Advertisement

ಶಿಥಿಲ ಮನೆಯಲ್ಲಿ ಅನಾಥರಂತೆ ಬದುಕುವ ಅಣ್ಣ-ತಂಗಿ

07:23 AM Apr 23, 2019 | mahesh |

ಸುಬ್ರಹ್ಮಣ್ಯ: ಬಾಲ್ಯದಲ್ಲಿಯೇ ತಂದೆ, ತಾಯಿಯನ್ನು ಕಳೆದುಕೊಂಡ ಎರಡು ಬಡ ಜೀವಗಳು ಜೀವನ ಸಾಗಿಸೋಕೆ ಸಾಕಷ್ಟು ಕಷ್ಟ ಪಡುತ್ತಲಿದೆ. ಇವರ ಮಾನ, ಪ್ರಾಣಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ! ಹೆತ್ತವರನ್ನು ಕಳಕೊಂಡ ಅಣ್ಣ-ತಂಗಿ (ಕೇಶವ ಮತ್ತು ಪದ್ಮಾವತಿ) 9 ವರ್ಷಗಳಿಂದ ಹರಿಹರ ಪಳ್ಳತ್ತಡ್ಕ ಗ್ರಾಮದ ದೇವರುಳಿಯದಲ್ಲಿ ಕಣ್ಣೀರಿನಲ್ಲೇ ದಿನ ಕಳೆಯುತ್ತಿದ್ದಾರೆ. ದೇವರುಳಿಯ ನಿವಾಸಿ ಲಿಂಗಪ್ಪ-ಸುಂದರಿ ದಂಪತಿಯ ಮಕ್ಕಳಿವರು.

Advertisement

ದಂಪತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. 2010ರಲ್ಲಿ ಲಿಂಗಪ್ಪ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿ ಅಗಲಿಕೆ ನೋವಿಂದ ಹೊರಬರಲಾಗದಿದ್ದರೂ ಪತ್ನಿ ಸುಂದರಿ ಮಕ್ಕಳನ್ನು ಸಾಕುತ್ತಿದ್ದರು. ಆದರೆ ವಿಧಿ ಅವರ ಮೇಲೂ ಕಣ್ಣಿಟ್ಟಿತು. ಕಾಯಿಲೆಗೆ ತುತ್ತಾಗಿ 2011ರಲ್ಲಿ ಅವರೂ ಇಹಲೋಕ ತ್ಯಜಿಸಿದರು. ಅನಂತರ ಮಕ್ಕಳಿಬ್ಬರು ತಬ್ಬಲಿಗಳಾದರು.

ಮುರುಕಲು ಮನೆ
ಇರಲು ಸರಿಯಾದ ಸೂರು ಇಲ್ಲದೆ ಹಕ್ಕಿ ಗೂಡಿನಂತಹ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ಲಾಸ್ಟಿಕ್‌ ಹೊದಿಕೆಯ ಛಾವಣಿ ಒಳಗೆ ವಯಸ್ಸಿಗೆ ಬಂದ ಹೆಣ್ಣು ಮಗಳು ಮತ್ತು ಯುವಕ ವಾಸವಿದ್ದಾರೆ. ಹೊಕ್ಕು ನೋಡಿದರೆ ಛಾವಣಿಗೆ ನಕ್ಷತ್ರ ಎಣಿಸುವಷ್ಟು ರಂಧ್ರಗಳಿವೆ. ಮಣ್ಣಿನ ಗೋಡೆಗಳು ಧರೆಗುರುಳಲು ಸಿದ್ಧವಾಗಿವೆ.

ಸವಲತ್ತು ಬಲು ದೂರ
ಈ ಬಡ ಕುಟುಂಬಕ್ಕೆ ಆಸ್ತಿ ಇಲ್ಲ. 94ಸಿ ಯೋಜನೆಯಲ್ಲಿ ಹಕ್ಕುಪತ್ರ ಸಿಕ್ಕಿದೆ. ಆದರೆ ವಿದ್ಯುತ್‌, ನೀರು ಸಹಿತ ಯಾವುದೇ ಮೂಲ ಸೌಕರ್ಯವಿಲ್ಲ. ವಿವಿಧ ಯೋಜನೆಯಲ್ಲಿ ಸೂರು ನಿರ್ಮಾಣಕ್ಕೆ ಅವಕಾಶಗಳಿವೆ. ಆದರೆ ಇವರಿಗೆ ಸೂಕ್ತ ಮಾರ್ಗದರ್ಶನ ನೀಡುವವರು ಯಾರೂ ಇಲ್ಲ. ಹೀಗಾಗಿ ಸರಕಾರದ ನಿವೇಶನ ಸಹಿತ ಇನ್ನಿತರ ಸೌಲಭ್ಯಗಳಿಂದ ಅವರು ವಂಚಿತ ರಾಗಿದ್ದಾರೆ. ಶಿಥಿಲಗೊಂಡಿರುವ ಮನೆ ಮಳೆ, ಗಾಳಿಗೆ ಬೀಳುವ ಸ್ಥಿತಿಯಲ್ಲಿದೆ.

ಮಾನ, ಪ್ರಾಣಕ್ಕೆ ರಕ್ಷಣೆಯಿಲ್ಲ
ಕೇಶವ ಅವರು ಸುಬ್ರಹ್ಮಣ್ಯ ನಗರದ ಖಾಸಗಿ ವಸತಿಗೃಹದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪದ್ಮಾವತಿ ಅವರು ಸುಳ್ಯದಲ್ಲಿ ಖಾಸಗಿ ಕೊರಿಯರ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಿತ್ಯವೂ 40 ಕಿ.ಮೀ. ಕ್ರಮಿಸಿ ದುಡಿಯುತ್ತಿದ್ದಾರೆ. ಅದರಿಂದ ಬರುವ ಆದಾಯವೂ ಅಲ್ಪ.

Advertisement

ಕತ್ತಲಲ್ಲಿ ಒಂಟಿ ಯುವತಿ ವಾಸ
ಅಣ್ಣ ರಾತ್ರಿ ಪಾಳಿಯಲ್ಲಿ ದುಡಿಮೆ ಮಾಡುವುದರಿಂದ ದಟ್ಟ ಕಾನನದೊಳಗಿನ ಮನೆಯೊಳಗೆ ಪದ್ಮಾವತಿ ಒಂಟಿಯಾಗಿ ರಾತ್ರಿ ಕಳೆಯಬೇಕು. ಮಾನ, ಪ್ರಾಣದ ಆಸೆ ಬಿಟ್ಟು ಮುರುಕಲು ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಭಾಗ್ಯ ಜ್ಯೋತಿ ಯೋಜನೆಯಲ್ಲಿ ಮನೆಗೆ ವಿದ್ಯುತ್‌ ಸಂಪರ್ಕದ ಮೀಟರ್‌ ಜೋಡಿಸಲಾಗಿದೆ. ಆದರೆ ವಿದ್ಯುತ್‌ ಸಂಪರ್ಕ ಆಗಿಲ್ಲ. ಹೀಗಾಗಿ ರಾತ್ರಿ ಕತ್ತಲೆಯಲ್ಲಿ ಭಯ, ಆತಂಕದಿಂದಲೇ ಚಿಮಿಣಿ ದೀಪದ ಬೆಳಕಿನಲ್ಲಿಯೇ ಒಂಟಿ ಯುವತಿ ವಾಸಿಸಬೇಕಾದ ಅನಿವಾರ್ಯತೆ ಇಲ್ಲಿದೆ.

ನೆರವಿಗೆ ಮೊರೆ
ಮಳೆ ಸುರಿಯಲಾರಂಭಿಸಿದರೆ ಅವರ ಜೀವನ ಕಷ್ಟ. ಈ ಮಳೆಗಾಲ ಇದೇ ಜೋಪಡಿಯಲ್ಲೆ ಜೀವನ ಕಳೆಯುವುದು ಅನಿವಾರ್ಯ. ಮುಂದಿನ 4-5 ತಿಂಗಳು ಸಿಡಿಲು, ಮಿಂಚು, ಗಾಳಿ, ಮಳೆಗೆ ಈ ಜೋಪಡಿಯಲ್ಲೆ ಜೀವನ ಸಾಗಿಸುವುದು ಹೇಗೆ ಎನ್ನುವುದು ಅವರಿಬ್ಬರನ್ನು ಚಿಂತೆಗೀಡು ಮಾಡಿದೆ. ಮನೆ, ವಿದ್ಯುತ್‌ ಹಾಗೂ ಇತರ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ. ಈ ಮನೆಗೆ ಇದ್ದ ರಸ್ತೆ ರಸ್ತೆ ಸಮಸ್ಯೆಯನ್ನು ಗ್ರಾ.ಪಂ. ಆಡಳಿತ ಇತ್ತೀಚೆಗೆ ನಿವಾರಿಸಿ, ರಸ್ತೆ ದುರಸ್ತಿ ಮಾಡಿಸಿಕೊಟ್ಟಿದ್ದನ್ನು ಕೇಶವ ಹಾಗೂ ಪದ್ಮಾವತಿ ಸ್ಮರಿಸುತ್ತಾರೆ.

ಮನೆ ಒದಗಿಸಲು ಆದ್ಯತೆನಿವೇಶನರಹಿತವಾದ ಈ ಫ‌ಲಾನುಭವಿ ಕುಟುಂಬವನ್ನು ವಸತಿರಹಿತರ ಪಟ್ಟಿಗೆ ಸೇರಿಸಲಾಗಿದೆ. ಮುಂದಿನ ಸಾಲಿನಲ್ಲಿ ಉದ್ದೇಶಿಸಿ ರುವ 20 ಕುಟುಂಬಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಈ ಕುಟುಂಬಕ್ಕೆ ಆದ್ಯತೆಯ ಮೇರೆಗೆ ಮನೆ ಹಂಚಿಕೆ ಮಾಡಲಾಗುವುದು. ನೀತಿ ಸಂಹಿತೆ ಮುಗಿದ ಬಳಿಕ ಈ ಕುಟುಂಬಕ್ಕೆ ಪಂಚಾಯತ್‌ನ ಲಭ್ಯ ಯೋಜನೆಗಳನ್ನೂ ಒದಗಿಸುತ್ತೇವೆ.
– ಪದ್ಮನಾಭ ಪಳ್ಳಿಗದ್ದೆ ಪಿಡಿಒ, ಹರಿಹರ-ಪಳ್ಳತ್ತಡ್ಕ

ಯಾತನೆಯ ಬದುಕುಮನೆಯಲ್ಲಿ ನನ್ನೊಂದಿಗೆ ತಂಗಿ ವಾಸವಿದ್ದಾಳೆ. ಹಗಲಲ್ಲಿ ಬೇರೆ ಕೆಲಸಕ್ಕೆ ಬಿಡುವು ಬೇಕಾಗುತ್ತದೆ. ಈ ಕಾರಣಕ್ಕೆ ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತೇನೆ. ರಾತ್ರಿ ಹೊತ್ತು ತಂಗಿ ಒಬ್ಬಳೇ ಮನೆಯಲ್ಲಿ ವಾಸವಿರುವುದು ಅನಿವಾರ್ಯ. ಹತ್ತಿರದಲ್ಲಿ ಮನೆಗಳೂ ಇಲ್ಲದಿರುವುದರಿಂದ ಈ ಯಾತನೆ ಅನುಭವಿಸಬೇಕಿದೆ.
– ಕೇಶವ ದೇವರುಳಿಯ

ಬಾಲಕೃಷ್ಣ ಭೀಮಗುಳಿ

 

Advertisement

Udayavani is now on Telegram. Click here to join our channel and stay updated with the latest news.

Next