Advertisement

ಕಬ್ಬಿನಾಲೆ-ಕಟ್ಟಿನಾಡಿ: ಹೊಳೆ ದಾಟಲು ಕಾಲುಸಂಕವೇ ಆಸರೆ

12:30 AM Mar 09, 2019 | |

ಹಳ್ಳಿಹೊಳೆ: ನಕ್ಸಲ್‌ ಪೀಡಿತ ಕಬ್ಬಿನಾಲೆ ಹಾಗೂ ಕಟ್ಟಿನಾಡಿ ಎನ್ನುವ ಎರಡು ಊರುಗಳನ್ನು ಬೆಸೆಯುವ ಚಕ್ರಾ ನದಿಗೆ ಹಲವು ವರ್ಷಗಳಿಂದ ಸಂಪರ್ಕ ಸೇತುವೆ ಬೇಡಿಕೆಯಿದ್ದರೂ, ಇನ್ನೂ ಈಡೇರಿಲ್ಲ. ಹೊಳೆ ದಾಟಲು ಇಲ್ಲಿನ ಜನರಿಗೆ ಕಾಲುಸಂಕವೇ ಆಸರೆಯಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಬ್ಬಿನಾಲೆಯಲ್ಲಿ ಸುಮಾರು 40 ಮನೆಗಳಿದ್ದು,  ದೇವರಬಾಳುವಿನಲ್ಲಿ ಸುಮಾರು 35, ಕಟ್ಟಿನಾಡಿಯಲ್ಲಿ 25 ಮನೆಗಳಿವೆ. ಕಾರೇಬೈಲಿನಲ್ಲಿ ಸುಮಾರು 60 ಮನೆಗಳಿವೆ. ಕಟ್ಟಿನಾಡಿಯಲ್ಲಿ ಚಕ್ರ ನದಿಗೆ ಸೇತುವೆ ನಿರ್ಮಾಣವಾದರೆ ಈ ಎಲ್ಲ ಊರಿನ ಜನರಿಗೆ ಸಂಚಾರಕ್ಕೆ ಅನುಕೂಲವಾಗಲಿದೆ. 


ದೇವರಬಾಳುವಿಗೆ ಹತ್ತಿರ
ಸೇತುವೆಯಾದರೆ ಕಬ್ಬಿನಾಲೆಯಿಂದ ಈ ಮಾರ್ಗವಾಗಿ ದೇವರಬಾಳುವಿಗೆ ಹತ್ತಿರದ ಮಾರ್ಗವಾಗಲಿದೆ. ಕೇವಲ 1 ಕಿ.ಮೀ. ಮಾತ್ರ ಅಂತರವಿರಲಿದೆ. ಇನ್ನೂ ಕಬ್ಬಿನಾಲೆ – ಕಟ್ಟಿನಾಡಿ ಸೇತುವೆಯಿಲ್ಲದೆ 8 ಕಿ.ಮೀ. ದೂರವಿದೆ. ಸೇತುವೆಯಾದರೆ ಮತ್ತಷ್ಟು ಹತ್ತಿರವಾಗುತ್ತದೆ. 

Advertisement

ಶಾಲಾ ಮಕ್ಕಳಿಗೆ ತೊಂದರೆ
ಬೇಸಿಗೆಯಲ್ಲಾದರೆ ನೀರು ಕಡಿಮೆ ಇರುವುದರಿಂದ ಹೇಗೂ ನದಿಗೆ ಇಳಿದು ದಾಟಬಹುದು. ಆದರೆ ಮಳೆಗಾಲದಲ್ಲಿ ಪ್ರತಿ ವರ್ಷ ಪಂಚಾಯತ್‌ ಅನುದಾನದಲ್ಲಿ ಸ್ಥಳೀಯರೆಲ್ಲ ಸೇರಿ ತಾತ್ಕಾಲಿಕ ಕಾಲು ಸಂಕವನ್ನು ನಿರ್ಮಿಸುತ್ತಿದ್ದು, ಶಾಲಾ ಮಕ್ಕಳ ಸಹಿತ ಎಲ್ಲರೂ ಅದನ್ನೇ ಆಶ್ರಯಿಸಿದ್ದಾರೆ. 

ಕೊಚ್ಚಿಹೋಗಿದ್ದ ಕಾಲು ಸಂಕ
2 ವರ್ಷಗಳ ಹಿಂದೆ ಭಾರೀ ಮಳೆಗೆ ಇಲ್ಲಿ ನಿರ್ಮಿಸಿದ್ದ ಕಾಲು ಸಂಕವೇ ಕೊಚ್ಚಿಕೊಂಡು ಹೋಗಿತ್ತು. ಆಗ ಈವರೆಡೂ ಊರುಗಳ ಮಧ್ಯೆ ಸಂಪರ್ಕವೇ ಕಡಿದು ಹೋಗಿತ್ತು. ಕಾಲು ಸಂಕದ ಸಮೀಪದಲ್ಲೇ ಒಂದು ಕಿಂಡಿ ಅಣೆಕಟ್ಟು ನಿರ್ಮಿಸಿದ್ದರೂ, ಅದು ಮಳೆಗಾಲದಲ್ಲಿ ಮುಳುಗಡೆಯಾಗುವುದರಿಂದ ಆ ಮೂಲಕ ನದಿ ದಾಟುವುದು ಕಷ್ಟ. ಇದೇ ಡ್ಯಾಂನ್ನು ಸ್ವಲ್ಪ ಎತ್ತರಕ್ಕೆ ಏರಿಸಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.  

ಬೇಡಿಕೆಗೆ ಸ್ಪಂದನೆಯೇ ಇಲ್ಲ
ಗ್ರಾಮೀಣ ಪ್ರದೇಶವಾದ ಇಲ್ಲಿಗೆ ಸೇತುವೆ ಬೇಡಿಕೆ ಕುರಿತಂತೆ ಈ ಭಾಗದ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಬೇಡಿಕೆಗೆ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಒಂದು ವರ್ಷ ನಿರ್ಮಿಸಿದ ಕಾಲು ಸಂಕ ಮತ್ತೂಂದು ವರ್ಷಕ್ಕೆ ಇರುವುದಿಲ್ಲ. 
– ಶೇಖರ ಕಟ್ಟಿನಾಡಿ, ಸ್ಥಳೀಯರು
 
ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ
ಕಬ್ಬಿನಾಲೆ – ಕಟ್ಟಿನಾಡಿ ಸೇತುವೆ ಬೇಡಿಕೆ ಕುರಿತಂತೆ ಈಗಾಗಲೇ ಲೋಕೋಪಯೋಗಿ ಸಚಿವ ಎಚ್‌. ಡಿ. ರೇವಣ್ಣ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲೆಲ್ಲ ಕಾಲು ಸಂಕಗಳಿವೆ ಅನ್ನುವುದರ ಪಟ್ಟಿ ಕೂಡ ಸಚಿವರಿಗೆ ಕಳುಹಿಸಲಾಗಿದೆ. ಆದರೆ ಇನ್ನೂ ಕೂಡ ಸೇತುವೆ ಮಂಜೂರಾಗಿಲ್ಲ. 
– ರೋಹಿತ್‌ ಕುಮಾರ್‌ ಶೆಟ್ಟಿ, ಜಿ.ಪಂ. ಸದಸ್ಯರು

– ಪ್ರಶಾಂತ್‌ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next