ನವದೆಹಲಿ: ದಿನದಿಂದ ದಿನಕ್ಕೆ ಕರ್ನಾಟಕದ ಬೆಂಗಳೂರು ಕೂಡ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಮಾದರಿಯಲ್ಲೇ ಕುಡಿವ ನೀರಿನ ಕೊರತೆ ಎದುರಿಸುವ ಆತಂಕ ಹೆಚ್ಚಾಗಿದೆ. ಆಧುನಿಕ ಯುಗದಲ್ಲಿ ನೀರಿನ ಅಭಾವವನ್ನು ಎದುರಿಸುತ್ತಿರುವ ಮೊದಲ ನಗರ ಎಂಬ ಕುಖ್ಯಾತಿಗೆ ಕೇಪ್‌ಟೌನ್ ಪಾತ್ರವಾಗಿದ್ದು, ಅಲ್ಲಿ ಹನಿ ಹನಿ ನೀರಿಗೂ ತತ್ವಾರವೆದ್ದಿದೆ.
ಆ ನಗರಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದ ಜಲಾಶಯ ಸಂಪೂರ್ಣವಾಗಿ ಬತ್ತಿಹೋಗಿದ್ದು “ಜಲ ತುರ್ತುಪರಿಸ್ಥಿತಿ’ ಘೋಷಿಸಲಾಗಿದೆ. ಏಪ್ರಿಲ್ ವೇಳೆಗೆ ನೀರು ಒದಗಿಸಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಉದ್ಭವ ವಾಗಲಿದೆ ಎಂದು ಅಲ್ಲಿನ ಸ್ಥಳೀಯಾಡಳಿತ ಘೋಷಿಸಿದೆ.
ಈ ನಡುವೆಯೇ ಬಿಬಿಸಿ ವೆಬ್‌ಸೈಟ್ ಆಘಾತಕಾರಿ ವರದಿಯೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಕೇಪ್‌ಟೌನ್ ನಂತರ ನೀರಿನ ಕೊರತೆ ಎದುರಿಸಲಿರುವ ಮೂರನೇ ನಗರವಾಗಿ ಬೆಂಗಳೂರನ್ನು ಗುರುತಿಸಲಾಗಿದೆ. ಇದಕ್ಕೂ ಮುನ್ನ ಬ್ರೆಜಿಲ್‌ನ ವಾಣಿಜ್ಯ ರಾಜಧಾನಿ ಸಾವೋಪೌಲೋ ಎಂಬ ನಗರ ನೀರಿನ ಬರ ಎದುರಿಸಲಿದೆ. ಸದ್ಯ ಈ ನಗರಕ್ಕೆನೀರು ಒದಗಿಸುತ್ತಿರುವ ಜಲಾಶಯ ಬತ್ತುವ ಹಂತಕ್ಕೆ ಬಂದಿದ್ದು, ಇನ್ನು 20 ದಿನಗಳಿಗೆ ಮಾತ್ರ ನೀರು ನೀಡುವ ಸಾಧ್ಯತೆ ಇದೆ.
ಬೀಜಿಂಗ್‌ನದ್ದೂ ಇದೇ ಪರಿಸ್ಥಿತಿ: ಚೀನಾದ ಬೀಜಿಂಗ್ ಕೂಡ ನೀರಿನ ಕೊರತೆ ಅನುಭವಿಸುತ್ತಿದ್ದು ಪ್ರತಿ ವ್ಯಕ್ತಿಗೆ ಕೇವಲ 1000 ಕ್ಯೂಬಿಕ್ ನೀರು ಸಿಗುತ್ತಿದೆ. ಜಗತ್ತಿನ ಶೇ.20 ರಷ್ಟು ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ಕುಡಿಯುವ ಸಲುವಾಗಿ ಸಿಗುತ್ತಿರುವ ಶುದ್ಧ ನೀರು ಕೇವಲ ಶೇ.7 ರಷ್ಟು ಮಾತ್ರ.
ಕೊ
ರತೆಗೆ ಸಿದ್ಧವಾದ ನಗರಗಳು: ಕೈರೋ, ಜಕಾರ್ತ, ಮಾಸ್ಕೋ, ಇಸ್ತಾಂ ಬುಲ್, ಮೆಕ್ಸಿಕೋ ಸಿಟಿ, ಲಂಡನ್, ಟೋಕಿಯೋ, ಮಿಯಾಮಿ
ಎಲ್ಲಾ ಕೆರೆ ಕಲುಶಿತ: ಸಾವೋಪೌಲೋ ನಗರ ಬಿಟ್ಟರೆ ನಂತರ ಸ್ಥಾನ ಬೆಂಗಳೂರಿಗೇ ಸಿಕ್ಕಿದೆ. ಇಲ್ಲಿ ದಿನದಿಂದ ದಿನಕ್ಕೆ ನೀರಿನ ಸ್ಥಿತಿ ವಿಷಮವಾಗುತ್ತಿದೆ. ಇದಲ್ಲದೇ ನಗರದಲ್ಲಿ ಹಲವಾರು ಕೆರೆಗಳೂ ಇದ್ದು, ಇವುಗಳಲ್ಲಿನ ನೀರನ್ನು ಕುಡಿಯಲು ಬಳಸಲು ಸಾಧ್ಯವೇ ಇಲ್ಲದಂಥ ಪರಿಸ್ಥಿತಿ ಉಂಟಾಗಿದೆ.
ಈ ಕೆರೆಗಳ ಶೇ.85ರಷ್ಟು ನೀರನ್ನು ಕೇವಲ ನೀರಾವರಿ ಮತ್ತು ಕೈಗಾರಿಕೆಗಳ ಕೂಲಿಂಗ್‌ಗಾಗಿ ಬಳಸಲಾಗುತ್ತಿದೆ. ಜತೆಗೆ ನಗರದಲ್ಲಿ ನೀರು ಸರಬರಾಜು ವ್ಯವಸ್ಥೆ ಕೂಡ ತೀರಾ ಹಳೆಯದಾಗಿದ್ದು ಇದನ್ನು ಆಧುನೀಕರಣ ಮಾಡಬೇಕಾಗಿದೆ. ಈ ಮೂಲಕ ನಗರಕ್ಕೆ ಬರುತ್ತಿರುವ ನೀರಿನ ಅರ್ಧದಷ್ಟು ಪೋಲಾಗಿ ಹೋಗುತ್ತಿದ್ದು ಇದನ್ನು ತಡೆಯಬಹುದಾಗಿದೆ ಎಂದು ವರದಿ ಮಾಡಲಾಗಿದೆ.