Advertisement

ಬದನೆಕಾಯಿ ಬಜ್ಜಿ ಬಲು ಫೇಮಸ್ಸು

09:59 AM Mar 10, 2020 | mahesh |

ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿದವರು, ಮಠದ ಸಮೀಪದಲ್ಲೇ ನಿಲ್ಲುವ ತಳ್ಳು ಗಾಡಿಯನ್ನು ಗಮನಿಸದೇ ಹೋಗಲಾರರು. ಅದರಲ್ಲಿ, ಗಾಜಿನ ಪಟ್ಟಿಯ ಮೇಲೆ “ಶ್ರೀಮುಖ್ಯ ಪ್ರಾಣ’ ಎಂದು ಇಂಗ್ಲಿಷ್‌ನಲ್ಲಿ ಬರೆದಿದೆ. ಅದುವೇ ಗುರುತು. ಬಿಸಿಯಾದ ಬೋಂಡಾ, ಬಜ್ಜಿ, ಇಡ್ಲಿ, ವಡೆ ಹೀಗೆ ಆರೇಳು ಥರದ ತಿಂಡಿಗಳು ಅಲ್ಲಿ ಸಿಗುತ್ತದೆ. ಸಂಜೆ ವೇಳೆ ಅಲ್ಲಿಗೆ ಭೇಟಿ ನೀಡಿದರೆ 45ರ ಆಸುಪಾಸಿನ ವ್ಯಕ್ತಿಯೊಬ್ಬರು ಬೋಂಡಾ, ಬಜ್ಜಿ ಕರಿಯುತ್ತಾ, ಗ್ರಾಹಕರಿಗೆ ತಿಂಡಿ ಹಾಕಿಕೊಡುವುದನ್ನು ನೋಡಬಹುದು. ಅವರೇ ಈ ಕೈಗಾಡಿಯ ಮಾಲೀಕ ಸುರೇಶ್‌.

Advertisement

ಇಂಗು ಓಮದ ಗಮ್ಮತ್ತು
ಬದನೆಕಾಯಿ ಬಜ್ಜಿ, ಮೆಣಸಿನಕಾಯಿ ಬಜ್ಜಿ, ಆಲೂಗಡ್ಡೆ ಬೋಂಡಾ ಇಲ್ಲಿನ ವಿಶೇಷ. ಕಡಲೆಹಿಟ್ಟಿನ ಜೊತೆಗೆ ಇಂಗು, ಓಮವನ್ನು ಮಿಶ್ರಣ ಮಾಡುವುದರಿಂದ ಈ ಖಾದ್ಯಗಳು ರುಚಿಕರವಾಗಿರುತ್ತವೆ ಎನ್ನುತ್ತಾರೆ ಸುರೇಶ್‌. ಕರಿದ ತಿಂಡಿಯ ಜೊತೆ ಸುರೇಶ್‌ ಕೊಡುವ ಮೆಣಸಿನಕಾಳಿನಿಂದ ತಯಾರಿಸಿದ ಮಸಾಲೆ, ಬೋಂಡಾ- ಬಜ್ಜಿಯ ರುಚಿಗೆ ಉತ್ತಮ ಸಾಥ್‌ ನೀಡುತ್ತದೆ.

ಸ್ವೀಟು, ಬಾಸಿಂಗ ಮಾಡಿದ್ರು
ಹೋಟೆಲ್‌ ಕೆಲಸ ಬಿಟ್ಟು ನಂತರ ಅಡುಗೆ ಕೆಲಸ ಮಾಡಿಕೊಂಡಿದ್ದ ಸುರೇಶ್‌ ಅವರ ತಂದೆ ಸುಬ್ಬರಾವ್‌ ಅವರು “ಸ್ವೀಟ್‌ ಮಾಸ್ಟರ್‌’ ಎಂದೇ ಹೆಸರಾಗಿದ್ದವರು. ಅವರು ರುಚಿಕರ ಸ್ವೀಟು ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ಜೊತೆಗೆ ವಧು-ವರರಿಗೆ ಕಟ್ಟುವ ಬಾಸಿಂಗ ಮಾಡುವುದರಲ್ಲೂ ಫೇಮಸ್ಸಾಗಿದ್ದರು. ಕೈಗಾಡಿ ಜೊತೆಗೆ ಈ ಬಾಸಿಂಗ ಮಾಡಿ ಹೋಲ್‌ಸೇಲ್‌ನಲ್ಲಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಅವರು, ಬೋಂಡಾ ಬಜ್ಜಿ ಜೊತೆಗೆ ಚಟ್ನಿ ಕೊಡುತ್ತಿರಲಿಲ್ಲ. ಬದಲಿಗೆ ಮೆಣಸಿನಕಾಳಿನ ಮಸಾಲೆ ಪೌಂಡರ್‌ ಹಾಕಿಕೊಡುತ್ತಿದ್ದರು. ಅದನ್ನೇ ಸುರೇಶ್‌ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸಿಗುವ ತಿಂಡಿ:
ಇಡ್ಲಿ(ಒಂದು ಪ್ಲೇಟ್‌ಗೆ 20 ರೂ.), ಉದ್ದಿನ ವಡೆ(ನಾಲ್ಕಕ್ಕೆ 20 ರೂ.), ಮಸಾಲ ವಡೆ(6ಕ್ಕೆ 20 ರೂ.), ಅಲೂಗಡ್ಡೆ ಬೋಂಡಾ(4ಕ್ಕೆ 20 ರೂ.), ಮೆಣಸಿನಕಾಯಿ ಬಜ್ಜಿ(7ಕ್ಕೆ 20 ರೂ.), ಬದನೆಕಾಯಿ ಬಜ್ಜಿ (7ಕ್ಕೆ 20 ರೂ.), ಕಚ್ಚಂಬರ್‌ ವಡೆ (ಒಂದು ಪ್ಲೇಟ್‌ 20 ರೂ.) ಮಾಡಲಾಗುತ್ತದೆ. ಇಡ್ಲಿ, ವಡೆಗೆ ಚಟ್ನಿ, ಬಜ್ಜಿ, ಬೋಂಡಾಕ್ಕೆ ಮಸಾಲೆ ಪುಡಿ ಹಾಕಿಕೊಡಲಾಗುತ್ತೆ.

ಇದು ಪಾರ್ಟ್‌ ಟೈಮ್‌
ಬೆಳಿಗ್ಗೆಯಿಂದ ಸಂಜೆವರೆಗೆ ಜೆಸಿಐ ಕಾಲೇಜಲ್ಲಿ ಅಟೆಂಡರ್‌ ಕೆಲಸ ಮಾಡುವ ಸುರೇಶ್‌, ಸಂಜೆ ಮೇಲೆ ಕೈಗಾಡಿಯಲ್ಲಿ ಬೋಂಡಾ ಬಜ್ಜಿ ಮಾರಾಟ ಮಾಡುತ್ತಾರೆ. 5ನೇ ತರಗತಿಯಿಂದಲೂ ತಂದೆ ಜೊತೆ ಬೋಂಡಾ ಬಜ್ಜಿ ಮಾಡುವುದನ್ನು ಕಲಿತಿದ್ದ ಸುರೇಶ್‌, ತಂದೆ ನಿಧನರಾದ ನಂತರ ಅವರ ರುಚಿಯನ್ನು ಮುಂದುವರಿಸಿದ್ದಾರೆ. ಅವರಿಗೆ ತಾಯಿಯವರ ಸಹಕಾರವೂ ಇದೆ.

Advertisement

ಸ್ಟಾಲ್‌ನ ಸಮಯ:
ಸಂಜೆ 5- ರಾತ್ರಿ 9.30, (ಭಾನುವಾರ ರಜೆ)

ಸ್ಟಾಲ್‌ ವಿಳಾಸ:
ಶೃಂಗೇರಿ ಮಠದ ಸಮೀಪ, ಗಣೇಶ್‌ ಹೋಟೆಲ್‌ ಎದುರು, ಭಾರತೀ ಬೀದಿ, ಶೃಂಗೇರಿ

ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next