Advertisement

ಜೆಸಿಬಿ ಕಿತ್ತೂಗೆದು ಹೊಸಬರನ್ನು ತನ್ನಿ

12:02 PM Jul 22, 2017 | |

ಧಾರವಾಡ: ದೇಶದ ಕೃಷಿ ಕ್ಷೇತ್ರ ಹಾಗೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜೆಸಿಬಿ (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ)ಪಕ್ಷಗಳಿಗೆ ವಿದಾಯ ಹೇಳುವುದು ಅಗತ್ಯವಿದೆ ಎಂದು ಹೋರಾಟಗಾರ ಎಸ್‌.ಆರ್‌.ಹಿರೇಮಠ ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ 38ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಕವಿಸಂನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷ ಹಾಗೂ ಸಂವಿಧಾನ ರಚನೆಯಾಗಿ 69 ವರ್ಷ ಕಳೆದರೂ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ರೈತರು, ಬಡವರು ಮತ್ತು ಸಣ್ಣ ಹಿಡುವಳಿದಾರರಿಗಾಗಿ ಏನನ್ನೂ ಮಾಡಿಲ್ಲ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಈ ಪಕ್ಷಗಳು ವಿಫಲವಾಗಿವೆ. ಅಲ್ಲದೇ ಶಿಕ್ಷಣ-ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣ ಗೊಳಿಸಲು ಹೊರಟಿವೆ.

ಇದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದ್ದು, ಹೀಗಾಗಿ ಈ ಪಕ್ಷಗಳಿಗೆ ವಿದಾಯ ಹೇಳಬೇಕಾದ ಸಮಯ ಬಂದೊದಗಿದೆ ಎಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕೆಲ ನೀತಿ ಹಾಗೂ ಯೋಜನೆಗಳು ರೈತ ವಿರೋ ಧಿ ಧೋರಣೆಯಿಂದ ಕೂಡಿವೆ. ಇದಕ್ಕೆಲ್ಲ ಕಡಿವಾಣ ಹಾಕುವಂತಹ ಸಂದರ್ಭ ಈಗ ಬಂದಿದ್ದು, ಅದಕ್ಕಾಗಿ ಎಲ್ಲ ರೈತ ಸಂಘಟನೆಗಳು ಜಾತಿ, ಭೇದ-ಭಾವ ಮರೆತು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು. 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೋದ ಕಡೆಗಳಲ್ಲೆಲ್ಲ ನಾನು ಜನ ಸೇವಕ ಎಂಬುದಾಗಿ ಹೇಳುತ್ತಾರೆ. ಇದು ನಿಜವಾಗಿದ್ದರೆ ದೇಶದಲ್ಲಿ ಶೇ. 63ರಷ್ಟಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸ್ವಾಮಿನಾಥನ್‌ ಅವರ ವರ  ದಿಯನ್ನು ಅನುಷ್ಠಾನಗೊಳಿಸಬೇಕು.

ದೇಶದ ಬಜೆಟ್‌ನಲ್ಲಿ ಉದ್ಯಮಿಗಳಿಗೆ ನೀಡುವ ರಿಯಾಯಿತಿ ಕಡಿತಗೊಳಿಸಿ ದೇಶದ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಇದಾವುದಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗದಿದ್ದರೆ 2ನೇ ಸ್ವಾತಂತ್ರ ಹೋರಾಟಕ್ಕೆ ತಾವೆಲ್ಲರೂ ಅಣಿಯಾಗಬೇಕು. ಅಲ್ಲದೇ ಮುಂಬರುವ ಚುನಾವಣೆಯಲ್ಲಿ  ಪ್ರಾಮಾಣಿಕರನ್ನು ವಿಧಾನಸಭೆ ಹಾಗೂ ಲೋಕಸಭೆಗೆ ಆಯ್ಕೆ ಮಾಡುವ ಕಾರ್ಯಕ್ಕೆ  ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.  

Advertisement

ಸಾಲ ಮನ್ನಾ ಆಗಲೇಬೇಕು: ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, 38 ವರ್ಷಗಳ ಹಿಂದೆ ಗುಂಡೂರಾವ್‌ ಗುಂಡಿಗೆ ಗಂಡೆದೆ ನೀಡಿ ವೀರಮರಣ ಹೊಂದಿದ ಹುತಾತ್ಮ ರೈತರು ಬಿದ್ದ ಮರಗಳಲ್ಲ. ಅವರು ಬಿತ್ತಿದ ಬೀಜಗಳು. ಇದರ ಫಲ ರಾಜ್ಯ ರೈತ ಸಂಘ. ರೈತರ ಸಮಸ್ಯೆಗಳಿಗೆ ಬೇರೆ ರೂಪ ಕೊಡುವ ರಾಜಕೀಯ ಪಕ್ಷಗಳ ನೀತಿಗೆ ಬಲಿಯಾಗಬೇಡಿ ಎಂದರು.

ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಮೂಲಕ ಪ್ರತಿಯೊಬ್ಬ ರೈತರು ಸಾಲ ಮನ್ನಾ ಹಾಗೂ ನಿಗದಿತ ಬೆಂಬಲ ಬೆಲೆಗೆ ಆಗ್ರಹಿಸುವುದನ್ನು ನಿಲ್ಲಿಸಬಾರದು. ದೇಶದಲ್ಲಿರುವ 24 ಸಂಘಟನೆಗಳಲ್ಲಿ ಕೆಆರ್‌ ಆರ್‌ಎಸ್‌ ಅತ್ಯಂತ ಪ್ರಮುಖವಾಗಿದೆ. ಎಲ್ಲರೂ ಒಟ್ಟಾಗಿ ಮಹಾಮೈತ್ರಿಯ ಪರಿಕಲ್ಪನೆಯಲ್ಲಿ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು. ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯದರ್ಶಿ ನಾಗಪ್ಪ ಉಂಡಿ, ಜಿಲ್ಲಾಧ್ಯಕ್ಷ ಈರಣ್ಣ ಬಳಿಗೇರ, ಬಡಗಲಪುರ ನಾಗೇಂದ್ರಪ್ಪ, ಮಲ್ಲಿಕಾರ್ಜುನ ಬಳ್ಳಾರಿ, ಎಂ.ರಾಮು, ಬಲ್ಲೂರ ರವಿಕುಮಾರ, ರಾಮಣ್ಣ ಕೆಂಚಳ್ಳಿ, ಕೆ.ಪಿ. ಬೂತಯ್ಯ, ಗೋವಿಂದರಾಜ್‌, ಕಲ್ಯಾಣ್‌ರಾವ್‌ ಮುಚಳಂಬಿ, ನಾಗರತ್ನಮ್ಮ, ಮಂಜುಳಾ ಅಕ್ಕಿ, ಸುರೇಶಬಾಬು ಪಾಟೀಲ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 2 ಸಾವಿರಕ್ಕೂ ಅಧಿಕ ರೈತರು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next