Advertisement

ಅಣ್ತಮ್ಮ ನಿಮ್ಗೆ ವಯಸ್ಸಾಯ್ತಾ?

10:01 AM Oct 22, 2019 | Lakshmi GovindaRaju |

ಯಾವುದೇ ನಟ ಇರಲಿ. ತಾನು ವಿಭಿನ್ನ ಪಾತ್ರದ ಮೂಲಕ ನೋಡುಗರನ್ನು ರಂಜಿಸಬೇಕು ಎಂಬ ಆಸೆ ಇದ್ದೇ ಇರುತ್ತೆ. ಕೆಲವರಿಗೆ ಮಾತ್ರ ವಿಭಿನ್ನ ಪಾತ್ರ ನಿರ್ವಹಿಸುವ ಅವಕಾಶ ಸಿಗುತ್ತೆ. ಅಂತಹ ನಟರ ಸಾಲಿಗೆ ಈಗ ವಿಜಯರಾಘವೇಂದ್ರ ಹಾಗು ಶ್ರೀಮುರಳಿ ಸಹೋದರರಿಗೂ ಸಿಕ್ಕಿದೆ ಅನ್ನೋದೇ ವಿಶೇಷ. ಹೌದು, ಶ್ರೀಮುರಳಿ ಮತ್ತು ವಿಜಯರಾಘವೇಂದ್ರ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ವಯಸ್ಸಿಗೆ ಮೀರಿದ ಪಾತ್ರ ಮಾಡಿದ್ದಾರೆ ಅನ್ನೋದೇ ಈ ಹೊತ್ತಿನ ಸುದ್ದಿ.

Advertisement

ಶ್ರೀಮುರಳಿ ಅವರು ತಮ್ಮ “ಭರಾಟೆ’ ಮೂಲಕ ಭರ್ಜರಿ ಯಶಸ್ಸಿನತ್ತ ದಾಪುಗಾಲು ಇಡುತ್ತಿದ್ದು, ಆ ಚಿತ್ರದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ಅದರಲ್ಲೊಂದು ಗುರುತಿಸಿಕೊಳ್ಳುವಂತಹ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಆ ಪಾತ್ರ ಗಮನಸೆಳೆದಿದೆ. ಶ್ರೀಮುರಳಿ ಅವರು ಅದನ್ನು ಅಷ್ಟೇ ಚಾಲೆಂಜಿಂಗ್‌ ಆಗಿ, ಎಲ್ಲೂ ತಪ್ಪುಗಳು ಕಾಣದಂತೆ ಯಶಸ್ವಿಯಾಗಿಯೇ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಒಂದರ್ಥದಲ್ಲಿ ಶ್ರೀಮುರಳಿ ಪಾತ್ರವನ್ನು ಜೀವಿಸಿದ್ದಾರೆ. ಅಷ್ಟಕ್ಕೂ ಶ್ರೀಮುರಳಿ ಲುಕ್‌ ಇಲ್ಲಿದೆ. ಇದನ್ನು ನೋಡಿದಾಗ, ವಯಸ್ಸಾದ ಅಜ್ಜನ ಪಾತ್ರ ಎಂಬುದು ಗೊತ್ತಾಗುತ್ತೆ. ಹೌದು, ಸಿನಿಮಾದ ದ್ವಿತಿಯಾರ್ಧದಲ್ಲಿ ಈ ಪಾತ್ರ ಕಾಣಿಸಿಕೊಳ್ಳಲಿದೆ. ಅದು ಸಿನಿಮಾದ ಮುಖ್ಯ ಭಾಗ ಎಂಬುದು ವಿಶೇಷ. ಒಂದು ಪಕ್ಕಾ ಕಮರ್ಷಿಯಲ್‌ ಚಿತ್ರದಲ್ಲಿ ಹೀರೋ ಆಗಿಯೂ ಮತ್ತು ಈ ರೀತಿಯ ಪಾತ್ರದಲ್ಲಿ ನಟಿಸುವುದಕ್ಕೂ ಪ್ರೀತಿ ಇರಬೇಕು. ಅದು “ಭರಾಟೆ’ಯಲ್ಲಿ ಶ್ರೀಮುರಳಿ ಪಾತ್ರ ಪ್ರೀತಿಸಿರುವ ರೀತಿ ಗೊತ್ತಾಗುತ್ತೆ.

ಅಂದಹಾಗೆ, ಶ್ರೀಮುರಳಿ ಮಾಡಿರುವ ಆ ವಯಸ್ಸಿನ ಪಾತ್ರದ ಹೆಸರು ರತ್ನಾಕರ. ಅದು ಹೀರೋ ತಾತನ ಪಾತ್ರ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವ ರತ್ನಾಕರನ ಪಾತ್ರದಲ್ಲಿ ಶ್ರೀಮುರಳಿ ಥೇಟ್‌ ಅಜ್ಜನಂತೆಯೇ ನಟಿಸಿದ್ದಾರೆ. ತಕ್ಷಣ ನೋಡಿದವರಿಗೆ ಶ್ರೀಮುರಳಿ ಅನ್ನೋದು ಗೊತ್ತಾಗುವುದಿಲ್ಲ. ಅಂತಹ ತೂಕವಾದ ಪಾತ್ರ ನಿರ್ವಹಿಸಿರುವ ಶ್ರೀಮುರಳಿ ಅವರ ರತ್ನಾಕರ ಪಾತ್ರಕ್ಕೆ ಈಗ ಎಲ್ಲೆಡೆಯಿಂದ ಮೆಚ್ಚುಗೆಯೂ ಸಿಕ್ಕಿದೆ. ಮೊದಲ ಸಲ ಅಂಥದ್ದೊಂದು ಪಾತ್ರ ಮಾಡಿರುವ ಶ್ರೀಮುರಳಿಗೂ ಸಹಜವಾಗಿಯೇ ಹೆಮ್ಮೆ ಇದೆ. ಜನ ಮೆಚ್ಚಿದ ಖುಷಿಯೂ ಇದೆ.

ಮಾಲ್ಗುಡಿಯಲ್ಲಿ ವಿಜಯ್‌ ಕಮಾಲ್‌
ವಿಜಯ ರಾಘವೇಂದ್ರ “ಮಾಲ್ಗುಡಿ ಡೇಸ್‌’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಈಗ ಪೋಸ್ಟರ್‌ ಬಿಡುಗಡೆ ಮಾಡಿದೆ. ಪೋಸ್ಟರ್‌ ನೋಡಿವರಿಗೆ ಅಲ್ಲೊಂದು ಅಚ್ಚರಿ ಕಾದಿದೆ. ಅದು ವಿಜಯ ರಾಘವೇಂದ್ರ ಗೆಟಪ್‌. ಚಿತ್ರದಲ್ಲಿ ವಿಜಯ ರಾಘವೇಂದ್ರ ವಯಸ್ಸಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಖ, ಬಿಳಿ ಕೂದಲಿನ ಶೈಲಿ ಕೂಡಾ ಭಿನ್ನವಾಗಿದೆ.

Advertisement

ಆ ಮುಖದ ಹಿಂದೊಂದು ಕಥೆ ಅಡಗಿದಂತಿದೆ. ಈ ಚಿತ್ರವನ್ನು ಕಿಶೋರ್‌ ಮೂಡುಬಿದ್ರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿನ ವಿಜಯ ರಾಘವೇಂದ್ರ ಅವರ ಗೆಟಪ್‌ ಹಾಗೂ ಮೇಕಪ್‌ ಬಗ್ಗೆ ಮಾತನಾಡುವ ಕಿಶೋರ್‌, “ಬಹುತೇಕ ಇಡೀ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಈ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮಧ್ಯೆ ಒಂದೆರಡು ಕಡೆ ಬೇರೆ ಗೆಟಪ್‌ ಇರುತ್ತದೆ. ಅದು ಕೂಡಾ ವಿಜಯ ರಾಘವೇಂದ್ರ ಅವರ ಒರಿಜಿನಲ್‌ ಗೆಟಪ್‌ ಅಲ್ಲ.

ಇನ್ನು, ಈಗ ಬಿಟ್ಟಿರುವ ಪೋಸ್ಟರ್‌ನಲ್ಲಿರುವ ಮೇಕಪ್‌ಗೆ ಪ್ರಾಸ್ಥೆಟಿಕ್‌ ಮೇಕಪ್‌ ಎನ್ನುತ್ತಾರೆ. ಭಾರತದಲ್ಲಿ ಈ ತರಹದ ಮೇಕಪ್‌ ಮಾಡುವವರ ಸಂಖ್ಯೆ ವಿರಳ. ಅದೇ ಕಾರಣದಿಂದ ನಾವು ಸಾಕಷ್ಟು ಮಂದಿ ವಿದೇಶಿ ಮೇಕಪ್‌ಮ್ಯಾನ್‌ಗಳ ಜೊತೆ ಚರ್ಚೆ ಮಾಡಿದೆವು. ಹೀಗಿರುವಾಗ ನಮಗೆ ಕೇರಳ ಮೂಲದ ರೋಶನ್‌ ಬಗ್ಗೆ ಗೊತ್ತಾಯಿತು. ಅವರು ಕೂಡಾ ಲಂಡನ್‌ನಲ್ಲಿ ಈ ಮೇಕಪ್‌ ಕಲಿತು ಬಂದವರು. ಅವರಿಂದ ಈ ಮೇಕಪ್‌ ಮಾಡಿಸಲಾಗಿದೆ. ಪ್ರತಿ ದಿನ ಈ ಮೇಕಪ್‌ ಹಾಕಲು 4 ಗಂಟೆ ಸಮಯ ಬೇಕಾಗುತ್ತದೆ.

ಅದಕ್ಕಿಂತ ಹೆಚ್ಚಾಗಿ ಆಯಾ ವ್ಯಕ್ತಿಯ ಮುಖಕ್ಕೆ ಹೊಂದುವ ಮೇಕಪ್‌ ಹಾಗೂ ಮೋಲ್ಡ್‌ಗೆ ಒಂದು ತಿಂಗಳ ತಯಾರಿ ಬೇಕು. ಈ ಮೇಕಪ್‌ ಹಾಕಿದ ನಂತರ ತುಂಬಾ ಎಚ್ಚರದಿಂದಿರಬೇಕು. ಹೆಚ್ಚು ಬೆವರಬಾರದು, ಊಟ-ತಿಂಡಿ ಮಾಡುವಾಗಲೂ ಎಚ್ಚರವಹಿಸಬೇಕು’ ಎಂದು ವಿಜಯ ರಾಘವೇಂದ್ರ ಅವರ ಹೊಸ ಗೆಟಪ್‌ ಬಗ್ಗೆ ಹೇಳುತ್ತಾರೆ ಕಿಶೋರ್‌. ಅಂದಹಾಗೆ, “ಮಾಲ್ಗುಡಿ ಡೇಸ್‌’ ಚಿತ್ರ ನೆನಪುಗಳ ಸುತ್ತ ಸಾಗುತ್ತದೆಯಂತೆ. ಮಾಲ್ಗುಡಿ ಎಂಬ ಊರಲ್ಲಿ ನಡೆಯುವ ಕಥೆಯನ್ನು ಇಲ್ಲಿ ಹೇಳಲಾಗಿದೆ. ಚಿತ್ರ ಡಿಸೆಂಬರ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next