Advertisement

ಇನ್ಫಿ ನಾರಾಯಣ ಮೂರ್ತಿ ಅಳಿಯನಿಗೆ ಬೋರಿಸ್ ಸಂಪುಟದಲ್ಲಿ ಉನ್ನತ ಸಚಿವ ಸ್ಥಾನ

10:03 AM Dec 27, 2019 | Team Udayavani |

ಲಂಡನ್‌: ಬ್ರಿಟನ್‌ ನಲ್ಲಿ ಇತ್ತೀಚೆಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷವು ಜಯಶಾಲಿಯಾಗಿದ್ದು ಬೋರಿಸ್ ಜಾನ್ಸನ್ ಅವರು ಪ್ರಧಾನಮಂರ್ತಿಯಾಗಿ ಪುನರಾಯ್ಕೆಗೊಂಡಿದ್ದರು. ಇದೀಗ ಆ ಪಕ್ಷದಿಂದ ಜಯಗಳಿಸಿದ್ದ ಇನ್ಫೋಸಿಸ್ ನ ಸ್ಥಾಪಕಾಧ್ಯಕ್ಷ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸೂನಕ್ ಅವರು ಹಣಕಾಸು ಸಚಿವರಾಗಿ ನೇಮಕಗೊಳ್ಳುವುದು ಖಚಿತವಾಗಿದೆ.

Advertisement

ನಾರಾಯಣ ಮೂರ್ತಿ, ಸುಧಾ ಮೂರ್ತಿ ದಂಪತಿಯ ಅಳಿಯ ರಿಶಿ ಸೂನಕ್ ಅವರನ್ನು ಕನ್ಸರ್ವೇಟಿವ್ ಪಕ್ಷದ ಹಿರಿಯ ಸದಸ್ಯ ಪದಕ್ಕೆ ಭಡ್ತಿ ನೀಡಲಾಗಿದ್ದು ಇದೀಗ ಬೋರಿಸ್ ಜಾನ್ಸನ್ ಸರಕಾರದಲ್ಲಿ ನೂತನವಾಗಿ ರಚನೆಗೊಳ್ಳಲಿರುವ ‘ಇಕಾನಮಿಕ್ ಸೂಪರ್ ಮಿನಿಷ್ಟ್ರಿ’ ಮುಖ್ಯಸ್ಥರಾಗಲಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಅಂತಾರಾಷ್ಟ್ರೀಯ ವ್ಯವಹಾರ ಇಲಾಖೆಯನ್ನೂ ಒಳಗೊಂಡಂತೆ ವಿಸ್ತೃತ ವ್ಯವಹಾರ ಸಚಿವಾಲಯವೊಂದನ್ನು ರಚಿಸುವ ಯೋಚನೆ ಪ್ರಧಾನಿ ಜಾನ್ಸನ್ ಅವರದ್ದಾಗಿದೆ.

ಚುನಾವಣೆ ಸಂದರ್ಭದಲ್ಲಿ ಸೂನಕ್ ಅವರ ಅತ್ಯುತ್ತಮ ಕಾರ್ಯನಿರ್ವಹಣೆಯಿಂದ ಖುಷಿಗೊಂಡಿರುವ ಬೋರಿಸ್ ಜಾನ್ಸನ್ ಅವರು ಈ ಮಹತ್ವದ ಜವಾಬ್ದಾರಿಯನ್ನು ಇವರಿಗೆ ವಹಿಸಿ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆಂದು ಪ್ರಧಾನಿಯವರಿಗೆ ಆಪ್ತರಾಗಿರುವ ಅವರ ಪಕ್ಷದ ಸದಸ್ಯರು ತಿಳಿಸಿದ್ದಾರೆ. ಸೂನಕ್ ಅವರು ‘ಬ್ರೆಕ್ಸಿಟ್’ ನ ಪ್ರಬಲ ಬೆಂಬಲಿಗರಾಗಿರುವುದೂ ಸಹ ಅವರ ಮೇಲೆ ಪ್ರಧಾನಿ ಜಾನ್ಸನ್ ಹೆಚ್ಚಿನ ನಂಬಿಕೆ ಇಡಲು ಇನ್ನೊಂದು ಕಾರಣ ಎನ್ನಲಾಗುತ್ತಿದೆ.

ಸರಕಾರಿ ಖಜಾನೆಯ ಮುಖ್ಯಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ರಿಷಿ ಸೂನಕ್ ಅವರು 2015ರಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡಿದ್ದರು. ಇದಕ್ಕೂ ಮೊದಲು ರಿಷಿ ಅವರು ಇಂಗ್ಲೆಂಡಿನ ಸ್ಥಳೀಯ ಸರಕಾರದಲ್ಲಿ ಕಿರಿಯ ಸಚಿವನಾಗಿಯೂ ಕಾರ್ಯನಿರ್ವಹಿಸಿದ್ದರು. ರಿಷಿ ಅವರು ಆಕ್ಸ್ ಫರ್ಡ್ ಹಾಗೂ ಸ್ಟಾನ್ಫೋರ್ಡ್ ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next