Advertisement

ಬ್ರಿಟಿಷ್‌ ಉಕ್ಕು: ಟಾಟಾ ಸ್ಟೀಲ್‌ ಎನ್ನಿಸಿಕೊಂಡ ಕತೆ

01:01 PM Oct 08, 2017 | |

ಜಗತ್ತನ್ನು ಬದಲಿಸಿದ ಕೈಗಾರಿಕೆಗಳ ಬಗ್ಗೆ ತಿಳಿಯಲು ಹೊರಟರೆ ಬ್ರಿಟನ್ನಿನ ಕೈಗಾರಿಕಾ ಕ್ರಾಂತಿಯ ಬಗ್ಗೆ ಓದಲೇಬೇಕಾಗುತ್ತದೆ. ಮತ್ತೆ ಬ್ರಿಟಿಷ್‌ ಕೈಗಾರಿಕಾ ಕ್ರಾಂತಿಯ ಇತಿಹಾಸದ ಪುಟಗಳನ್ನು  ತಿರುವಿದರೆ ಅಲ್ಲಿ ಬ್ರಿಟನ್ನಿನ ಉಕ್ಕಿನ ಉದ್ಯಮದ ಹಲವು ಕತೆಗಳು ಎದುರಾಗುತ್ತವೆ. 18ನೆಯ ಶತಮಾನದಲ್ಲಿ ಜಗ್ಗತ್ತಿನ ಉಕ್ಕಿನ ಉದ್ಯಮದ ಕೇಂದ್ರಸ್ಥಾನ  ಎಂದೇ ಇಂಗ್ಲೆಂಡ್‌ ಗುರುತಿಸಲ್ಪಟ್ಟಿತ್ತು. ದೇಶ-ವಿದೇಶಗಳಿಗೆ ಕಳುಹಿಸಲ್ಪಡುತ್ತಿದ್ದ  ಅತ್ಯುತ್ತಮ ಗುಣಮಟ್ಟದ ಉಕ್ಕುಗಳು ಬ್ರಿಟನ್ನಿನ ಬೇರೆ ಬೇರೆ ಊರುಗಳಲ್ಲಿದ್ದ ಕಾರ್ಖಾನೆಗಳಲ್ಲಿ  ತಯಾರಾಗುತ್ತಿದ್ದವು; ಉಕ್ಕನ್ನು ತಯಾರಿಸುವ ತಂತ್ರಜ್ಞಾನದಲ್ಲಿ ಪರಿಣತಿ, ನಿಷ್ಣಾತ ಬ್ರಿಟಿಷ್‌ ಕಾರ್ಮಿಕರು ಮತ್ತು ಜಗತ್ತಿನ ನಾಲ್ಕನೆಯ  ಒಂದು ಭಾಗದಲ್ಲಿ ತಮ್ಮದೇ ಆಳ್ವಿಕೆಯ ಸಾಮ್ರಾಜ್ಯ, ಕೈಗಾರಿಕೆಯೊಂದು ಹುಲುಸಾಗಿ ಬೆಳೆಯಲು ಬೇಕಾದ ಪೂರಕ ಅಂಶಗಳೆಲ್ಲ ಬ್ರಿಟನ್ನಿನ ಪರವಾಗಿಯೇ ಇದ್ದ ಕಾಲವಾಗಿತ್ತು ಅದು.  ಹತ್ತೂಂಬತ್ತನೆಯ ಶತಮಾನದಲ್ಲಿ ಬ್ರಿಟಿಷ್‌ ಉಕ್ಕಿನ ಉದ್ಯಮದ ಉತ್ಕರ್ಷ ಜಗತ್ತಿನ ಮತ್ಸರಕ್ಕೆ ಕಾರಣವಾಗಿತ್ತು. 20ನೆಯ ಶತಮಾನದ ಮೊದಲ ಭಾಗದಲ್ಲಿ ನಡೆದ ವಿಶ್ವ ಯುದ್ಧಗಳಲ್ಲಿ ಬಳಸಲ್ಪಡುತ್ತಿದ್ದ  ಆಯುಧಗಳು ಉಕ್ಕಿಗೆ ಬಹಳ ಬೇಡಿಕೆ ತಂದಕೊಟ್ಟವು ಮತ್ತು ಬ್ರಿಟಿಷ್‌ ಉಕ್ಕಿನ ಉದ್ಯಮ ತನ್ನ ತುರೀಯಾವಸ್ಥೆಯನ್ನು ಮುಟ್ಟಿತು. ಬ್ರಿಟಿಷ್‌ ಸ್ಟೀಲ್‌ ಮತ್ತು ಬ್ರಿಟಿಷ್‌ ಇಂಜಿನಿಯರಿಂಗ್‌ ಇವೆರಡೂ 18ರಿಂದ 20ನೆಯ ಶತಮಾನದ ಮಧ್ಯಭಾಗದವರೆಗೂ ಜಗತ್ತಿನ ಉತ್ಕೃಷ್ಟ  ಬ್ರಾಂಡ್‌ಗಳಾಗಿದ್ದವು.

Advertisement

1967ರಲ್ಲಿ ಬ್ರಿಟಿಷ್‌ ಉಕ್ಕಿನ ಉದ್ಯಮ ರಾಷ್ಟ್ರೀಕರಣಗೊಂಡಿತು. 20ನೆಯ ಶತಮಾನದ ಕೊನೆಯ ಭಾಗದಲ್ಲಿ, 1970ರ ದಶಕದಲ್ಲಿ ಪಾಶ್ಚಾತ್ಯ ದೇಶಗಳು ರಿಸೆಶನ್‌ ಅನುಭವಿಸುವಾಗ  ಬ್ರಿಟಿಶ್‌ ಅರ್ಥ ವ್ಯವಸ್ಥೆ ಕೂಡ ಪತನವನ್ನು ಕಂಡಿತು. ಜಾಗತೀಕರಣ ಎಲ್ಲ ದೇಶ-ದಿಕ್ಕುಗಳಲ್ಲಿ ಪ್ರತಿಧ್ವನಿಸುತ್ತಿದ್ದ  ಜನಪ್ರಿಯ ಶಬ್ದವಾಗಿತ್ತು. ಇಲ್ಲಿ  ತಯಾರಿಸಲ್ಪಟ್ಟ ದುಬಾರಿ ಉಕ್ಕು ರಷ್ಯಾ, ಚೈನಾ, ಭಾರತದಂತಹ ದೇಶಗಳ ಕಡಿಮೆ ದರದ ಉಕ್ಕಿನೊಡನೆ ಜಾಗತಿಕ ಮಾರುಕಟ್ಟೆಯಲ್ಲಿ ಹೋರಾಡಿ ಸೋಲತೊಡಗಿತ್ತು. ಇದು ಬ್ರಿಟನ್‌ನಲ್ಲಿ ಉತ್ಪಾದನೆಗೊಳ್ಳುತ್ತಿದ್ದ ಉಕ್ಕಿನ ಮಟ್ಟಿಗಷ್ಟೇ ಅಲ್ಲದೆ ಇಲ್ಲಿನ ಎಲ್ಲ ಕೈಗಾರಿಕೋದ್ಯಮಗಳಿಗೂ ಅನ್ವಯ ಆಗುತ್ತಿತ್ತು. ಬ್ರಿಟನ್ನಿನ ಸರಕಾರಗಳು ತನ್ನ ಪರಿಣತಿಯ ಕೈಗಾರಿಕೆಗಳನ್ನು ಉಳಿಸುವ ನಿಟ್ಟಿನಲ್ಲಿ ಯಾವ ಯೋಚನೆಯನ್ನೂ ಮಾಡಲಿಲ್ಲ ಯೋಜನೆಗಳನ್ನೂ ತರಲಿಲ್ಲ; ಬ್ರಿಟಿಷರ ನವೀನ ಆರ್ಥಿಕ ಚಿಂತನೆಯಲ್ಲಿ ಬುದ್ಧಿಮತ್ತೆಯ ಕೆಲಸಗಳು ಕೈ ಮಣ್ಣು ಮಾಡಿಕೊಂಡು ದುಡಿಯುವ ಕೆಲಸಗಳಿಗಿಂತ ಹೆಚ್ಚು ಲಾಭದಾಯಕ ಎನ್ನುವ ಹೊಸ ಅರ್ಥ ಕಂಡುಕೊಂಡವು. ಹಡಗು, ಕಾರು, ಲೋಹದ ಉದ್ಯಮಗಳು ಇಳಿಮುಖವಾಗಿ ಬ್ಯಾಂಕಿಂಗ್‌ ಉದ್ಯಮ, ಸಾಫ್ಟ್ ವೇರ್‌ ತಂತ್ರಜ್ಞಾನಗಳು ಹೊಸ ನೆಚ್ಚಿನ  ಕೈಗಾರಿಕೆಗಳಾದವು. ಬ್ರಿಟಿಶ್‌ ಇಂಜಿನಿಯರಿಂಗ್‌ ತನ್ನ ವರ್ಚಸ್ಸನ್ನು ಕಳೆದುಕೊಳ್ಳತೊಡಗಿತ್ತು. 1980ರಲ್ಲಿ 1,42,000 ಜನರು ಬ್ರಿಟನ್ನಿನ ಉಕ್ಕಿನ ಉದ್ಯಮದಲ್ಲಿ ಕೆಲಸಮಾಡುತ್ತಿದ್ದರು. 1988ರಲ್ಲಿ ಉಕ್ಕಿನ ಉದ್ಯಮಕ್ಕೆ ಹೊಸ ಜೀವ ನೀಡುವ ಉದ್ದೇಶದಿಂದ  ಖಾಸಗೀಕರಣಗೊಳಿಸಲಾಯಿತು, ಆಗ ಉಕ್ಕಿನ ಉದ್ದಿಮೆಯಲ್ಲಿ ದುಡಿಯುತ್ತಿದ್ದವರ ಸಂಖ್ಯೆ 52,000ಕ್ಕೆ ಇಳಿದಿತ್ತು. ಬ್ರಿಟಿಷರ  ಹಿರಿಮೆಯ ಉಕ್ಕಿನ ಉದ್ಯಮ ಅತ್ಯಂತ ವೇಗದಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗ ಎನ್ನುವ ಅಪಕೀರ್ತಿಗೂ ಪಾತ್ರವಾಯಿತು. 21ನೆಯ ಶತಮಾನದ ಆರಂಭದಲ್ಲಿ  33,000 ಜನರು ಇಲ್ಲಿನ ಉಕ್ಕಿನ ಉದ್ದಿಮೆಯೊಳಗೆ ಕೆಲಸಮಾಡುತ್ತಿದ್ದರು. ಇನ್ನು ಈ ಉದ್ದಿಮೆಯನ್ನು ನಡೆಸಲಾಗುವುದಿಲ್ಲ ಎಂದು  ಬ್ರಿಟಿಶ್‌ ಉಕ್ಕಿನ ಕಂಪೆನಿಗಳು ಹೊರದೇಶದ ವ್ಯಾಪಾರಸ್ಥರಿಗೆ ತಮ್ಮ ಕಂಪೆನಿಗಳನ್ನು ಮಾರಲು ತಯಾರಾದರು.

 2007ರಲ್ಲಿ ಭಾರತದ ಟಾಟಾ ಸಂಸ್ಥೆಯು ಕೋರಸ್‌ ಎಂಬ ಬ್ರಿಟನ್ನಿನ ದೊಡ್ಡ ಉಕ್ಕಿನ ಕಂಪೆನಿಯನ್ನು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯಲ್ಲಿ ಗೆದ್ದು  ಅತಿ ದುಬಾರಿ ಬೆಲೆಗೆ ಖರೀದಿ ಮಾಡಿತು. ಟಾಟಾದ  ಈ ಹೆಜ್ಜೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಭಾರತದ ಲಗ್ಗೆ ಎಂದು ಇಲ್ಲಿನ ಪತ್ರಿಕೆಗಳು ಬಣ್ಣಿಸಿದವು; ಜೊತೆಗೆ  ಬ್ರಿಟನ್ನಿನ ಅತಿ ದೊಡ್ಡ ಉಕ್ಕಿನ ಉತ್ಪಾದಕ ಎನ್ನುವ ಹೆಮ್ಮೆಯೂ ಟಾಟಾ ಸ್ಟೀಲ್‌ನ ಪಾಲಾಯಿತು. ಆಂಗ್ಲರ ಹೆಮ್ಮೆಯ ಬ್ರಿಟಿಶ್‌ ಸ್ಟೀಲ್‌ ತನ್ನ ಅಳಿವು ಉಳಿವಿನ ತೂಗುಯ್ನಾಲೆಯಲ್ಲಿ ಟಾಟಾ ಸ್ಟೀಲ್‌ಆಗಿ ಮರುನಾಮಕರಣಗೊಳ್ಳಬೇಕಾಯಿತು!  ಟಾಟಾದ ಒಡೆತನದಲ್ಲೂ ಬ್ರಿಟನ್ನಿನ ಉಕ್ಕಿನ ಉದ್ಯಮದ  ಬಿಕ್ಕಟ್ಟು ಪರಿಹಾರಗೊಳ್ಳಲಿಲ್ಲ.  ಉಕ್ಕಿನ ಉದ್ಯಮಕ್ಕೆ ಬೇಕಾಗುವ  ಇಂಧನ  ಮತ್ತು ಶಕ್ತಿಮೂಲಗಳಿಗೆ  ಏರುತ್ತಿರುವ ಬೆಲೆ ಒಂದು ಕಡೆ, ಇನ್ನೊಂದು ಕಡೆ ಸಹಕಾರಿಯಾಗದ ಸರಕಾರದ ಕಾರ್ಯನೀತಿಗಳು ಮತ್ತು ಕೈಗಾರಿಕೋದ್ಯಮಗಳ ಬಗ್ಗೆಯೇ ಒಂದು ತರಹದ ಅಸಡ್ಡೆ , ಚೀನಾದಲ್ಲಿ ಅತಿಯಾದ ಉತ್ಪಾದನೆ ಮತ್ತು ಕಡಿಮೆ ಬೆಲೆಯಲ್ಲಿ ಜಾಗತಿಕ ಮಾರುಕಟ್ಟೆಗೆ ಮಾರಲ್ಪಡುವ ಚೈನಾ ಸ್ಟೀಲ್‌ಗ‌ಳು ಮತ್ತೂಂದು  ಕಡೆ, ದೇಶದ ಒಳಗೂ ಹೊರಗೂ ಇರುವ ಪ್ರತಿಕೂಲ ಸನ್ನಿವೇಶಗಳ ಜೊತೆ  ಬ್ರಿಟನ್ನಿನ ಟಾಟಾ ಸ್ಟೀಲ್‌ ಹೋರಾಡಬೇಕಾಯಿತು.  ಇನ್ನು ಇಲ್ಲಿ ವ್ಯಾಪಾರ  ನಡೆಸುವುದು ಅಸಾಧ್ಯ ಎಂದೋ ಅಥವಾ ಬ್ರಿಟಿಷ್‌ ಸರಕಾರದ ಮೇಲೆ ಒತ್ತಡ ಹಾಕುವ ಉದ್ದೇಶದಿಂದಲೋ ಟಾಟಾ ಸಂಸ್ಥೆ 2016ರಲ್ಲಿ ತನ್ನ ಬ್ರಿಟಿಷ್‌ ಕಾರ್ಖಾನೆಗಳನ್ನು  ಮಾರುವುದಾಗಿ  ಹೇಳಿತು. ಈ ನಿರ್ಧಾರವನ್ನು ಕೈಗೊಂಡಿದ್ದ  ಟಾಟಾ ಸಂಸ್ಥೆಯ ಅಂದಿನ ಮುಖ್ಯನಿರ್ದೇಶಕ ಸೈರಸ್‌ ಮಿಸಿŒ ಟಾಟಾರೊಟ್ಟಿಗಿನ ಇತರ ಭಿನ್ನಾಭಿಪ್ರಾಯಗಳ ಕಾರಣಕ್ಕೆ ತಮ್ಮ ಸ್ಥಾನವನ್ನೇ ಬಿಡುವಂತಾಯಿತು. ರತನ್‌ ಟಾಟಾ 2000 ಮತ್ತು 2010ರ ನಡುವೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ 20 ಬಿಲಿಯನ್‌ ಡಾಲರಗಳ ವ್ಯಾಪಾರವನ್ನು ಸ್ವಾಧೀನಪಡಿಸಿಕೊಂಡಿದ್ದರು. ಇವುಗಳಲ್ಲಿ ಬ್ರಿಟನ್ನಿನ ಟೆಟಿÉ ಚಹಾದ, ಜಾಗÌರ್‌ಲ್ಯಾಂಡ್‌ ರೋವರ ಕಾರುಗಳ, ಸ್ಟೀಲ್‌ ಕಂಪೆನಿಗಳ ಅಲ್ಲದೆ ಅಮೆರಿಕ, ಸೌತ್‌ ಕೊರಿಯಾದ ಕೆಲವು ಉದ್ಯಮಗಳೂ ಸೇರಿದ್ದವು. 2012ರಲ್ಲಿ ರತನ್‌ ಟಾಟಾರಿಂದ ಮುಖ್ಯ ನಿರ್ದೇಶಕ ಹು¨ªೆ ಪಡೆದ ಮಿಸ್ತ್ರೀ, “ಟಾಟಾದ ಬ್ರಿಟನ್ನಿನ ಉಕ್ಕಿನ ಉದಯ ಲಾಭದಾಯಕವಾಗಿಲ್ಲ. ಅದನ್ನು ಪುನರುಜ್ಜೀವನಗೊಳಿಸುವುದು ನಿರರ್ಥಕ’ ಎನ್ನುವ ನಿರ್ಧಾರಕ್ಕೆ ಬಂದಿದ್ದರು.  ರತನ್‌ ಟಾಟಾರ ಬೆಂಬಲಿಗರಿಗೂ ಮಿಸ್ತ್ರೀಯವರಿಗೂ ಇದ್ದ ಕೆಲವು ಭಿನ್ನಾಭಿಪ್ರಾಯಗಳಲ್ಲಿ ತಮ್ಮ ಕಂಪೆನಿಯ ಬ್ರಿಟಿಶ್‌ ಉಕ್ಕಿನ ಉದ್ಯಮವನ್ನು ಇಟ್ಟುಕೊಳ್ಳಬೇಕೋ ಮಾರಬೇಕೋ ಎನ್ನುವುದು ಕೂಡ ಒಂದಾಗಿತ್ತು. ಈ ನಿರ್ಧಾರದಿಂದ ಯುಕೆಯಾದ್ಯಂತ ಬೇರೆ ಬೇರೆ ಟಾಟಾ  ಸ್ಟೀಲ್‌ ಫ್ಯಾಕ್ಟರಿಗಳಲ್ಲಿ  ಕೆಲಸ ಮಾಡುವ  ಸುಮಾರು 15,000 ಉದ್ಯೋಗಿಗಳು ತಮ್ಮ ಭವಿಷ್ಯ ಏನು ಎನ್ನುವ ಚಿಂತೆಯಲ್ಲಿ ಮುಳುಗುವಂತಾಯಿತು. ಖಚvಛಿ Our ಖಠಿಛಿಛಿl ಎನ್ನುವ ಪ್ರತಿಭಟನೆಗಳು ಕಾರ್ಮಿಕರಿಂದಲೂ ಮತ್ತು ಜನಸಾಮಾನ್ಯರಿಂದಲೂ ವ್ಯಾಪಕವಾಗಿ ಶುರು ಆದವು. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಮತ್ತು ಭವ್ಯ ರಮ್ಯ ಇತಿಹಾಸದ  ಬ್ರಿಟಿಷ್‌ ಇಂಜಿನಿಯರಿಂಗ್‌ ಉದ್ಯಮವೊಂದು ಶಾಶ್ವತವಾಗಿ ಮುಗಿದೇ ಹೋಗುವ  ಮುಜಗರ ಇವೆರಡೂ  ಸೇರಿದಾಗ ಇಲ್ಲಿನ ಸರಕಾರ ಮಧ್ಯ ಪ್ರವೇಶಿಸಿತು. ಟಾಟಾ ಸ್ಟೀಲ್‌ ಯುಕೆಯ  ಒಂದು ಸಣ್ಣ ಭಾಗವನ್ನು ಸರಕಾರ ತಾನು ಕೊಂಡುಕೊಂಡು ಬಂಡವಾಳ ಹೂಡಿಕೆಯ ಒಂದು ಕಂಪೆನಿಗೆ ಬರಿಯ ಒಂದು ಪೌಂಡ್‌ಗೆ (ಸುಮಾರು ಎಂಭತ್ತೈದು ರೂಪಾಯಿ) ಮಾರಾಟ ಮಾಡಿತು! ಮೊನ್ನೆ ಸೆಪ್ಟಂಬರದಲ್ಲಿ ಟಾಟಾ ಸ್ಟೀಲ್‌ ಯುರೋಪ್‌ ತನ್ನ ಉಳಿದ ವ್ಯಾಪಾರವನ್ನು  ಜರ್ಮನಿಯ ಸ್ಟೀಲ್‌ ತಯಾರಿಸುವ  ಕಂಪೆನಿಯೊಡನೆ ಏಕೀಕರಣಗೊಳಿಸುವ  ಯೋಜನೆಗೆ ಸಹಿ ಹಾಕಿತು. ಯೂರೋಪಿನ ಅತಿ ದೊಡ್ಡ ಸ್ಟೀಲ್‌ ಉತ್ಪಾದಕ ಭಾರತೀಯ ಮೂಲದ ಲಕ್ಷ್ಮೀ ಮಿತ್ತಲ್‌ ಅವರ ಕಂಪೆನಿಯಾದರೆ, ಎರಡನೆಯ ಮತ್ತು ಮೂರನೆಯ ಸ್ಥಾನದಲ್ಲಿರುವುದು ಟಾಟಾ ಸ್ಟೀಲ್‌ ಮತ್ತು ಟಾಟಾ ಒಗ್ಗೂಡಲಿರುವ ಜರ್ಮನಿಯ ಸ್ಟೀಲ್‌ ಕಂಪೆನಿ. ಹೀಗೆ ಏಕೀಕರಣಗೊಂಡ ಟಾಟಾ ಮತ್ತು ಜರ್ಮನಿಯ ಉಕ್ಕಿನ ಕಂಪೆನಿ ಸೇರಿ ಯುರೋಪಿನ ಎರಡನೆಯ ಅತಿ ದೊಡ್ಡ ಸ್ಟೀಲ್‌ ಉತ್ಪಾದಕ ಎನ್ನುವ ಶೀರ್ಷಿಕೆ ಪಡೆಯಲಿವೆ.

2017 ಬ್ರಿಟಿಷ್‌ ಇತಿಹಾಸದಲ್ಲಿ ಅತಿ ಕಡಿಮೆ ಉಕ್ಕು ಉತ್ಪಾದಿಸಲ್ಪಟ್ಟ ವರ್ಷ ಎಂದು ಕರೆಯಲ್ಪಟ್ಟರೂ ವ್ಯಾಪಾರಗಳ ಪುನರ್ರಚನೆ, ಸರಕಾರದ ಮಧ್ಯಸ್ಥಿಕೆಗಳಿಂದ ಸದ್ಯಕ್ಕೆ ಒದಗಬಹುದಾದ ಆಪತ್ತು ತಪ್ಪಿಸಿಕೊಂಡ ಸಣ್ಣ ಸಮಾಧಾನ ಬ್ರಿಟಿಷ್‌ ಉಕ್ಕಿನ ಉದ್ಯಮದ್ದು. ಕೈಗಾರಿಕೆಗಳ  ಚರಿತ್ರೆಯ ಪುಟಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದ , ದೇಶ-ವಿದೇಶಗಳಲ್ಲಿ ಕತೆೆಯಾಗಿ ಹಬ್ಬಿದ್ದ  ಬ್ರಿಟಿಷರ ಸ್ಟೀಲ್‌ ವಸಾಹತಿನಲ್ಲಿ ಹುಟ್ಟಿ ಬೆಳೆದ ಕಂಪೆನಿಯೊಂದರಿಂದ ಜೀವದಾನವನ್ನು ಪಡೆಯಬೇಕಾದದ್ದು ಅವರಿಗೆ  ಇಷ್ಟ ಆಗಿರಲಿಕ್ಕಿಲ್ಲ . ಆದರೆ, ಅನಿವಾರ್ಯವಂತೂ ಆಗಿತ್ತು. 

ಯೋಗೀಂದ್ರ ಮರವಂತೆ ಬ್ರಿಸ್ಟಲ್‌, ಇಂಗ್ಲೆಂಡ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next