Advertisement

ಗುಜರಿ ಅಡ್ಡೆಯಾದ ಬ್ರಿಟಿಷರ ಕಾಲದ ಕಟ್ಟಡ

12:50 PM Apr 09, 2022 | Team Udayavani |

ನವಲಗುಂದ: ಬ್ರಿಟಿಷರ ಕಾಲದಲ್ಲಿ ಕಟ್ಟಿರುವಂತಹ ಶತಮಾನ ಕಂಡ ತಹಶೀಲ್ದಾರ್‌ ಕಾರ್ಯಾಲಯಕ್ಕೆ ಕಾಯಕಲ್ಪ ಬೇಕಾಗಿದೆ. ಹಿಂದೊಂದು ದಿನ ಹಳೆಯ ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ಪೊಲೀಸ್‌ ಠಾಣೆ ಸೇರಿದಂತೆ ತಾಲೂಕಾಡಳಿತವೇ ಕಾರ್ಯನಿರ್ವಹಿಸುತ್ತಿತ್ತು. ಸುಂದರವಾಗಿದ್ದ ಶತಮಾನದ ಕಟ್ಟಡವನ್ನು ಈಗ ನಿರ್ಲಕ್ಷಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಶತಮಾನದ ಕಟ್ಟಡದಲ್ಲಿದ್ದ ಹಳೆಯ ತಹಶೀಲ್ದಾರ್‌ ಕಾರ್ಯಾಲಯ ಈಗ ಪೊಲೀಸ್‌ ಇಲಾಖೆ ಸೀಜ್‌ ಮಾಡಿದ ವಾಹನಗಳ ಗುಜರಿ ಅಡ್ಡೆಯಾಗಿ ಪರಿಣಮಿಸಿದೆ. ಹಳೆಯ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಸದ್ಯ ರೆಕಾರ್ಡ್‌, ಭೂಮಾಪನಾಧಿಕಾರಿ, ಸರ್ವೇ, ಕಂದಾಯ ಇಲಾಖೆ ಸೇರಿದಂತೆ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯಗಳಿಗೆ ಕೊಠಡಿಗಳು ಬಳಕೆ ಬಿಟ್ಟರೆ ಉಳಿದವುಗಳು ಖಾಲಿ ಇವೆ. ಬೇರೆ ಸರಕಾರಿ ಕಚೇರಿಗಳಿಗಾದರೂ ನೀಡಿದರೆ ಹಳೆಯ ಕಟ್ಟಡಕ್ಕೆ ಹೊಸ ಕಳೆಯಾದರೂ ಬರಬಹುದು ಎಂಬುದು ಜನರ ನಿರೀಕ್ಷೆಯಾಗಿದೆ.

ಹಳೆಯ ತಹಶೀಲ್ದಾರ್‌ ಕಾರ್ಯಾಲಯಕ್ಕೆ ದಿನನಿತ್ಯ ನೂರಾರು ರೈತರು ಆಗಮಿಸುತ್ತಾರೆ. ಈ ಆವರಣದಲ್ಲಿ ಗುಜರಿ, ಮೂತ್ರ ವಿಸರ್ಜನೆ, ಎಲ್ಲೆಂದರಲ್ಲಿ ಉಗುಳುವುದರಿಂದ ಕಟ್ಟಡದ ವಾತಾವರಣವೇ ಹಾಳಾಗಿದೆ. ಶತಮಾನದ ಕಟ್ಟಡವನ್ನು ಅಭಿವೃದ್ಧಿಪಡಿಸಿ ಬಾಡಿಗೆ ರೂಪದಲ್ಲಿ ಬೇರೆಡೆಗೆ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿ ಸಾರ್ವಜನಿಕರಿಗೆ, ರೈತರಿಗೆ ಅನುಕೂಲವಾಗುವಂತಹ ಚಿಂತನೆಯನ್ನು ತಾಲೂಕು ಮಟ್ಟದ ಅಧಿಕಾರಿಗಳು ಮಾಡಬೇಕಾಗಿದೆ.

ಹಳೆಯ ತಾಲೂಕು ಕಚೇರಿ ಕಾರ್ಯಾಲಯದ ಹತ್ತಿರವೇ ಪೊಲೀಸ್‌ ಠಾಣೆ ಇದ್ದು, ಸೀಜ್‌ ಮಾಡಿದ ವಾಹನಗಳನ್ನು ಠಾಣೆಯಲ್ಲಿರಿಸುವುದನ್ನು ಬಿಟ್ಟು ಎಲ್ಲೆಂದರಲ್ಲಿ ಅಪಘಾತ ವಾಹನಗಳ ಶೋರೂಮ್‌ ಮಾಡಿದ್ದಾರೆ. ಹಳೆಯ ತಹಶೀಲ್ದಾರ್‌ ಕಾರ್ಯಾಲಯ ಆವರಣದಲ್ಲಿಯೇ ವೀರಭದ್ರೇಶ್ವರ ಹಾಗೂ ಮಾರುತಿ ದೇವಸ್ಥಾನವಿದ್ದು, ಭಕ್ತರು ಸಹ ಭಯದಲ್ಲಿ ಬಂದು ಹೋಗುವಂತಾಗಿದೆ. ಗುಜರಿ ವಾಹನಗಳಿಂದ ವಿಷಜಂತುಗಳು ಮನೆ ಮಾಡಿದ್ದು ಕಚೇರಿ ಕೆಲಸಕ್ಕೆಂದು ಬಂದಾಗ ಅವಘಡಕ್ಕೆ ಎಡೆಮಾಡಿಕೊಟ್ಟಂತಾಗಿದೆ. ನೂತನವಾಗಿ ಆಗಮಿಸಿರುವ ತಹಶೀಲ್ದಾರ್‌ ಅನಿಲ ಬಡಿಗೇರ ಅವರು ಶತಮಾನದ ಕಟ್ಟಡದ ಆವರಣದಲ್ಲಿನ ಗುಜರಿ ವಾಹನಗಳನ್ನು ಸ್ಥಳಾಂತರಿಸಿ ಆವರಣ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬುದು ಜನರ ಆಶಯವಾಗಿದೆ.

ವಿಶಾಲವಾದ ಕಾರ್ಯಾಲಯದ ಜಾಗೆಯಲ್ಲಿ ರೈತರ ವಾಹನಗಳು ನಿಲ್ಲಲು ಸಹ ಜಾಗೆ ಇಲ್ಲದಂತೆ ಅಪಘಾತದ ವಾಹನಗಳ ತಾಣವಾಗಿಸಿದ್ದಾರೆ. ಇಂತಹ ಕಟ್ಟಡ ಸಿಗುವುದು ಅಪರೂಪ. ವಿಶಾಲವಾದ ಜಾಗೆ, ಕಲ್ಲಿನಲ್ಲಿ ಕಟ್ಟಿದ ಗೋಡೆಗಳ ಕಟ್ಟಡವನ್ನು ತಾಲೂಕಾಡಳಿತ ನಿರ್ಲಕ್ಷಿಸುತ್ತಿರುವುದು ನೋವುನ್ನುಂಟು ಮಾಡಿದೆ.
ಬಸಣ್ಣ ಬೆಳವಣಕಿ,ಅಳಗವಾಡಿ ಗ್ರಾಮಸ್ಥ

Advertisement

ಪುಂಡಲೀಕ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next