ಬೆಂಗಳೂರು: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್‌ನಲ್ಲಿ ಕೇವಲ 2 ಲಕ್ಷ ರೂ. ವರೆಗಿನ ಸುಸ್ತಿಸಾಲ ಮನ್ನಾ ಮಾಡಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ.
ಬಜೆಟ್ ಮಂಡನೆ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಯಡಿಯೂರಪ್ಪ, ಹಾಸನ, ರಾಮನಗರ ಸಹಿತ ತಾವು ಪ್ರಾಬಲ್ಯ ಹೊಂದಿದ ಜಿಲ್ಲೆಗಳಿಗೆ ಹೆಚ್ಚು ಮನ್ನಣೆ ನೀಡಿ ಕರಾವಳಿ ಹಾಗೂ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿರುವ “ಅಣ್ಣ-ತಮ್ಮಂದಿರ’ ಬಜೆಟ್ ಇದಾಗಿದೆ. ತಾವು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದಾರೆ ಎಂದು ಕಿಡಿಕಾರಿದರು.
34 ಸಾವಿರ ಕೋಟಿ ರೂ. ಸುಸ್ತಿಸಾಲ ಮನ್ನಾ ಎಂದು ಬಜೆಟ್‌ನಲ್ಲಿ ಸಿಎಂ ಹೇಳಿಕೊಂಡಿದ್ದಾರೆ. ಆದರೆ 6,050 ಕೋಟಿ ರೂ.ಗಳಿಗೆ ಮಾತ್ರ ಹೊಂದಾಣಿಕೆ ತೋರಿಸಿದ್ದಾರೆ. ಹಾಗಾದರೆ 34 ಸಾವಿರ ಕೋಟಿ ರೂ.ಗಳಿಗೆ ಹೇಗೆ, ಎಲ್ಲಿ ಹೊಂದಾಣಿಕೆ ಮಾಡಿದ್ದಾರೆ ಎಂಬುದನ್ನು ಸಿಎಂ ಪತ್ರಿಕಾಗೋಷ್ಠಿ ಮಾಡಿ ವಿವರಿಸಲಿ ಎಂದು ಸವಾಲು ಹಾಕಿದರು. ಅಲ್ಲದೆ, ಹಿಂದಿನ ಸರ್ಕಾರಕ್ಕಿಂತ ಸಾಲ ಪ್ರಮಾಣ ಹೆಚ್ಚಿಸಿದ್ದಾರೆ ಇದೇ ಇವರ ಸಾಧನೆ ಎಂದು ವಾಗ್ಧಾಳಿ ನಡೆಸಿದರು.
ಜತೆಗೆ ನೇಕಾರರು, ಸ್ತ್ರೀ ಶಕ್ತಿ ಗುಂಪುಗಳು, ಮೀನುಗಾರರ ಸಾಲಮನ್ನಾ ಬಗ್ಗೆ ಮಾತನಾಡಿಲ್ಲ. ಇದನ್ನು ನಾವು ಬಜೆಟ್ ಎಂದು ಕರೆಯಬೇಕೆ? ರಾಜ್ಯದ ಯಾವುದೇ ವರ್ಗಕ್ಕೆ ಬಜೆಟ್‌ನಲ್ಲಿ ನ್ಯಾಯ ಒದಗಿಸಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಸದನದ ಒಳಗೆ ಹಾಗೂ ಜು 12ರ ಅನಂತರ ರಾಜ್ಯದ ಉದ್ದಗಲಕ್ಕೆ ಹೋರಾಟ ಮಾಡುತ್ತೇವೆ ಎಂದರು.
ಡೀಸೆಲ್, ಪೆಟ್ರೋಲ್, ವಿದ್ಯುತ್ ಮೇಲಿನ ತೆರಿಗೆ ದರ ಹೆಚ್ಚಿಸಿ ರೈತ ಹಾಗೂ ಶ್ರೀ ಸಾಮಾನ್ಯನ ಮೇಲೆ ಹೊರೆ ಹಾಕಿ ಸಾಲಮನ್ನಾ ಮಾಡಿದ್ದೇನೆ ಎಂದು ರಾಜಕೀಯ ದೊಂಬರಾಟ ಮಾಡಿದ್ದಾರೆ. ಶ್ರೀ ಸಾಮಾನ್ಯ ಬದುಕುವುದಾದರೂ ಹೇಗೆ ಇದಕ್ಕೆ ಮುಖ್ಯಮಂತ್ರಿ ಉತ್ತರ ಕೊಡಬೇಕಿದೆ ಎಂದರು.
ಹಿರಿಯ ನಾಗರಿಕರಿಗೆ ಮಾಸಾಶನ ನೀಡುವ ಭರವಸೆ ಈಡೇರಿಸಲಿಲ್ಲ. ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿಯನ್ನು 2 ಕೆ.ಜಿ ಇಳಿಸಿರುವುದು ನಿಮ್ಮ
ಸಾಧನೆಯೇ ಎಂದು ಕಟುವಾಗಿ ಮುಖ್ಯಮಂತ್ರಿಯನ್ನು ಯಡಿಯೂರಪ್ಪ ಅವರು ಪ್ರಶ್ನಿಸಿದರು.
ಕೊಟ್ಟ ಭರವಸೆ ಈಡೇರಿಸಲು ವಿಫಲ ಆಗಿರುವ ಸಿಎಂ ಸ್ವ ಹಿತದ ರಾಜಕೀಯ ಬಜೆಟ್ ಮಂಡಿಸಿ ಕಾಂಗ್ರೆಸ್ ಮುಲಾಜಿನಲ್ಲಿ ಇರುವುದನ್ನು ಸಾಬೀತು ಮಾಡಿದ್ದಾರೆ. ಇದು ಜನರ ಕಣ್ಣಿಗೆ ಮಣ್ಣೆರಚುವ ಬಜೆಟ್.
ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ