Advertisement

ವಿಶಾಲ ಮನಸ್ಸು! ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳಿಗೆ ಸಂಪೂರ್ಣ ಬೆಂಬಲ

03:50 AM Jul 07, 2017 | Harsha Rao |

ಕೆಲವು ವರ್ಷಗಳ ಹಿಂದೆ “ಬಣ್ಣ ಬಣ್ಣದ ಲೋಕ’ ಎಂಬ ಚಿತ್ರದಲ್ಲಿ ಹರ್ಷ ಮತ್ತು ರಘು ಎಂಬ ಹುಡುಗರು ಒಟ್ಟಿಗೆ ನಟಿಸುತ್ತಿದ್ದರಂತೆ. ಚಿತ್ರ ಮುಗಿಯುವ ಹೊತ್ತಿಗೆ, ರಘು ಜೀವನದಲ್ಲೇನೇನೋ ಘಟನೆಗಳಾಗಿ, “ಬಣ್ಣ ಬಣ್ಣದ ಬದುಕ’ನ್ನು ನೋಡುವುದಕ್ಕೆ ಕಣ್ಣೇ ಇಲ್ಲದಂತಾಯಿತಂತೆ. ಆ ಸಂದರ್ಭದಲ್ಲಿ, ರಘು ಜೀವನ ಸಿನಿಮಾ ಆಗಬಹುದು ಮತ್ತು ಆ ಪಾತ್ರದಲ್ಲಿ ತಾನು ನಟಿಸಬಹುದು ಎಂದು ಹರ್ಷಗೆ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈಗ ಅದಾಗಿದೆ.

Advertisement

ಕೆಲವು ವರ್ಷಗಳ ಹಿಂದೆ ಪ್ರೀತಿಸಿದ ತಪ್ಪಿಗೆ, ಹುಡುಗಿಯ ಕಡೆಯವರು ಹುಡುಗನ ಕಣ್ಣು ಕಿತ್ತ ಘಟನೆ ನಡೆದಿತ್ತು. ಹಾಗೆ ಕಣ್ಣು ಕಿತ್ತು ಬೇರ್ಯಾರದ್ದೂ ಅಲ್ಲ, “ಬಣ್ಣ ಬಣ್ಣದ ಬದುಕು’ ಅಲಿಯಾಸ್‌ ಜಿಮ್‌ ರಘು ಅವರದ್ದು. ಈಗ ಅದೇ ರಘುವಿನ ಲವ್‌ಸ್ಟೋರಿ, “ರಘುವೀರ’ ಹೆಸರಿನಲ್ಲಿ ಚಿತ್ರವಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಚಿತ್ರದ ಹಾಡುಗಳು ಸಹ ಬಿಡುಗಡೆಯಾಗಿದೆ. ಈ ಹಾಡುಗಳನ್ನು ಬಿಡುಗಡೆ ಮಾಡಿದು ತಮಿಳು ನಟ ವಿಶಾಲ್‌. ಟೌನ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚೆನ್ನೈನಿಂದ ವಿಶಾಲ್‌ ಬಂದಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಜೊತೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶಾಲ್‌, “ಕರ್ನಾಟಕದಲ್ಲಿ ತಮಿಳು ಚಿತ್ರಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಅದೇ ರೀತಿ ತಮಿಳುನಾಡಿನಲ್ಲೂ ಕನ್ನಡ ಚಿತ್ರಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಕನ್ನಡ ಚಿತ್ರಗಳಿಗೆ ಪ್ರದರ್ಶನ ವ್ಯವಸ್ಥೆ ಮಾಡುವುದು ನಮ್ಮ ಜವಾಬ್ದಾರಿ. ಇದನ್ನು ತಮಿಳು ಚಿತ್ರಗಳ ನಿರ್ಮಾಪಕರ ಸಂಘದ ಅಧ್ಯಕ್ಷನಾಗಿ ಹೇಳುತ್ತಿಲ್ಲ, ಕನ್ನಡ ಚಿತ್ರಗಳ ಅಭಿಮಾನಿಯಾಗಿ ಹೇಳುತ್ತಿದ್ದೇನೆ’ ಎಂದು ವಿಶಾಲ್‌ ಹೇಳಿದರು.

“ರಘುವೀರ’ ಚಿತ್ರವನ್ನು ದೇನು ಅಚ್ಚಪ್ಪ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಕೆಂಪ’ ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ದೇನು, ಈ ಚಿತ್ರವನ್ನು ನಿರ್ಮಿಸುತ್ತಿರುವುದಷ್ಟೇ, ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ಹರ್ಷ ನಾಯಕನಾಗಿ ನಟಿಸಿದರೆ, ಸ್ವಾಮಿನಾಥನ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೈಜ ಘಟನೆಗೆ ಚಿತ್ರಕಥೆ ಬರೆಯುವುದರ ಜೊತೆಗೆ ಸೂರ್ಯ ಸತೀಶ್‌ ನಿರ್ದೇಶನವನ್ನೂ ಮಾಡಿದ್ದಾರೆ. ಇನ್ನು ಲಯ ಕೋಕಿಲ ಚಿತ್ರಕ್ಕೆ ಸಂಗೀತವನ್ನು ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next