ಈಶ್ವರಮಂಗಲ: ಕರ್ನಾಟಕ- ಕೇರಳ ರಾಜ್ಯವನ್ನು ಬೆಸೆಯುವ ಪಳ್ಳತ್ತೂರಿನಲ್ಲಿ ಸರ್ವಋತು ಸೇತುವೆಗೆ ಕೇರಳ ಸರಕಾರದಿಂದ 7.50 ಕೋ. ರೂ. ಮಂಜೂರುಗೊಂಡಿದ್ದು, ಕಾಮಗಾರಿಗೆ ಶಿಲಾನ್ಯಾಸ ಜರಗಿತು.
ಕೇರಳ ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವ ಜಿ. ಸುಧಾಕರನ್ ಶುಕ್ರವಾರ ನೆರವೇರಿಸಿದರು. ಪುತ್ತೂರು
ತಾಲೂಕಿನ ಈಶ್ವರಮಂಗಲದಿಂದ 5 ಕಿ.ಮೀ. ದೂರದಲ್ಲಿ ಪಳ್ಳತ್ತೂರಿನಲ್ಲಿ ಕೇರಳ ರಾಜ್ಯದ ದೇಲಂಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಮುಳುಗು ಸೇತುವೆ ಇದೆ. ಮಳೆಗಾಲ ಸಂದರ್ಭ ಮುಳುಗು ಸೇತುವೆಯಲ್ಲಿ ಸಂಚಾರ ಕಷ್ಟವಾಗಿತ್ತು. ಇಲ್ಲಿ ಕಿರು ಮೋರಿಗಳನ್ನು ಅಳವಡಿಸಿ, ಪಳ್ಳತ್ತೂರು ಕಿರು ನದಿಗೆ ಸೇತುವೆ ನಿರ್ಮಿಸಲಾಗಿತ್ತು. ಸಣ್ಣ ಮಳೆಗೂ ಸೇತುವೆ ಮುಳುಗುವುದರಿಂದ ಇಲ್ಲಿ ವರ್ಷವೂ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ಇನ್ನು ಈ ಸಮಸ್ಯೆಗೆ ಮುಕ್ತಿ ದೊರೆಯಲಿದೆ.
ಉದುಮ ಕ್ಷೇತ್ರದ ಶಾಸಕ ಕೆ. ಕುಂಞಿ ರಾಮನ್, ಕೇರಳ ರಾಜ್ಯ ಉತ್ತರವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಿನಿ ಪಿ.ಕೆ., ಕಾಸರಗೋಡು ಜಿ.ಪಂ.ಅಧ್ಯಕ್ಷ ಎ.ಜಿ.ಸಿ. ಬಶೀರ್, ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಎ. ಮುಸ್ತಾಫ್ ಹಾಜಿ, ಕಾರಡ್ಕ ಪಂ. ಅಧ್ಯಕ್ಷ ಒಮನ ರಾಮಚಂದ್ರನ್, ಉಪಾಧ್ಯಕ್ಷ ಸಿ.ಕೆ. ಕುಮಾರನ್, ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಕಾಸರ ಗೋಡು ಜಿಲ್ಲಾ ಪಂ. ಸದಸ್ಯೆ ಎ.ಪಿ. ಉಷಾ, ಕಾಸರಗೋಡು ಲೋಕೋಪಯೋಗಿ ಸಹಾಯಕ ಎಂಜಿನಿಯರ್ ರಿಯಾದ್ ಬಿ. ಮೊದಲಾದವರು ಭಾಗವಹಿಸಿದರು.