ಮುಂಬಯಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 12,600 ಕೋಟಿ ರೂ.ಮೋಸ ಮಾಡಿದ ಉದ್ಯಮಿ ನೀರವ್ ಮೋದಿ ಬ್ಯಾಂಕ್‌ನ ಅಧಿಕಾರಿಗಳಿಗೆ ಚಿನ್ನ ಮತ್ತು ವಜ್ರದ ರೂಪದಲ್ಲಿ ಲಂಚ ನೀಡಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮುಂಬಯಿಯ ವಿದೇಶ ವ್ಯವಹಾರಗಳ ಶಾಖೆಯ ಮ್ಯಾನೇಜರ್ ಆಗಿದ್ದ ಯಶವಂತ ಜೋಶಿ 60 ಗ್ರಾಂ ಚಿನ್ನದ ನಾಣ್ಯ, ವಜ್ರ ಹಾಗೂ ಚಿನ್ನದ ಆಭರಣವನ್ನು ಲಂಚದ ರೂಪದಲ್ಲಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದು, ಈ ಆಭರಣಗಳನ್ನು ಅವರ ಮನೆಯಿಂದ ಸಿಬಿಐ ವಶಪಡಿಸಿಕೊಂಡಿದೆ.
ಮಹಿಳಾ ಉದ್ಯೋಗಿ ಬಂಧಿಸಿದ್ದಕ್ಕೆ ಆಕ್ಷೇಪ: ನೀರವ್ ಮೋದಿ ಸಂಸ್ಥೆಯ ಉದ್ಯೋಗಿ ಕವಿತಾ ಮಂಕೀಕರ್‌ರನ್ನು ರಾತ್ರಿ ಅವರ ಮನೆಯಿಂದ ಸಿಬಿಐ ಬಂಧಿಸಿದ್ದಕ್ಕೆ ನೀರವ್ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ನೀರವ್ ಪತ್ರ ಬರೆದಿದ್ದು, ಅಪರಾಧ ಕಾನೂನಿನ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಆಕ್ಷೇಪಿಸಿದ್ದಾರೆ. ವಕೀಲರ ಪ್ರಕಾರ ಮಂಕೀಕರ್‌ರನ್ನು ರಾತ್ರಿ 8 ಗಂಟೆಗೆ ಬಂಧಿಸಲಾಗಿದ್ದು, ಕಾನೂನಿನ ಪ್ರಕಾರ ಮಹಿಳೆಯನ್ನು ಸೂರ್ಯಾಸ್ತದ ನಂತರ ಬಂಧಿಸಬಾರದು ಎಂದು ನೀರವ್ ಪತ್ರವನ್ನು ಬರೆದಿದ್ದಾರೆ.
ಸಾಲ ನೀಡಿಕೆಗೆ ಹೊಡೆತ: ಹಗರಣದಿಂದಾಗಿ ಪಿಎನ್‌ಬಿ ಸಾಲ ನೀಡಿಕೆ ಚಟುವಟಿಕೆಯ ಮೇಲೆ ಹೊಡೆತ ಬಿದ್ದಿದೆ ಎನ್ನಲಾಗಿದೆ. ಈಗ ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್ ನೀಡಲು ಯಾವ ಬ್ಯಾಂಕ್ ಗೂ ಸಾಧ್ಯವಾಗುತ್ತಿಲ್ಲ. ಈ ಮೂಲಕ ವಿದೇಶಗಳಿಂದ ಹಣ ಪಡೆಯಲೂ ಸಾಧ್ಯವಾಗುತ್ತಿಲ್ಲ ಎಂದು ಪಿಎನ್‌ಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಾಂಕಾಂಗ್‌ನಲ್ಲಿ ನೀರವ್?: ನೀರವ್ ಮೋದಿ ಈಗ ಹಾಂಕಾಂಗ್‌ನಲ್ಲಿದ್ದಾರೆ ಎನ್ನಲಾಗಿದೆ. ನೀರವ್‌ಗೆ ಜಾಮೀನು ರಹಿತ ವಾರಂಟ್ ಹೊರಡಿಸುವಂತೆ ಕೋರಿ ಅರ್ಜಿ ಸಲ್ಲಿಸುವ ವೇಳೆ ಈ ಬಗ್ಗೆ ಜಾರಿ ನಿರ್ದೇಶನಾಲಯ ವಿಶೇಷ ಹಣ ದುರ್ಬಳಕೆ ತಡೆ ನ್ಯಾಯಾಲಯಕ್ಕೆ ಸಲ್ಲಿಸಿದ ವಿವರದಲ್ಲಿ ತಿಳಿಸಿದೆ. ಇದೇ ವೇಳೆ ಸಿಬಿಐ ರವಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಿದೆ.