Advertisement
ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ ಕೊತ್ನಡ್ಕ ಎನ್ನುವ ತೀರಾ ಕುಗ್ರಾಮವಿದೆ. ಬಾಳುಗೋಡು ಪೇಟೆಯಿಂದ ಐದಾರು ಕಿ.ಮೀ. ದೂರದ ಅರಣ್ಯದ ಅಂಚಿನಲ್ಲಿ ಈ ಪ್ರದೇಶವಿದೆ. ಕಾಡು ದಾರಿಯ ಮೂಲಕ ಕಚ್ಚಾ ರಸ್ತೆಯಲ್ಲಿ ಇಲ್ಲಿಗೆ ತೆರಳಬೇಕು. ದಾರಿ ಮಧ್ಯೆ ಹೊಳೆ ಹರಿಯುತ್ತದೆ. ಇಲ್ಲಿಯವರು ಈ ಹೊಳೆ ದಾಟಲು ಮಳೆಗಾಲದಲ್ಲಿ ಹರಸಾಹಸ ಪಡುತ್ತಾರೆ.
ಬಹುಕಾಲದ ಬೇಡಿಕೆಯಂತೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಇಲ್ಲಿನ ಸಂಪರ್ಕಕ್ಕಾಗಿ ಕಿರು ಸೇತುವೆ ನಿರ್ಮಾಣಕ್ಕೆ 8.25 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು. ಗುತ್ತಿಗೆದಾರರು ಕಾಮಗಾರಿಗೆ ಬೇಕಿರುವ ಸಾಮಗ್ರಿ ಸಂಗ್ರಹಿಸಿ ಕೆಲಸ ಆರಂಭಿಸಿದ್ದರು. ಪಿಲ್ಲರ್ ಕೆಲಸ ಸಾಗಿತ್ತು. ಕಳೆದ ಮೂರು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದಕ್ಕೆ ಗುತ್ತಿಗೆದಾರರು ಕೊಟ್ಟಿರುವ ಕಾರಣ ಅನುದಾನ ಸಾಲುವುದಿಲ್ಲ ಎನ್ನುವುದಾಗಿತ್ತು. ಇನ್ನೂ ಬೇಕು 10 ಲಕ್ಷ ರೂ.!
ಕಿರು ಸೇತುವೆಯ ಕಾಮಗಾರಿ ಪೂರ್ಣಗೊಳಿಸಬೇಕಾದರೆ ಇನ್ನೂ ಹತ್ತು ಲಕ್ಷ ರೂ. ಅನುದಾನದ ಆವಶ್ಯಕತೆ ಇದೆ ಎಂದು ಸಂಬಂಧಪಟ್ಟವರು ಹೇಳುತ್ತಾರೆ. ದೊರೆತ ಅನುದಾನದಲ್ಲಿ ಸೇತುವೆ ಕಾಮಗಾರಿ ನಡೆಸಿದ್ದಾಗಿ ಹೇಳಿ ಗುತ್ತಿಗೆದಾರರು ಜಾಗ ಖಾಲಿ ಮಾಡಿದ್ದಾರೆ. ಸೇತುವೆಗೆ ಹಾಕಿದ ಪಿಲ್ಲರ್ ಪಾಳು ಬಿದ್ದಿದೆ. ಸೇತುವೆ ನಿರ್ಮಾಣಕ್ಕೆಂದು ತಂದು ಹಾಕಿದ್ದ ಸಾಮಗ್ರಿಗಳು ಕಾಣೆಯಾಗಿವೆ. ಪಿಲ್ಲರಿಗೆ ಅಳವಡಿಸಿದ ಸಾಧನಗಳು ತುಕ್ಕು ಹಿಡಿದಿವೆ.
Related Articles
ಸತತ ಪ್ರಯತ್ನದ ಮೂಲಕ ಸೇತುವೆ ಮಂಜೂರುಗೊಂಡರೂ, ನಿರೀಕ್ಷಿತ ಅನುದಾನ ಸಿಗದೆ ಸೇತುವೆ ಪೂರ್ಣವಾಗದೆ ಇರುವುದು ಈ ಭಾಗದ ನಾಗರಿಕರಲ್ಲಿ ಬೇಸರ ತರಿಸಿದೆ. ಈ ಬಾರಿ ಚುನಾವಣೆ ವೇಳೆ ಮತ ಕೇಳಲು ಈ ಭಾಗಕ್ಕೆ ತೆರಳುವವರಿಗೆ ಇದರ ಬಿಸಿ ತಟ್ಟಿದೆ. ಚುನಾವಣೆ ಪ್ರಚಾರದ ವೇಳೆ ಇಲ್ಲಿನ ಮೂಲ ಸೌಕರ್ಯ ನಿರ್ಲಕ್ಷ್ಯದ ವಿಚಾರ ಕೂಡ ಚರ್ಚೆಗೆ ಬಂದಿತ್ತು. ಆದರೆ ಪ್ರತಿ ಭಾರಿ ಫಲಿತಾಂಶ ಶೂನ್ಯ.
Advertisement
ತೂಗು ಸೇತುವೆಯೇ ಆಧಾರಶಾಲಾ ಮಕ್ಕಳು, ನಾಗರಿಕರು ಈ ರಸ್ತೆಯ ಮೂಲಕ ನಿತ್ಯವೂ ಓಡಾಡುತ್ತಾರೆ. ನಿತ್ಯವೂ ತಮ್ಮ ಬೇಡಿಕೆಗಳನ್ನು ಈ ರಸ್ತೆ ಮೂಲಕವೇ ಸಂಚರಿಸಿ ಪೂರೈಸಿಕೊಳ್ಳುತ್ತಾರೆ. ಈ ಊರಿಗೆ ಖಾಸಗಿ ಜೀಪು ಹೊರತುಪಡಿಸಿ ಇನ್ಯಾವುದೇ ವಾಹನ ಸೌಲಭ್ಯ ಕೂಡ ಇಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವ ಕಾರಣ ಸ್ಥಳೀಯರು ತಾತ್ಕಾಲಿಕ ಮರದ ತೂಗು ಸೇತುವೆ ನಿರ್ಮಿಸಿಕೊಂಡು ಹೊಳೆ ದಾಟುತ್ತಾರೆ. ಅನುದಾನ ಒದಗಿಸಿ: ಆಗ್ರಹ
ಸೇತುವೆ ಮಂಜೂರಾಗಿ ನಾಲ್ಕು ವರ್ಷಗಳು ಆಗಿವೆ. ಇನ್ನೂ ಸೇತುವೆ ಅರ್ಧದಲ್ಲೇ ಬಾಕಿಯಾಗಿದೆ. ಹೆಚ್ಚಿನ ಅನುದಾನದ ಅಗತ್ಯತೆ ಇದೆ. ಅರ್ಧಕ್ಕೆ ಕಾಮಗಾರಿ ಸ್ಥಗಿತವಾಗಿದ್ದರಿಂದ ಸರಕಾರದ ಯೋಜನೆ ಹಳ್ಳ ಹಿಡಿದಿದೆ. ಎಲ್ಲ ಕಡೆಗಳಲ್ಲೂ ಸಂಪರ್ಕ ಅಭಿವೃದ್ಧಿಯಾದರೆ, ನಾವಿಲ್ಲಿ ಇನ್ನೂ ಸಮಸ್ಯೆ ಅನುಭವಿಸುತ್ತಲೇ ಇದ್ದೇವೆ. ಇನ್ನಾದರೂ ಕಾಮಗಾರಿ ಚುರುಕು ಮುಟ್ಟಿಸಿ ಮಳೆಗಾಲದ ಮುಂಚಿತ ಪೂರ್ಣಗೊಳಿಸಬೇಕು.
– ಚೇತನ್ ಕಜೆಗದ್ದೆ ಸ್ಥಳಿಯ ನಿವಾಸಿ ವಿಶೇಷ ಪ್ರಯತ್ನ
ಜಿ.ಪಂ. ಕ್ಷೇತ್ರಕ್ಕೆ ಹತ್ತು ಲಕ್ಷ ಅನುದಾನವಷ್ಟೇ ಲಭ್ಯವಿರುವುದು. ಹೀಗಾಗಿ ಅನುದಾನದ ಕೊರತೆ ಇದೆ. ಶಾಸಕರ ವಿಶೇಷ ಅನುದಾನವನ್ನು ಕೇಳಿಕೊಂಡು ಸೇತುವೆ ಕಾಮಗಾರಿ ಪೂರ್ಣಗೊಳಿಸಲು ವಿಶೇಷ ಪ್ರಯತ್ನ ನಡೆಸಲಾಗುವುದು. ಸ್ಥಳೀಯ ಜನಪ್ರತಿನಿಧಿಗಳ ಜತೆ ಈ ಕುರಿತು ಶೀಘ್ರವೇ ಚರ್ಚಿಸಲಾಗುವುದು.
– ಆಶಾ ತಿಮ್ಮಪ್ಪ ಜಿ.ಪಂ. ಸದಸ್ಯೆ, ಗುತ್ತಿಗಾರು ಕ್ಷೇತ್ರ ಬಾಲಕೃಷ್ಣ ಭೀಮಗುಳಿ