Advertisement
ಹೌದು, ಚುನಾವಣೆ ಅಂದಾಕ್ಷಣ, ದಾಯಾದಿಗಳು ಸಹೋದರರು, ಸಹೋದರರು ದಾಯಾದಿಗಳಾಗುವುದು ಸಹಜ. ತಂದೆ-ಮಗ, ಅಣ್ಣ-ತಮ್ಮ ಪರಸ್ಪರ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸುವುದು ವಿರಳ. ಆದರೆ, ಬಾಗಲಕೋಟೆಯಲ್ಲಿ ಅಣ್ಣ-ತಮ್ಮ ಹಾಗೂ ಮಾವ-ಅಳಿಯ ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಸಹೋದರರು ಬೇರೆ ಬೇರೆ ಕ್ಷೇತ್ರದಲ್ಲಿ, ಬೇರೆ ಬೇರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಕೆಲವೆಡೆ ಪರಸ್ಪರ ವಿರುದ್ಧವಾಗಿಯೂ ಸ್ಪರ್ಧಿಸಿದ ಉದಾಹರಣೆಗಳಿವೆ. ಆದರೆ, ಬಾಗಲಕೋಟೆ ಕ್ಷೇತ್ರದಲ್ಲಿ ಈ ಬಾರಿ, ಅಣ್ಣನ ವಿರುದ್ಧ ತಮ್ಮ ಸ್ಪರ್ಧೆ ಮಾಡಿದರೆ, ಮಾವನ ವಿರುದ್ಧ ಅಳಿಯ ಸ್ಪರ್ಧೆ ಮಾಡುತ್ತಿದ್ದಾರೆ. ಅಣ್ಣ-ತಮ್ಮ ಸ್ಪರ್ಧೆ
ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಡಾ|ವೀರಣ್ಣ ಚರಂತಿಮಠ ಅವರ ವಿರುದ್ಧ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ, ಚುನಾವಣೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಎ.17ರಂದು ನಾಮಪತ್ರ ಸಲ್ಲಿಸುವುದಾಗಿಯೂ ಹೇಳಿದ್ದಾರೆ. ಚರಂತಿಮಠ ಕುಟುಂಬದ ವೀರಣ್ಣ ಚರಂತಿಮಠ ಹಿರಿಯರಾಗಿದ್ದು, ಒಟ್ಟು ಮೂವರು ಸಹೋದರರು, ಇಬ್ಬರು ಸಹೋದರಿಯರಿದ್ದಾರೆ. ಕೊನೆಯ ಸಹೋದರ ಮಲ್ಲಿಕಾರ್ಜುನ ಚರಂತಿಮಠ, ಖಾಸಾ ಅಣ್ಣನ ವಿರುದ್ಧ ಬಹಿರಂಗ ಸಮರಕ್ಕೆ ನಿಂತಿದ್ದಾರೆ. ಇದೇ ಮಲ್ಲಿಕಾರ್ಜುನ ಚರಂತಿಮಠರು, ಹಿಂದೆ ನಾಲ್ಕೈದು ಚುನಾವಣೆಯಲ್ಲಿ ಅಣ್ಣನ ಗೆಲುವಿಗಾಗಿ ಹಳ್ಳಿ ಹಳ್ಳಿಗೆ ತಿರುಗಾಡಿ ಪ್ರಚಾರ ಮಾಡಿದವರು. ನಮ್ಮಣ್ಣ ಬಿಜೆಪಿ ಪಕ್ಷವನ್ನು, ಬಾಗಲಕೋಟೆಯ ಪ್ರತಿಷ್ಠಿತ ಬಿವಿವಿ ಸಂಘವನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಅವರಿಗಾಗಿ ದುಡಿದ ಕಾರ್ಯಕರ್ತರನ್ನು ಕಾಲಕಸ ಮಾಡಿದ್ದಾರೆ ಎಂಬುದು ತಮ್ಮನ ಆರೋಪ.
Related Articles
Advertisement
ಮಾವನ ವಿರುದ್ಧ ಅಳಿಯಕಾಂಗ್ರೆಸ್ನಲ್ಲೂ ಮಾವ-ಅಳಿಯ ಪರಸ್ಪರ ಎದುರಾಳಿಗಳಾಗಿ ರಾಜಕೀಯ ಅಖಾಡಕ್ಕಿಳಿಲು ಸಜ್ಜಾಗಿದ್ದಾರೆ. ಕಾಂಗ್ರೆಸ್‌ನಿಂದ ಬಾಗಲಕೋಟೆ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ವೈ. ಮೇಟಿಗೆ ಟಿಕೆಟ್ ನೀಡಿದ್ದು, ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದ, ಸಂಬಂಧದಲ್ಲಿ ಮೇಟಿ ಅವರ ಅಳಿಯ ಡಾ|ದೇವರಾಜ ಪಾಟೀಲ, ಜೆಡಿಎಸ್ ಸೇರ್ಪಡೆಗೊಂಡಿದ್ದು, ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಕಳೆದ 2008ರಿಂದ ಪಕ್ಷಕ್ಕಾಗಿ, ಮೇಟಿ ಅವರಿಗಾಗಿ ದುಡಿದ್ದು, ಎರಡು ಬಾರಿ ಟಿಕೆಟ್ ಕೊಟ್ಟು ಕಸಿದುಕೊಂಡಿದ್ದಾರೆ. ನಾನು ರಾಜಕೀಯ ಗುರುಗಳು ಎಂದು ಭಾವಿಸಿದವರೇ ನನಗೆ ಅನ್ಯಾಯ ಮಾಡಿದ್ದಾರೆ. ಸ್ವಾಭಿಮಾನಿ ಕಾರ್ಯಕರ್ತರೊಂದಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಮೇಟಿ ಅವರ ಅಳಿಯ ಡಾ|ಪಾಟೀಲ ಹೇಳಿಕೊಂಡಿದ್ದಾರೆ. ಒಟ್ಟಾರೆ, ಈ ಬಾರಿ 224 ಕ್ಷೇತ್ರಗಳಲ್ಲಿ ಬಾಗಲಕೋಟೆ ಕ್ಷೇತ್ರದ ಚುನಾವಣೆ ಮಾತ್ರ ರಂಗೇರಲಿದೆ. ಒಂದೆಡೆ ಸಹೋದರರ ಸವಾಲ್ ನಡೆದರೆ, ಇನ್ನೊಂದೆಡೆ ಮಾವ-ಅಳಿಯ ರಾಜಕೀಯ ಕುಸ್ತಿ ನಡೆಯಲಿದೆ. ನಾಲ್ವರೂ, ಈ ಬಾರಿ ನಾನೇ ಗೆಲ್ಲೋದು ಎನ್ನುತ್ತಿದ್ದಾರೆ. ಮೇ 10ರ ಬಳಿಕ ಮತದಾರನೇ ಸೋಲ್ತಾನೇನೋ ಎಂಬ ಮಾತು ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ. ಶ್ರೀಶೈಲ ಕೆ. ಬಿರಾದಾರ