Advertisement

ಸೇತುವೆ ದುರಸ್ತಿ ಶೀಘ್ರ ನಡೆಯಲಿ

11:11 AM Feb 05, 2019 | |

ಬಸವಕಲ್ಯಾಣ: ಬಸವಕಲ್ಯಾಣದಿಂದ ಹುಲಸೂರು ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-165ರ ಮಧ್ಯದಲ್ಲಿರುವ ಜಮಖಂಡಿ ಗ್ರಾಮ ಹತ್ತಿರದ ಕುಸಿದು ಬಿದ್ದ ಸೇತುವೆ ದುರಸ್ಥಿ ಆಗದಿರುವುದರಿಂದ ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮೂರು ವರ್ಷಗಳಿಂದ ಸಂಚಾರ ಸಮಸ್ಯೆಯಾಗಿದೆ.

Advertisement

ಮಹಾರಾಷ್ಟ್ರದ ಸಾಜನೀ ಔರಾದ್‌, ನಿಲಂಗಾ, ಲಾತೂರ ಹಾಗೂ ತಾಲೂಕು ಕೇಂದ್ರಗಳಾದ ಭಾಲ್ಕಿ, ಬಸವಕಲ್ಯಾಣ, ಹುಲಸೂರ ಸೇರಿದಂತೆ ಪ್ರಮುಖ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ.

ವಿಶೇಷವಾಗಿ ಹುಲಸೂರು ಗಡಿಭಾಗದಲ್ಲಿ ಇರುವುದರಿಂದ ಗ್ರಾಮೀಣ ಭಾಗದ ಜನರು ಪ್ರತಿಯೊಂದು ವ್ಯವಹಾರಕ್ಕೆ ಮಹಾರಾಷ್ಟ್ರ ಸಾಜನಿ ಔರಾದ್‌ ಮೇಲೆ ಅವಲಂಬಿತರಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುವುದು ಸಾಮಾನ್ಯವಾಗಿದೆ. 2014-15ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಸೇತುವೆ ಕುಸಿದು ಬಿದ್ದಿತ್ತು. ಆದರೆ ನಾಲ್ಕು ವರ್ಷವಾದರೂ ದುರಸ್ಥಿ ಮಾಡದಿರುವುದರಿಂದ ಪ್ರಯಾಣಿಕರ ಆಕ್ರೋಷಕ್ಕೆ ಕಾರಣವಾಗಿದೆ.

ಬಸ್‌, ಆಟೋ, ಜೀಪ್‌ ಹಾಗೂ ಭಾರೀ ವಾಹನಗಳು ಸೇತುವೆ ಪಕ್ಕದ ಹಳ್ಳದ ಕಚ್ಚಾ ರಸ್ತೆಯಿಂದ ಅನಿವಾರ್ಯವಾಗಿ ಭಯದಲ್ಲೇ ಸಂಚಾರ ಮಾಡುವಂತಾಗಿದೆ ಎಂದು ಪ್ರಯಾಣಿಕ ರಾಜಕುಮಾರ ತಿಳಿಸಿದ್ದಾರೆ.

ರಾತ್ರಿ ವೇಳೆ ಚಾಲಕರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅಪಘಾತ ಸಂಭವಿಸುವುದು ಖಚಿತ ಎಂಬುದು ಒಂದು ಕಡೆಯಾದರೆ, ಮಳೆ ಬಂದರೆ ಸಾಕು ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವು-ಸಲ ಅವಘಡಗಳು ಕೂಡ ಘಟಿಸಿದ ಉದಾಹರಣೆ ಇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

ಇಂತಹ ಪ್ರಮುಖ ರಸ್ತೆಯ ಸೇತುವೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಲವು ವರ್ಷಗಳಿಂದ ದುರಸ್ಥಿ ಅಥವಾ ಮರುನಿಮಾರ್ಣಣ ಮಾಡದೇ ನಿರ್ಲಕ್ಷ್ಯ ತೋರುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಈ ವಿಷಯದಲ್ಲಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಚಲ್ಲಾಟವಾದರೆ, ಪ್ರಯಾಣಿಕರಿಗೆ ಮಾತ್ರ ಪ್ರಾಣ ಸಂಕಟವಾಗಿದೆ. ಆದ್ದರಿಂದ ಸೇತುವೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ ಪ್ರಯಾಣಿಕರನ್ನು ಸಮಸ್ಯೆಯಿಂದ ಮುಕ್ತಿಗೊಳಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

ಸಂಬಂಧ ಪಟ್ಟ ಇಲಾಖೆಯಿಂದ 8 ದಿನಗಳ ಒಳಗೆ ಟೆಂಡರ್‌ ಕರೆದು, ಮಾರ್ಚ್‌ನೊಳಗೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಆ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಡಲಾಗುವುದು. •ಸುಧೀರ್‌ ಕಾಡಾದಿ, ಜಿಪಂ ಸದಸ್ಯರು, ಹುಲಸೂರ

ಗಡಿಭಾಗದ ಕರ್ನಾಟಕ- ಮಹರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಹಾಗಾಗಿ ನಿತ್ತ ನೂರಾರು ಸಂಖ್ಯೆ ವಾಹನಗಳು ಈ ಮಾರ್ಗವಾಗಿ ಸಂಚಾರ ಮಾಡುತ್ತವೆ. ಆದ್ದರಿಂದ ಕೂಡಲೇ ಸೇತುವೆ ದುರಸ್ಥಿ ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು.
•ನೈಮೋದ್ದಿನ್‌, ಜೀಪ್‌ ಚಾಲಕ

•ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next