Advertisement
ಇನ್ನೊಂದರಲ್ಲಿ ಕಡುಹಸಿರು ಕೆಂಪಿನ ಕುಂದಣದ ರಂಗೋಲಿಯಲ್ಲಿ ನಾಚಿ ನಸುಬಾಗಿ ನೂರು ಕನಸು ಹೊತ್ತ ವಧುವಿನ ಡೋಲಿಯ ಹಿಂದೆ ಮುಂದೆ ಕುಣಿವ ಉಲ್ಲಾಸದ ಮನಸುಗಳು, ಲಂಗದಂಚಿನ ಗೆರೆಯಲ್ಲಿ ಇರುವೆ ಶಿಸ್ತಲ್ಲಿ ಸಾಗುವ ಲಯವಿನ್ಯಾಸದ ಮೊಹರು. ತೆರೆದ ತುರುಬಿಗೆ ಸಿಕ್ಕಿಸಿದ ಸೆರಗು ಸರಿಸಿ, ತಲೆಯ ಮೇಲಿನ ಬಿಂದಿಗೆಯನ್ನು ಬಲವಾಗಿ ತಬ್ಬಿದ ವೈಯಾರಿಯ ಬಿಂದಿಗೆ ನಡಿಗೆ ಜೀವ ತುಂಬಿಕೊಂಡು, “ಏನು ನೋಡುವೆ, ಸಾಗು ಮುಂದೆ ನನ್ನಂತೆ, ಬಿಂದಿಗೆಯ ನೀರು ತುಳುಕದಂತೆ’ ಎಂದಂತಾಯಿತು. ಕಣ್ಣುಜ್ಜಿ ನೋಡಿದೆ. ಈ ಪರಿಯಲ್ಲಿ ನನ್ನನ್ನು ಲೋಕಾಂತರ ಮಾಡಿದ ಪರ್ಯಟನಗಾರ್ತಿ ಯಾರು? ನಾನು ನೋಡುತ್ತಿರುವ ಕ್ಯಾನ್ವಾಸ್‌ನೊಳಗಿನ ಚಿತ್ರಿಕೆಯೆ!
Related Articles
Advertisement
ಇವೆಲ್ಲ ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ ಕಥಾಲೋಕದ ದೃಶ್ಯವಾದರೂ ಗೃಹಿಣಿಯ ಗೃಹಲೋಕವೆಂಬ ಕಾರ್ಯಾಗಾರದಲ್ಲಿ ಬಿಂದಿಗೆ ಮಾತ್ರವಲ್ಲ, ಮಣ್ಣ ಮಡಕೆಗಳು, ಸಣ್ಣ ಸಣ್ಣ ಕುಡಿಕೆಗಳು, ಮಣ್ಣಿನ ದೊಡ್ಡ ಡಬರಿಗಳು, ಕಣಜಗಳು ಇವುಗಳೆಲ್ಲ ಇತ್ತೀಚಿನವರೆಗೆ ಎಂಥ ಪಾತ್ರ ವಹಿಸಿದ್ದವು ಎಂಬುದು ಮನೆಯ ಹಳೆ ನೆನಪಿನ ಕೋಶದಲ್ಲಿ ಗೋಚರವಾಗುತ್ತದೆ. ಈ ಬಿಂದಿಗೆ ಮಡಕೆಗಳೆಲ್ಲ ಉಗ್ರಾಣ, ಚಾವಡಿ, ಅಟ್ಟದ ಕತ್ತಲೆಯಲ್ಲೂ ಮಿಣುಕು ಹುಳದಂತೆ ಕಣ್ಣು ಸೆಳೆಯುವ ಪಾರಂಪರಿಕ ಸೊತ್ತುಗಳಾಗಿ ಇಂದಿಗೂ ನಮ್ಮ ಮುಂದಿವೆ.
“ಮಸಿ ಹಿಡಿದಷ್ಟೂ ಮಡಕೆ ಗಟ್ಟಿ, ಕಷ್ಟಪಟ್ಟಷ್ಟೂ ಕಾಯ ಗಟ್ಟಿ’ ಎಂಬ ಮಾತಿದೆ. ನಮ್ಮತ್ತೆಯ ಕಾಲದಲ್ಲಿ ಅನ್ನ, ಮೇಲೋಗರ, ಚಟ್ನಿಯಿಂದ ಹಿಡಿದು ಹಾಲು, ಮೊಸರು, ಬೆಣ್ಣೆಯ ತನಕವೂ ಎಲ್ಲವನ್ನೂ ಇಡುವುದು ಮಡಕೆಯಲ್ಲಿಯೇ. ಮಣ್ಣಿನ ಮಡಕೆಯಲ್ಲಿ ಮಾಡಿದ ಸಾಂಬಾರು, ಸೌದೆ ಒಲೆಯ ನಿಗಿನಿಗಿ ಕೆಂಡದಲ್ಲಿ ಕುದಿದಷ್ಟೂ ರುಚಿ. ಪ್ರತಿದಿನ ಕುದ್ದು, ಕ್ರಮೇಣ ಮುದ್ದೆಯಾದಾಗ ಇಮ್ಮಡಿ ರುಚಿ, ಪರಿಮಳ. ಅದನ್ನು ಸವಿದವರಿಗೇ ಗೊತ್ತು ಆ ರುಚಿಯ ಸುಖ.
ತುಳುನಾಡಿನ ಗೃಹಿಣಿಯರು ತಯಾರಿಸುವ “ವೋಡುಪಾಳೆ’ ನಡುವಲ್ಲಿ ಸ್ವಲ್ಪ ತಗ್ಗಿರುವ ಮಣ್ಣಿನ ಕಾವಲಿಯಲ್ಲಿ ಮಾಡುವ ಅಕ್ಕಿಹಿಟ್ಟಿನ ಒಂದು ಬಗೆಯ ರೊಟ್ಟಿ. ಕಾದ ಮಣ್ಣಿನ ಪರಿಮಳದೊಂದಿಗೆ ಅಕ್ಕಿಯ ಸಹಜ ಸುವಾಸನೆ ಸೇರಿ ಮೂಗಿಗೆ ಬಡಿದರೆ ಎಂಥವರಿಗೂ ಬಾಯಲ್ಲಿ ನೀರೂರುತ್ತದೆ. ಈ ತಿಂಡಿಯ ರುಚಿ ಹಿಡಿದವರು ಈಗಲೂ ಮಾರ್ಕೆಟಿನ ಮೂಲೆಮೂಲೆಯಲ್ಲೆಲ್ಲ ಹುಡುಕಿ ಈ ಮಣ್ಣಿನ ಕಾವಲಿಯನ್ನು ಖರೀದಿಸಿ ತರುತ್ತಾರೆ. ಚಿಕ್ಕ ಚಿಕ್ಕ ಕುಡಿಕೆಯಲ್ಲಿ ತಯಾರಿಸುವ ಗಟ್ಟಿ ಮೊಸರಂತೂ ಉತ್ತರಭಾರತದಲ್ಲಿ “ಮಟ್ಕಾ ದಹಿ’ ಎಂದು ಪ್ರಖ್ಯಾತ.
ಮಡಕೆಯಲ್ಲಿ ತಯಾರಿಸುವ ಆಹಾರ ವಿಶೇಷ ರುಚಿ ಹೊಂದಿರುವುದರೊಂದಿಗೆ ಇದು ಮನುಷ್ಯನ ದೇಹ ಸಂಸ್ಕೃತಿಗೆ ಒಗ್ಗುವ ಆರೋಗ್ಯ ಸಂಜೀವಿನಿ. ಆದರೆ ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಎಲ್ಲೋ ಒಂದೆಡೆ ಮಡಕೆ ಎಂದರೆ ಭಿಕಾರಿಗಳ ಸರಕು ಎಂಬ ತಾತ್ಸಾರ ಮನೋಭಾವವಿದೆ. ಇಂದಿನ ಗೃಹಿಣಿಯ ಅಡುಗೆ ಕೋಣೆಯ ಉಪಕರಣಗಳು ಮಡಕೆಯೊಂದಿಗೆ ಹೊಂದಿಕೊಳ್ಳುವುದಿಲ್ಲ. ಕರೆಂಟ್ ಕುಕ್ಕರ್, ಗ್ಯಾಸ್ ಒಲೆ, ಗರಂಮಸಾಲೆಗಳಿಗೆಲ್ಲ ಮಡಕೆ ಹೇಳಿಸಿದ್ದಲ್ಲ.
ಕೆಲವೊಂದಕ್ಕೆ ಮಾತ್ರ ಇಂದಿಗೂ ಮಡಕೆಯೇ ಬೇಕು. ಎಳೆಬಿದಿರು (ಕಣಿಲೆ)ನ ಮೇಲೋಗರ ಮಾಡುವ ಮುಂಚೆ ಅದನ್ನು ಕತ್ತರಿಸಿ ನೀರಲ್ಲಿ ಹಾಕಿಡಬೇಕು. ಅದಕ್ಕೆ ಮಣ್ಣಿನ ಪಾತ್ರೆಯೇ ಬೇಕು. ತೀರಾ ಇತ್ತೀಚಿನವರೆಗೂ ಕಣಿಲೆ ನೀರಿಗೆ ಹಾಕುವುದಕ್ಕಾಗಿಯೇ ಒಂದು ಮಣ್ಣಿನ ಪಾತ್ರೆಯನ್ನು ಅತ್ತೆ ತೆಗೆದಿರಿಸುತ್ತಿದ್ದರು.
ಮೃತ್ತಿಕೆಯ ಪಾತ್ರೆಗೂ ಸಂಸ್ಕೃತಿಗೂ ಸಂಬಂಧ ಅವಿನಾಭಾವ. ಬಾಗಿನ ಕೊಡುವಾಗ ಅರಿಶಿನ-ಕುಂಕುಮ ಹಾಕುವುದು ಮಣ್ಣಿನ ಪಾತ್ರೆಯಲ್ಲಿ. ಮಾನವ ಬದುಕಿನ ಅಂತಿಮ ಯಾತ್ರೆಯಲ್ಲಿ ಅಗ್ನಿವಾಹಕನಾಗಿಯೂ ಮಣ್ಣಿನ ಪಾತ್ರೆಯ ಪಾತ್ರ ಹಿರಿದು.
ಬೇಸಿಗೆಯಲ್ಲಿ ರೆಫ್ರಿಜರೇಟರಿನ ಅತಿ ತಂಪಿನ ನೀರು ಗಂಟಲು ಕೆರೆತಕ್ಕೆ ಕಾರಣವಾದರೆ, ಮಣ್ಣಿನ ಹೂಜಿಯಲ್ಲಿಟ್ಟ ತಣ್ಣೀರು ಒಡಲಿಗೆ ತಂಪಾಗಿ ಹಿತಾನುಭವವನ್ನು ನೀಡುತ್ತದೆ.
ತಿಗರಿಯಲ್ಲಿ ಮಣ್ಣನ್ನು ಬೇಕಾದ ಆಕಾರಕ್ಕೆ ರೂಪಾಂತರಿಸಿ ಬಿಂದಿಗೆ, ಮಡಕೆ ತಯಾರಿಸುತ್ತಿದ್ದ ಕುಂಬಾರನಿಗೀಗ ಬೇಡಿಕೆಯಿಲ್ಲ, ಕೆಲಸವಿಲ್ಲ. ಆದರೆ, ಇತ್ತೀಚೆಗೆ ಹಳೆಯ ಆರೋಗ್ಯ ಪರಿಕರಗಳೆಲ್ಲ ಹೊಸಜೀವ ಪಡೆಯುತ್ತಿರುವುದನ್ನು ನೋಡಿದರೆ ಒಂದಲ್ಲ ಒಂದು ದಿನ ಇಂದಿನ ಗೃಹಿಣಿಯ ಮನದಲ್ಲೂ ಮಡಕೆ ಮರುಜೀವ ಪಡೆಯಬಹುದೇನೋ ಎನಿಸುತ್ತದೆ. ದೀಪಾವಳಿಯಲ್ಲಿ ಮಣ್ಣಿನ ಹಣತೆಯ ದೀಪಾಲಂಕಾರ ಇದಕ್ಕೆ ಸಾಕ್ಷಿ.
ವಿಜಯಲಕ್ಷ್ಮಿ ಶ್ಯಾನ್‌ಭೋಗ್