ಬೆಂಗಳೂರು: ಭೂ ವ್ಯಾಜ್ಯಕ್ಕೆ ಪರಿಹಾರ ಸಿಗಲಿಲ್ಲ ಎಂಬ ಕಾರಣಕ್ಕೆ ಸಹೋದರರಿಬ್ಬರು, ಸಂಜಯ್ ನಗರದಲ್ಲಿರುವ ಸಂಸದ ಕೆ.ಎಚ್ ಮುನಿಯಪ್ಪ ಅವರ ನಿವಾಸದ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
ವೆಂಕಟಾಲ ಗ್ರಾಮದ ಮುನಿರಾಜು ಹಾಗೂ ಅವರ ಸಹೋದರ ರಾಜು ಆತ್ಮಹತ್ಯೆಗೆ ಯತ್ನಿಸಿದವರು. ವೆಂಕಟಾಲ ಗ್ರಾಮದಲ್ಲಿರುವ ಒಂದು ಎಕರೆ 20 ಗುಂಟೆ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಂಸದರ ಬಳಿ ಮಾತುಕತೆಗೆ ಕುಟುಂಬ ಸದಸ್ಯರ ಜತೆ ಬಂದಿದ್ದ ಸಹೋದರರು, ಮನೆಯೊಳಗಡೆ ಕುಳಿತು ಚರ್ಚೆ ನಡೆಸಿದ್ದಾರೆ. ಬಳಿಕ ಸಂಸದರು, “ಭೂ ವ್ಯಾಜ್ಯವಿದ್ದರೆ ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಿ. ನನ್ನ ಮನೆ ಮುಂದೆ ಬಂದು ಗಲಾಟೆ ಮಾಡಿದರೆ ಪರಿಹಾರ ಸಿಗಲ್ಲ’ ಎಂದಿದ್ದಾರೆ ಎನ್ನಲಾಗಿದೆ.
ಸಂಸದರ ಮಾತಿನಿಂದ ಕೋಪಗೊಂಡ ಸಹೋದರರು, ಮನೆ ಹೊರಗೆ ಬಂದು “11 ವರ್ಷಗಳ ಭೂ ವ್ಯಾಜ್ಯಕ್ಕೆ ಸಂಬಧಿಸಿದಂತೆ ನ್ಯಾಯಕೊಡಿಸುತ್ತೇನೆ ಎಂದು ಹೇಳಿದ್ದೀರಿ. ಈಗ ನೀವೇ ವಂಚನೆ ಮಾಡುತ್ತಿದ್ದೀರ’ ಎಂದು ಹೇಳುತ್ತಾ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸಂಸದರ ಬೆಂಬಲಿಗರು ಇಬ್ಬರ ಕೈಲಿದ್ದ ಬೆಂಕಿಪೊಟ್ಟಣ ಕಿತ್ತುಕೊಂಡು ರಕ್ಷಿಸಿದ್ದಾರೆ.
ತಮಗೆ ಸೇರಿದ ಜಮಿನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಮ್‌ಪ್ರಸಾದ್ ಎಂಬುವವರು ವಂಚಿಸಿದ್ದಾರೆ ಎಂದು 2013ರಲ್ಲಿ ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ರಾಮ್‌ಪ್ರಸಾದ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಈ ವೇಳೆ ಸಂಸದ ಕೆ.ಎಚ್ ಮುನಿಯಪ್ಪ,ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು. ಹೀಗಾಗಿ ಭಾನುವಾರ ಸಂಸದರ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಕೆಪಿಸಿಸಿ ಪಟ್ಟ ತಪ್ಪಿಸಲು ಷಡ್ಯಂತ್ರ: ಘಟನೆ ಹಾಗೂ ಜಮೀನು ಕಬಳಿಕೆ ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಸಂಸದ ಮುನಿಯಪ್ಪ, ಜಮೀನು ವಿವಾದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೆಪಿಸಿಸಿ ಅದ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ನನಗೆ ಹುದ್ದೆ ತಪ್ಪಿಸಲು ಮಾಡಿರುವ ಷಡ್ಯಂತ್ರವಿದು ಎಂದು ಆರೋಪಿಸಿದ್ದಾರೆ.