ಅವರೆ, ನುಗ್ಗೆ, ಕಬ್ಬು – ಇವು ಅವರು 20 ಎಕರೆಗಳಲ್ಲಿ ಬೆಳೆಯುವ ಮುಖ್ಯ ಬೆಳೆಗಳು. ದನಗಳ ಸೆಗಣಿ ಮತ್ತು ಮೂತ್ರದಿಂದ ಕಂಪೋಸ್ಟ್ ತಯಾರಿಸಿ ಬೆಳೆಗಳಿಗೂ ಮರಗಳಿಗೂ ಹಾಕುತ್ತಾರೆ.ಹೆಚ್ಚಿನ ಮಾಹಿತಿಗಾಗಿ: www.twobrothersindia.com ನೂರು ಪ್ರತಿಶತ ಸಾವಯವ
ಫ್ರೆಂಚ್ ದೃಢೀಕರಣ ಕಂಪೆನಿ ಇಕೋಸರ್ಟ್, ಈ ಸೋದರರ ತೋಟವನ್ನು ಶೇಕಡಾ 100ರಷ್ಟು ಸಾವಯವ ತೋಟ ಎಂದು ದೃಢೀಕರಿಸಿದೆ. ಟೂ ಬ್ರದರ್ ಆಗ್ಯಾìನಿಕ್ ಫಾರ್ಮ್ ಎಂಬ ಹೆಸರಿನ ಅವರ ತೋಟದ ಭೇಟಿಗೆ ಮತ್ತು ತರಬೇತಿಗೆ ವಿವಿಧ ರಾಜ್ಯಗಳ ಮತ್ತು 14 ವಿದೇಶಗಳ ರೈತರು ಹಾಗೂ ಆಸಕ್ತರು ಭೇಟಿ ನೀಡುತ್ತಿದ್ದಾರೆ. -ಅಡ್ಡೂರು ಕೃಷ್ಣ ರಾವ್