ಬ್ರಿಕ್ಸ್ ಒಕ್ಕೂಟವನ್ನು ಇನ್ನಷ್ಟು ವಿಸ್ತರಣೆ ಮಾಡಬೇಕು ಎಂಬ ಬಹು ವರ್ಷಗಳ ಬೇಡಿಕೆಗೆ ಈಗ ಒಪ್ಪಿಗೆ ಸಿಕ್ಕಿದ್ದು, ಮುಂದಿನ ಜ.1ರಿಂದಲೇ ಇನ್ನೂ ಆರು ದೇಶಗಳು ಈ ಕೂಟವನ್ನು ಸೇರಿಕೊಳ್ಳಲಿದ್ದು, ಒಟ್ಟಾರೆಯಾಗಿ 11 ರಾಷ್ಟ್ರಗಳ ಕೂಟವಾಗಿ ಬದಲಾಗಲಿದೆ. ಸದ್ಯ ಬ್ರೆಜಿಲ್, ರಷ್ಯಾ, ಭಾರತ, ಚೀನ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಬ್ರಿಕ್ಸ್‌ನ ಸದಸ್ಯರಾಗಿವೆ. ಈಗ ಅರ್ಜೆಂಟೀನಾ, ಸೌದಿ ಅರೆಬಿಯಾ, ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುಎಇ ದೇಶಗಳು ಹೊಸದಾಗಿ ಸೇರ್ಪಡೆಯಾಗಲಿವೆ.
ಈಗ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಬ್ರಿಕ್ಸ್ ಶೃಂಗ ಸಭೆ ನಡೆಯುತ್ತಿದ್ದು, ಇದರಲ್ಲಿ ಹೊಸ ದೇಶಗಳಿಗೆ ಸೇರ್ಪಡೆಗಾಗಿ ಆಹ್ವಾನ ನೀಡಲಾಗಿದೆ. ಬ್ರಿಕ್ಸ್ ವಿಸ್ತರಣೆ ವಿಚಾರದಲ್ಲಿ ಆರಂಭದಿಂದಲೂ, ಭಾರತ ಮತ್ತು ಬ್ರೆಜಿಲ್ ತಮ್ಮದೇ ಆದ ನಿಲುವು ಹೊಂದಿದ್ದವು. ಯಾವುದೇ ಕಾರಣಕ್ಕೂ ಚೀನ ಹೇಳಿದಂತೆ ಕೇಳುವ ಮತ್ತು ಚೀನದ ಸಿಲ್ಕ್ ರೋಡ್ ಯೋಜನೆಗೆ ಅನುಕೂಲವಾಗುವಂಥ ದೇಶಗಳಿಗೆ ಮಾತ್ರ ಸದಸ್ಯತ್ವ ನೀಡಲು ಒಪ್ಪಿಗೆ ನೀಡಬಾರದು ಎಂಬುದು ಈ ಎರಡು ದೇಶಗಳ ನಿಲುವಾಗಿತ್ತು. ಈ ನಿಟ್ಟಿನಲ್ಲಿ ಭಾರತ ರಷ್ಯಾ, ದಕ್ಷಿಣ ಆಫ್ರಿಕಾ ಜತೆಗೂ ಮಾತನಾಡಿ ತನ್ನ ನಿಲುವು ಸ್ಪಷ್ಟ ಮಾಡಿತ್ತು.
ಕಳೆದ ಫೆಬ್ರವರಿಯಲ್ಲೇ ಚೀನದ ವಿದೇಶಾಂಗ ಇಲಾಖೆ, ಈ ಬಾರಿಯ ಬ್ರಿಕ್ಸ್ ಶೃಂಗದ ಪ್ರಮುಖ ಅಜೆಂಡಾವೇ ವಿಸ್ತರಣೆ ಮಂತ್ರ ಎಂದಿತ್ತು. ಚೀನದ ಬ್ರಿಕ್ಸ್ ವಿಸ್ತರಣೆ ವಾದದ ಹಿಂದೆ ಜಗತ್ತಿನ ಮೇಲೆ ಪಾಶ್ಚಿಮಾತ್ಯ ದೇಶಗಳ ಹಿಡಿತವನ್ನು ತಪ್ಪಿಸಬೇಕು ಎಂಬ ಹಪಾಹಪಿತನವೂ ಇದೆ. ಈ ಗುಂಪಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಮಾತ್ರ ಪಾಶ್ಚಿಮಾತ್ಯ ದೇಶಗಳ ಜತೆ ಉತ್ತಮ ಬಾಂಧವ್ಯ ಹೊಂದಿವೆ. ಆದರೆ, ಚೀನ ಮತ್ತು ರಷ್ಯಾ ಅಷ್ಟಕ್ಕಷ್ಟೇ ಎಂಬಂತಿವೆ. ಹೀಗಾಗಿ, ಚೀನ ಈ ವಿಸ್ತರಣೆ ಮೂಲಕ ಇನ್ನೊಂದು ಮಾರ್ಗದಲ್ಲಿ ಜಗತ್ತಿನ ಇತರೆ ದೇಶಗಳನ್ನೂ ತನ್ನ ಮುಷ್ಟಿಗೆ ತೆಗೆದುಕೊಳ್ಳಲು ಮುಂದಾಗಿದೆ ಎಂಬ ಮಾತುಗಳೂ ಇದ್ದವು. ಹೀಗಾಗಿ, ಯಾವುದೇ ಕಾರಣಕ್ಕೂ ಈ ಗುಂಪಿನಲ್ಲಿ ಚೀನ ಕೈ ಮೇಲಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಈಗ ಅಳೆದು ತೂಗಿ ಆರು ದೇಶಗಳನ್ನು ಈ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ಜಗತ್ತಿನ ಶೇ.46ರಷ್ಟು ಜನಸಂಖ್ಯೆಯನ್ನು ಇದೊಂದೇ ಕೂಟ ಹೊಂದಿದಂತಾಗುತ್ತದೆ. ಅಲ್ಲದೆ, ಚೀನ ಮತ್ತು ಭಾರತ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಅಗ್ರ ಸ್ಥಾನಕ್ಕೂ ಏರಲಿವೆ.
ಬ್ರಿಕ್ಸ್ ವಿಸ್ತರಣೆ ಹಿಂದೆ ತೈಲ ಮಾರುಕಟ್ಟೆಯ ಪ್ರಭಾವವೂ ಇದೆ. ಸೌದಿ ಅರೆಬಿಯಾ, ಯುಎಇ ಜಗತ್ತಿನ ದೊಡ್ಡ ತೈಲೋತ್ಪಾದಕ ದೇಶಗಳಾಗಿದ್ದು, ಚೀನದೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿವೆ. ಈ ವಿಸ್ತರಣೆಯಿಂದಾಗಿ ಚೀನಗೆ ಲಾಭವಾಗುವ ಸಾಧ್ಯತೆಗಳೂ ಹೆಚ್ಚಾಗಿವೆ.
ಈ ವಿಸ್ತರಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದು, ಜತೆಗೆ, ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ. ಸದ್ಯ ಜಿ7 ಮತ್ತು ಜಿ20 ಕೂಟದ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಕುರಿತಂತೆಯೂ ಭಾರತ ಒತ್ತಾಯಿಸಿಕೊಂಡೇ ಬರುತ್ತಿದೆ. ಬ್ರಿಕ್ಸ್ ವಿಸ್ತರಣೆಯಾದಂತೆ, ಉಳಿದ ಕೂಟಗಳೂ ವಿಸ್ತರಣೆಯಾಗಬೇಕು, ಅಭಿವೃದ್ದಿ ಶೀಲ ದೇಶಗಳನ್ನು ಇವುಗಳಿಗೆ ಸ್ವಾಗತಿಸಬೇಕು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೂ ಇದು ಸಕಾಲ ಎಂಬ ಸಂದೇಶವನ್ನೂ ಅವರು ಪರೋಕ್ಷವಾಗಿ ರವಾನಿಸಿದ್ದಾರೆ.