Advertisement

ಬಂಪರ್‌ ಬದನೆ

09:52 AM Jan 21, 2020 | Sriram |

ಕ್ರಿಮಿನಾಶಕಗಳಿಲ್ಲದೆ ಬದನೆ ಬೆಳೆಯುವುದು ತುಂಬಾ ಕಷ್ಟ ಎಂಬ ಮಾತಿದೆ. ಅದನ್ನು ಸಾಧಿಸಿ ತೋರಿಸಿದ್ದಾರೆ ಇಲ್ಲಿಬ್ಬ ರೈತ. ಲಕ್ಷಗಟ್ಟಲೆ ಆದಾಯವನ್ನವರು ಪಡೆಯುತ್ತಿದ್ದಾರೆ.

Advertisement

ಬದನೆಕಾಯಿ ಬೆಳೆಯಬೇಕೆಂದರೆ ಒಂದು ಕ್ರಿಮಿನಾಶಕ ಕ್ಯಾನ್‌ ಕಾಯಮ್ಮಾಗಿ ಜಮೀನಿನಲ್ಲಿ ಇರಲೇಬೇಕು ಎಂಬ ಮಾತು ರೈತವಲಯದಲ್ಲಿದೆ. ಅಷ್ಟೊಂದು ಕೀಟಗಳ ಕಾಟ ಆ ಬೆಳೆಗೆ. ಅದರಿಂದ ಬರುವ ಆದಾಯದಲ್ಲಿ ಸಿಂಹಪಾಲು ಔಷಧಿ ಖರ್ಚಿಗೇ ಹೋಗಿಬಿಡುತ್ತದೆ. ಚೆನ್ನಾಗಿ ನೋಡಿಕೊಂಡರೆ ಒಂದು ವರ್ಷದವರೆಗೆ ಇಳುವರಿ ನೀಡಬಲ್ಲ ಬದನೆಕಾಯಿಗೆ ಮಾರುಕಟ್ಟೆಯ ದರದಲ್ಲಿ ತುಂಬಾ ಏರುಪೇರು ಆಗುವುದಿಲ್ಲ. ಹೀಗಿರುವಾಗ ಬದನೆಯಿಂದ ಲಕ್ಷಗಟ್ಟಲೆ ಆದಾಯ ತೆಗೆಯುವುದು ನಿಜಕ್ಕೂ ಸಾಧನೆಯೇ. ಅಂಥ ಸಾಧನೆ ಮಾಡಿದವರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ರೈತ ಮಲ್ಲಪ್ಪ ರಾಮಪ್ಪ ರಡ್ಡೇರ.

ಭೂಮಿ ಫ‌ಲವತ್ತಾಗಿರಬೇಕು
ಮಲ್ಲಪ್ಪನವರದು ಒಟ್ಟು ಆರು ಎಕರೆ ಜಮೀನು. ಬೋರ್‌ವೆಲ್‌ ಹಾಗೂ ಕಾಲುವೆಯ ನೀರಿನಿಂದ ಅಷ್ಟೂ ಜಮೀನಿಗೆ ನೀರುಣಿಸುತ್ತಾರೆ. ಒಂದು ಕಾಲದಲ್ಲಿ ಇವರೂ ಕೂಡ ಉಳಿದವರಂತೆ ರಾಸಾಯನಿಕ ಕೃಷಿ ಮಾಡುತ್ತಾ ಹಾಕಿದ ಖರ್ಚು ಕಳೆದು, ಅದರ ಮೇಲೆ ಐದತ್ತು ಸಾವಿರವಷ್ಟೆ ಲಾಭ ಪಡೆಯುತ್ತಿದ್ದರು. ನಂತರ ಬೈಫ್ ಸಂಸ್ಥೆಯವರ ಮಾರ್ಗದರ್ಶನದಂತೆ ಸಾವಯವ ಕೃಷಿಗಿಳಿದು ಇಂದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ತುಂಬಾ ವೇಗವಾಗಿ ಇಳುವರಿ ನೀಡುವ ಬದನೆಕಾಯಿ, ಟೊಮೆಟೊ, ಮೆಣಸಿನಕಾಯಿ ಮುಂತಾದವುಗಳಿಗೆ ಸಾಕಷ್ಟು ಪೋಷಕಾಂಶ ಬೇಕು. ಹೊಲ ಫ‌ಲವತ್ತಾಗಿರಬೇಕು. ಭೂಮಿಯಲ್ಲಿ ಸಾಕಷ್ಟು ಸಾವಯವ ಅಂಶ ಇರಬೇಕು. ಹಾಗೆಯೇ ಬೇರಿನ ಮೂಲಕ ಮತ್ತು ಎಲೆಗಳ ಮೂಲಕ ನಿರಂತರವಾಗಿ ಪೋಷಕಾಂಶ ಒದಗಿಸುತ್ತಲೇ ಇರಬೇಕು. ಆಗ ಮಾತ್ರ ಗರಿಷ್ಠ ಇಳುವರಿ ತಗೆಯಲು ಸಾಧ್ಯ. ಕಲಕೇರಿಯ ಮಲ್ಲಪ್ಪನವರು ಮಾಡಿದ್ದೂ ಇದನ್ನೇ.

ಮನೆಯಲ್ಲೇ ಟಾನಿಕ್‌ ತಯಾರಿಕೆ
ಅವರು ವಾರ, ಹತ್ತು ದಿನ, ಹದಿನೈದು ದಿನಕ್ಕೊಮ್ಮೆ ಜೀವಾಮೃತ, ಬೆಣ್ಣೆ ಮಿಶ್ರಿತ ಮಜ್ಜಿಗೆ, ಎಳನೀರು, ಗೋಮೂತ್ರ ಮುಂತಾದವನ್ನು ನಿರಂತರವಾಗಿ ಸಿಂಪಡಿಸಿದ ಪರಿಣಾಮ ಅವರ ಬದನೆ ಬೆಳೆ (ಮುಳ್ಳಗಾಯಿ) ದೀರ್ಘ‌ಕಾಲದವರೆಗೆ ಒಂದೇ ಸಮನಾದ ಹೆಚ್ಚು ಇಳುವರಿ ಕೊಡಲು ಸಾಧ್ಯವಾಯಿತು. ಖಾಸಗಿ ಕಂಪನಿಯ ಮಂಜರಿ ಬೀಜವನ್ನು ನರ್ಸರಿನಲ್ಲಿ ಸಸಿ ಮಾಡಿಸಿ ನಾಟಿ ಮಾಡುವ ಮಲ್ಲಪ್ಪನವರು, ಸತತ ಮೂರು ವರ್ಷದಿಂದ ಅತ್ಯಂತ ಯಶಸ್ವಿಯಾಗಿ ಬದನೆ ಬೆಳೆಯುತ್ತಿದ್ದಾರೆ. ಸಾವಯವ ಗೊಬ್ಬರದ ಜೊತೆ ಬೇವಿನ ಹಿಂಡಿ ಬಳಸುವುದರಿಂದ ಮಣ್ಣಿನಿಂದ ಬರುವ ಹಲವು ಕಾಯಿಲೆ- ಕೀಟಗಳು ದೂರಾಗುತ್ತವೆ. ನಾಟಿ ಮಾಡಿದ ಎರಡೂವರೆ ತಿಂಗಳಿಗೆ ಆರಂಭವಾಗುವ ಕೊಯ್ಲು, ಒಂಬತ್ತು ತಿಂಗಳವರೆಗೆ ಮುಂದುವರಿಯುತ್ತದೆ. ಬೆಳೆ ಎಷ್ಟು ಚೆನ್ನಾಗಿ ಬಂದಿತೆಂದರೆ ನಿರಂತರವಾಗಿ ಐದು ತಿಂಗಳ ಕಾಲ ಪ್ರತಿದಿನ 80 ಬಾಕ್ಸ್ ಬದನೆಕಾಯಿ ಕೊಯ್ಲು ಮಾಡಿದ್ದರು!

Advertisement

ದುಬಾರಿ ಬೆಲೆಯ ರಾಸಾಯನಿಕ ಗೊಬ್ಬರ- ಕ್ರಿಮಿನಾಶಕದ ಹಿಂದೆ ಬೀಳದೆ ತಾವೇ ತಯಾರಿಸಿದ ಹಲವಾರು ಟಾನಿಕ್‌ ಬಳಸಿ ಲಾಭ ಕಂಡುಕೊಂಡರು. ಜವಾರಿ ಹಸುಗಳ ಹಾಲನ್ನು ಹೆಪ್ಪು ಹಾಕಿ, ಕಡಿದು ಮಜ್ಜಿಗೆ ಮಾಡಿ, ಬೆಣ್ಣೆ ತೆಗೆಯದ ಮಜ್ಜಿಗೆಯನ್ನು ಒಂದು ದಿನ ಬಿಸಿಲಿಗೆ, ಮತ್ತೂಂದು ದಿನ ನೆರಳಿಗೆ ಹೀಗೆ ಇಟ್ಟು ನಾಲ್ಕು ದಿನದ ನಂತರ ಒಂದು ಕ್ಯಾನಿಗೆ ಒಂದು ಲೀಟರ್‌ ಈ ಮಜ್ಜಿಗೆ ದ್ರಾವಣ ಸಿಂಪಡಿಸಿದ್ದಾರೆ.

ಬೆಣ್ಣೆ ಲೇಪಿತ ಎಲೆಗಳು
ಗೋಮೂತ್ರ, ಸಕ್ಕರೆ, ಎಳನೀರು ಈ ಮೂರನ್ನೂ ಬೆರೆಸಿ ಸಿಂಪಡಿಸಿದ್ದಾರೆ. ಜೀವಾಮೃತವನ್ನಂತೂ ನಿರಂತರವಾಗಿ ಸ್ಪ್ರೆà ಮಾಡುತ್ತಲೇ ಇದ್ದರು. ಮಜ್ಜಿಗೆ ಶಿಲೀಂದ್ರನಾಶಕ, ಬೆಣ್ಣೆ ಪೋಷಕಾಂಶಭರಿತ, ಎಳನೀರು ಟಾನಿಕ್‌, ಗೋಮೂತ್ರವಂತೂ ಔಷಧಿಯ ಆಗರ. ಇವೆಲ್ಲದರಿಂದ ರೋಗ- ಕೀಟಗಳ ಕಾಟ ಕಾಡಲೇ ಇಲ್ಲ. ಇವರು ಗಮನಿಸಿದಂತೆ, ಮಜ್ಜಿಗೆಯಲ್ಲಿ ಬೆಣ್ಣೆ ತೆಗೆಯದ್ದರಿಂದ ಅದು ಎಲೆಗೆ ಲೇಪಿತವಾಗಿರುತ್ತಿತ್ತು, ರಸ ಹೀರುವ ಅಥವಾ ಇತರೆ ಸಣ್ಣ ಕೀಟಗಳು ಈ ಬೆಣ್ಣೆಯ ಜಿಡ್ಡಿಗೆ ಅಂಟಿಕೊಂಡು ರೆಕ್ಕೆ ಕಳೆದುಕೊಂಡು ಸಾಯುತ್ತಿದ್ದವು. ಪ್ರತಿ ಸಲ ಬದನೆ ಬೆಳೆದಾಗಲೂ ಇವರಿಗೆ ನಷ್ಟ ಆಗಿದ್ದೇ ಇಲ್ಲ. ಬೈಫ್ ಸಂಸ್ಥೆಯ ದೊಡ್ಡನಗೌಡ ಪಾಟೀಲ್‌ರವರ ಮಾರ್ಗದರ್ಶನವೂ ಇವರ ಯಶಸ್ಸಿನ ಹಿಂದಿದೆ.

ಸತತ ಮೂರು ವರ್ಷದಿಂದ ನನಗೆ ಮುಳ್ಳಗಾಯಿ ಬದನೆಯಿಂದ 6 ಲಕ್ಷದಿಂದ 7.5 ಲಕ್ಷದವರೆಗೆ ಆದಾಯ ಸಿಕ್ಕಿದೆ. ಒಂದು ಎಕರೆಯಲ್ಲಿ ಬೆಳೆದ ಬದನೆಯಿಂದ ಇಷ್ಟೊಂದು ಆದಾಯ ಸಿಗುತ್ತೆ ಅಂದುಕೊಂಡಿರಲಿಲ್ಲ. ಮೊನ್ನೆ ತಗೆದ ಬದನೆಗೆ ಒಟ್ಟು 78,000 ರೂ. ಖರ್ಚು ಮಾಡಿದ್ದೆ, ಅಂದಾಜು 6 ಲಕ್ಷ ರೂ. ಸಿಕ್ಕಿದೆ. ಸಾವಯವ ಕೃಷಿ, ಬೆಣ್ಣೆಮಿಶ್ರಿತ ಮಜ್ಜಿಗೆಯ ಸಿಂಪಡಣೆ, ಗೋಮೂತ್ರ- ಎಳನೀರಿನ ಬಳಕೆಯಿಂದ ಇದು ಸಾಧ್ಯವಾಗಿದೆ. ಸಾವಿರಾರು ರುಪಾಯಿ ಖರ್ಚು ಮಾಡಿ ಮಾರುಕಟ್ಟೆಯಿಂದ ಕ್ರಿಮಿನಾಶಕ- ಟಾನಿಕ್‌ ತರುವ ಬದಲು ರೈತರು ಇಂಥವೆಲ್ಲ ಬಳಸಬೇಕು ಎಂಬುದು ನನ್ನ ಸಲಹೆ.
-ಮಲ್ಲಪ್ಪ ರಾಮಪ್ಪ ರಡ್ಡೇರ್‌, ರೈತ

-ಎಸ್‌. ಕೆ. ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next