ವಿಜಯಪುರ: ಜಿಲ್ಲೆಯ ಸಹೋದರ-ಸಹೋದರಿ ಸಸ್ಯಗಳ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ ನಡೆಸಿ ವಿಶ್ವದಾಖಲೆ ಬರೆದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ನಗರದ ಐಶ್ವರ್ಯ ನಗರದ ಪ್ರಾಥಮಿಕ ಶಾಲಾ ಶಿಕ್ಷಕ ಶ್ರೀಮಂತ ಡೊಣಗಿ ಹಾಗೂ ಬಂಗಾರೆವ್ವ ಡೊಣಗಿ ಅವರ ಪುತ್ರ ರೇವಣ್ಣ ಹಾಗೂ ಪುತ್ರಿ ಭಾಗ್ಯಶ್ರೀ ಸಸ್ಯಗಳ ಸಂಶೋಧನೆಯಲ್ಲಿ ದಾಖಲೆ ಮಾಡಿದ್ದಾರೆ.
ನಗರದ ಶಾಂತಿನಿಕೇತನ ಪ್ರಾಥಮಿಕ ಶಾಲೆಯಲ್ಲಿ ರೇವಣ್ಣ 6ನೇ ತರಗತಿ ಹಾಗೂ ಭಾಗ್ಯಶ್ರೀ 7ನೇ ತರಗತಿಯಲ್ಲಿ ಓದುತ್ತಿದ್ದಾರೆ. ಕಿರಿಯ ವಯಸ್ಸಿನಲ್ಲಿ ಸಸ್ಯಗಳ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ ನಡೆಸಿ ಹಿರಿಯ ಸಾಧನೆ ಮಾಡಿದ್ದಾರೆ.
ಭಾಗ್ಯಶ್ರೀ ಡೊಣಗಿ ಕೂಡ ಚದುರಂಗ ಸಸ್ಯದ ಮೇಲೆ ಸಂಶೋಧನೆ ನಡೆಸಿ ವಿಶ್ವ ದಾಖಲೆ ಮಾಡಿದ್ದಾಳೆ. ಚದುರಂಗ ಸಸ್ಯ ಒಂದು ಉಪಯುಕ್ತ ವೈದ್ಯಕೀಯ ಸಸ್ಯ. ಈ ಲ್ಯಾಂಟೆನಾ ಕೆಮರಾ ಸಸ್ಯ ಬಗ್ಗೆ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿದ್ದು ವಂಡರ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾಳೆ. 5ನೇ ಮಾರ್ಚ್ 2021ರಿಂದ 20ನೇ ನವೆಂಬರ್ 2021ರವರೆಗೆ 9 ತಿಂಗಳು ಅಧ್ಯಯನ ನಡೆಸಿದ್ದಳು. ನಾನು ಲ್ಯಾಂಟೆನಾ ಕೆಮರಾ ಸಸ್ಯದ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ ಕೈಗೊಂಡು ಯಶಸ್ವಿಯಾಗಿ ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆಯಾಗಿರುವುದ ಸಂತಸ ತಂದಿದೆ ಎಂದಿದ್ದಾಳೆ.
ಭಾಗ್ಯಶ್ರೀ ತಮ್ಮ ರೇವಣ್ಣನ ಗಜ್ಜುಗದ ಮೇಲೆ ಸಂಶೋಧನೆ ಮಾಡಿ ದಾಖಲೆ ಮೆರೆದಿದ್ದಾರೆ. ಗಜ್ಜುಗ ಬೆಳೆಯೋಣ, ಸಜ್ಞಾನಿ ಬಾಳ್ಳೋಣ, ಅಳಿವಿನ ಅಂಚಿನಲ್ಲಿರುವ ಗಜ್ಜುಗ ಉಳಿಸೋಣ ವಿಷಯದ ಗಜ್ಜುಗದ ಒಂದು ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ ಮಾಡಿ ಅದರ ಸಮಗ್ರ ಪ್ರಬಂಧ ರಚಿಸಿ ಡೈಮಂಡ್ ಬುಕ್ ಅಫ್ ವರ್ಲ್ಡ್ ಸೇರಿದ್ದಾನೆ. 11ನೇ ಮಾರ್ಚ್ 2021ರಂದು ಅಧ್ಯಯನ ಆರಂಭಿಸಿ 19ನೇ ನವೆಂಬರ್ 2021ಕ್ಕೆ ಸಂಪೂರ್ಣ ಮುಗಿಸಿದ್ದು 9 ತಿಂಗಳಲ್ಲಿ ಈ ಸಾಧನೆ ಮಾಡಿದ್ದಾನೆ.
ನಾನು ಕೈಗೊಂಡ ಗಜ್ಜುಗ ಸಸ್ಯದ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ ಯಶಸ್ವಿಯಾಗಿದ್ದಲ್ಲದೆ ವಿಶ್ವದಾಖಲೆಯೂ ಆಗಿದ್ದು ತುಂಬಾ ಹೆಮ್ಮೆ ಎನಿಸುತ್ತದೆ ಎನ್ನುವ ರೇವಣ್ಣ, ಚಿತ್ರಕಲೆ, ಯೋಗದಲ್ಲೂ ತನಗಿರುವ ಆಸಕ್ತಿಯನ್ನು ಜನರಿಗೆ ಧಾರೆ ಎರೆಯಲು ಸಿದ್ಧ ಎನ್ನುತ್ತಾನೆ.