Advertisement
ತಾಲೂಕಿನ ಆಡಳಿತ ಸೌಧ ಹಾಗೂ ಕಚೇರಿಗಳು ಭ್ರಷ್ಟಾಚಾರಿಗಳ ಕೂಪವಾಗಿ ಮಾರ್ಪಟ್ಟಿದ್ದು ಹಣವಿಲ್ಲದೆ ಇಲ್ಲಿ ಒಂದು ಕಡತ ಅತ್ತಿತ್ತ ಜರುಗುವುದಿಲ್ಲ, ಜನಸಾಮಾನ್ಯರು, ರೈತರು ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ದಲ್ಲಾಳಿ ಮೂಲಕ ತೆರಳಿ ಕೇಳಿದಷ್ಟು ಹಣ ಕೊಟ್ಟರೆ ಮಾರನೇ ದಿನ ಎಲ್ಲವೂ ಸುಸೂತ್ರವಾಗಿ ನೆರವೇರುತ್ತದೆ. ಜನಸಾಮಾನ್ಯರು ನೇರವಾಗಿ ಅಧಿಕಾರಿ ಬಳಿ ಹೋದರೆ ಕಾನೂನು ಕೇಳುತ್ತಾರೆ, ಇಲ್ಲ ಸಲ್ಲದ ದಾಖಲಾತಿ ಕೇಳಿ ನಿತ್ಯವೂ ಕಚೇರಿಗೆ ಅಲೆಸುತ್ತಾರೆ.
Related Articles
Advertisement
ಲಂಚ ನೀಡದಿದ್ದರೆ ದಾಖಲೆಗಳ ವ್ಯತ್ಯಾಸ: ತಾಲೂಕಿನಲ್ಲಿ ಅತಿ ದೊಡ್ಡ ಭ್ರಷ್ಟಾಚಾರ ಕೋಪವಾಗಿರುವುದು ತಾಲೂಕಿನ ಭೂ ಮಾಪನ ಇಲಾಖೆಯಲ್ಲಿ ಹಣವಿಲ್ಲದೆ ಏನು ಆಗುವುದಿಲ್ಲ, ಹಣ ನೀಡಿದರೆ ಭೂ ಮಾಪನಾ ಇಲಾಖೆಯಿಂದ ಕಂದಾಯ ಇಲಾಖೆಗೆ, ಕಂದಾಯ ಇಲಾಖೆಯಿಂದ ಭೂ ಮಾಪನಾ ಇಲಾಖೆಗೆ ಅಲೆದಾಡುವುದು ತಪ್ಪುತ್ತದೆ. ಒಂದು ಪೋಡು ಮಾಡಿಸಲು ಕನಿಷ್ಟವೆಂದರೆ 50 ಸಾವಿರ ರೂ. ವೆಚ್ಚ ಮಾಡಬೇಕಾಗುತ್ತದೆ. ಹಣ ಕೊಡದಿದ್ದಲ್ಲಿ ಸತಾಯಿಸಿ ಕೊನೆಗೆ ಬೇಕಾಬಿಟ್ಟಿ ಕೆಲಸ ಮಾಡಿ ದಾಖಲೆಗಳ ವ್ಯತ್ಯಾಸ ಮಾಡುವ ಮೂಲಕ ರೈತರನ್ನು ಮತ್ತಷ್ಟು ಅತಂಕಕ್ಕೆ ತಳ್ಳಲಾಗುತ್ತಿದೆ.
ನೋಂದಣಾಧಿಕಾರಿ ಕಚೇರಿಯಲ್ಲಿ ಸಾವಿರಾರು ರೂ. ಎಸಿಬಿಗೆ ದೊರೆತಿದೆ: ಎರಡು ತಿಂಗಳ ಹಿಂದೆ ಜಿಲ್ಲಾ ಎಸಿಬಿ ತಂಡ ಮಿನಿ ವಿಧಾನ ಸೌಧದಲ್ಲಿ ಇರುವ ಉಪನೋಂದಾಣಾಧಿಕಾರಿ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿದಾಗ 84 ಸಾವಿರ ನಗದು ದೊರೆತು ಅದನ್ನು ತಮ್ಮ ವಶಕ್ಕೆ ಪಡೆದು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಆದರೂ ಈ ಇಲಾಖೆಯಲ್ಲಿ ಪತ್ರಬರಹಗಾರರದ್ದೇ ಕಾರುಬಾರು ನಿಂತ್ತಿಲ್ಲ, ಬಾಗಿಲಿನಲ್ಲಿ ಪತ್ರಬರಹಗಾರರಿಗೆ ಪ್ರವೇಶ ಇಲ್ಲ ಎಂದು ನಾಮಫಲಕ ಹಾಕಲಾಗಿದೆ ಆದರೆ ಕಚೇರಿಗೆ ಒಳಗೆ ಅವರೇ ತುಂಬಿ ಕೊಂಡಿರುತ್ತಾರೆ.
ನೂರು ದಾಖಲೆಗಳ ವ್ಯತ್ಯಾಸ : ಸರ್ವೆ ಇಲಾಖೆ ಹಾಗೂ ಕಂದಾಯಗೆ ಹಣ ನೀಡದೆ ಇದ್ದರೆ ದುರಸ್ತು ಮಾಡುವಾಗ ಸರ್ವೆ ನಂಬರ್ ವ್ಯತ್ಯಾಸ ಮಾಡುತ್ತಾರೆ ಈ ರೀತಿಯಾಗಿ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಮಂದಿ ರೈತರ ಸರ್ವೆ ನಬಂಬರ್ ವ್ಯತ್ಯಾಸವಾಗಿದ್ದು ಎಡಿಎಲ್ ಆರ್ ನ್ಯಾಯಲಯದಲ್ಲಿವೆ, ಅಧಿಕಾರಿಗಳು ಮಾಡುವ ತಪ್ಪಿಗೆ ರೈತರು ನ್ಯಾಯಾಲಯ ಅಲೆಯುವುದಲ್ಲದೆ ಅದಕ್ಕಾಗಿ ಹಣ ನೀಡುವ ಪರಿಸ್ಥಿತಿ ಬಂದೊದಗಿದೆ.
ನಿಯಮ ಪಾಲಿಸದ ನೌಕರರು : ತಾಲೂಕಿನ ಸರ್ಕಾರಿ ಕಚೇರಿಗಳಿಗೆ ನಿಗದಿತ ಸಮಯಕ್ಕೆ ಸಿಬ್ಬಂದಿ ಆಗಮಿಸುವುದಿಲ್ಲ, ಸರ್ಕಾರ ನಿಯಮ ಪ್ರಕಾರ ಬೆಳಗ್ಗೆ 9.55 ರಿಂದ 10.30ರ ಒಳಗೆ ಕಚೇರಿಗೆ ಹಾಜರಾಗುವ ಸಿಬ್ಬಂದಿ ಬಯೋಮೆಟ್ರಿಕ್ ನೀಡಬೇಕು ಮತ್ತು ಸಂಜೆ 5.30ಕ್ಕೆ ಕರ್ತವ್ಯ ಮುಗಿಸಿ ಹೊರ ಹೋಗುವಾಗ ಬಯೋ ಮೆಟ್ರಿಕ್ ನೀಡಬೇಕೆಂಬ ನಿಯಮವಿದಿದ್ದರೂ ಇದು ಪಾಲನೆ ಆಗುತ್ತಿಲ್ಲ, ಹಾಗಾಗಿ ಅಧಿಕಾರಿಗಳನ್ನು ಕಾಯುವುದು ಸಾರ್ವಜನಿಕರಿಗೆ ಅನಿವಾರ್ಯವಾಗಿದೆ.
ಲಂಚ ಪಡೆಯುವ ಬಗ್ಗೆ ದೂರುಗಳು ಬಂದಿಲ್ಲ, ಈ ಬಗ್ಗೆ ದೂರುಗಳು ಬಂದರೆ ನಾನು ನೇರವಾಗಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ. ಉಪವಿಭಾಗಾಧಿಕಾರಿಗೆ ಪತ್ರ ಬರೆಯುವ ಮೂಲಕ ಗಮನಕ್ಕೆ ತರಲಾಗುತ್ತದೆ. ಸಾರ್ವಜನಿಕರು ಅಧಿಕಾರಿ ಮೇಲೆ ಏಕಾ ಏಕಿ ಕೈ ಮಾಡುವುದು ಅಪರಾಧ. – ಜೆ.ಬಿ.ಮಾರುತಿ, ತಹಶೀಲ್ದಾರ್.
–ಶಾಮಸುಂದರ್ ಕೆ.ಅಣ್ಣೇನಹಳ್ಳಿ