ಮಂಗಳೂರು: ಶಾಲೆ ತ್ಯಜಿಸಿದ ಮಕ್ಕಳನ್ನು ವೈಯಕ್ತಿಕವಾಗಿ ಪತ್ತೆ ಹಚ್ಚಿ, ಮರಳಿ ಶಾಲೆಗೆ ಬರುವಂತೆ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು. ಮಕ್ಕಳು ಶಾಲೆಯನ್ನು ಅರ್ಧದಲ್ಲಿಯೇ ತ್ಯಜಿಸುವ ಪರಿಸ್ಥಿತಿ ಎದುರಾಗಬಾರದು. ಈ ನಿಟ್ಟಿನಲ್ಲಿ ಶಿಕ್ಷಕರೂ ನಿರಂತರ ಗಮನ ಹರಿಸುತ್ತಿರಬೇಕು ಎಂದರು.
ಜಿಲ್ಲೆಯಲ್ಲಿ ಮಂಗಳಮುಖೀಯರ ಭಿಕ್ಷಾಟಣೆ ನಿಲ್ಲಿಸಲು ಮಂಗಳಮುಖೀ ಸಮಿತಿ ಕ್ರಮಗಳನ್ನು ಕೈಗೊಂಡಿದೆ. ವಲಸೆ ಬಂದಿರುವ ಮಂಗಳಮುಖೀಯರು ಹಲವು ಟೋಲ್ ಗೇಟ್‌ಗಳಲ್ಲಿ ಮಧ್ಯರಾತ್ರಿಯವರೆಗೂ ತೊಂದರೆ ನೀಡುತ್ತಿದ್ದು, ಇದರ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಲಿಂಗತ್ವ ಅಲ್ಪಸಂಖ್ಯಾಕರ ಪುನರ್ವಸತಿ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ ಕೊಡಲಾಗುವುದು ಮತ್ತು ಇವರು ನಿವೇಶನದ ಕುರಿತು ನೀಡಿರುವ ಅರ್ಜಿಗಳ ಎಷ್ಟಿವೆ ಎಂಬ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಬೆಳ್ತಂಗಡಿ ತಾಲೂಕು ಅತಿ ಕಡಿಮೆ ಲಿಂಗಾನುಪಾತ ಹೊಂದಿದ್ದು, ಬೆಳ್ತಂಗಡಿಯ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅವರು ಸೂಚಿಸಿದರು. ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿರುವ ಸ್ವಾಧಾರ ಗೃಹ ಯೋಜನೆಯಲ್ಲಿ ಮಾನಸಿಕ ರೋಗಿಗಳ ಪುನರ್ವಸತಿಗೆ ಮಂಗಳೂರು ನಗರದಲ್ಲಿ ನಿವೇಶನ ಲಭ್ಯತೆ ಇಲ್ಲದ ಕಾರಣ ಹೊರವಲಯದಲ್ಲಿ ನಿವೇಶನಗಳನ್ನು ಗುರುತಿಸುವಂತೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಸಖೀ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ಇದರ ಪ್ರಯೋಜನಕ್ಕೊಳಪಡುವ ಮಹಿಳೆಯರಿಗೆ, ಸಾರ್ವಜನಿಕರಿಗೆ ಪ್ರಾಥಮಿಕ ಮಟ್ಟದಲ್ಲಿ ಮಾಹಿತಿ ನೀಡಬೇಕು. ಯಾವುದೇ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಸಂದರ್ಭ ಆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಫಲಾನುಭವಿಗಳ ಗಮನಕ್ಕೆ ತರುವ ಕಾರ್ಯ ನಡೆಯಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ., ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, ಎನ್‌ಜಿಒ ಪ್ರತಿನಿಧಿಗಳು, ಸಂಬಂಧ ಪಟ್ಟ ಇಲಾಖಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.