Advertisement

ಎರಡೆಲೆ ವಿಲೀನ? ಚೆನ್ನೈನಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ

03:45 AM Apr 18, 2017 | Harsha Rao |

– ಎರಡೆಲೆಗೆ 50 ಕೋಟಿ; ಚುನಾವಣಾ ಆಯೋಗಕ್ಕೇ ಲಂಚ ನೀಡಲು ಯತ್ನ
– ಎಐಎಡಿಎಂಕೆ ನಾಯಕ ದಿನಕರನ್‌ ವಿರುದ್ಧ ಎಫ್ಐಆರ್‌
– ಡೀಲ್‌ ಕುದುರಿಸಿದ್ದ ಬೆಂಗಳೂರಿನ ಸುಕೇಶ್‌ ಚಂದ್ರಶೇಖರ್‌ ಸೆರೆ
ಚೆನ್ನೈ/ನವದೆಹಲಿ:
ಎಐಎಡಿಎಂಕೆ ಪಕ್ಷದ “ಎರಡೆಲೆ’ಯ ಚಿಹ್ನೆಗಾಗಿ ಪಕ್ಷದ ನಾಯಕ ಟಿ.ಟಿ.ವಿ. ದಿನಕರನ್‌ ಅವರು ಚುನಾವಣಾ ಆಯೋಗಕ್ಕೇ ಲಂಚ ನೀಡಲು ಪ್ರಯತ್ನಿಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Advertisement

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನದಿಂದ ತೆರವಾದ ಆರ್‌.ಕೆ.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಎರಡೆಲೆಯ ಚಿಹ್ನೆಯಲ್ಲೇ ಸ್ಪರ್ಧಿಸಬೇಕೆಂಬ ಉದ್ದೇಶದಿಂದ ದಿನಕರನ್‌ ಅವರು ಚುನಾವಣಾ ಆಯೋಗದ ಅಧಿಕಾರಿಗೆ ಬರೋಬ್ಬರಿ 50 ಕೋಟಿ ರೂ. ಲಂಚ ನೀಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ದೆಹಲಿ ಕ್ರೈಂ ಬ್ರಾಂಚ್‌ ಪೊಲೀಸರು ದಿನಕರನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಡೀಲ್‌ ಕುದುರಿಸಿದ್ದ ಮಧ್ಯವರ್ತಿ ಬೆಂಗಳೂರಿನ ಸುಕೇಶ್‌ ಚಂದ್ರಶೇಖರ್‌ ಎಂಬಾತನನ್ನು ಭಾನುವಾರ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಬಂಧಿಸಲಾಗಿತ್ತು. ಆತನೇ ವಿಚಾರಣೆ ವೇಳೆ ಈ ಎಲ್ಲ ಅಂಶಗಳನ್ನು ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ದಿನಕರನ್‌ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳುವುದಾಗಿ ಚೆನ್ನೈನಿಂದ ಹೊರಟಿದ್ದ ದಿನಕರನ್‌, ತಮ್ಮ ವಿರುದ್ಧ ಎಫ್ಐಆರ್‌ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದಾರೆ. ಬೆಂಗಳೂರಿಗೂ ಬಾರದ ಅವರು ಎಲ್ಲಿ ಅವಿತುಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

50 ಕೋಟಿಯ ಡೀಲ್‌:
ಹಲವು ವಂಚನೆ ಪ್ರಕರಣಗಳ ಆರೋಪಿಯಾಗಿರುವ ಸುಕೇಶ್‌ ಈ ಡೀಲ್‌ ಕುದುರಿಸಿದಾತ. “ಎರಡೆಲೆ ಚಿಹ್ನೆಯನ್ನು ನಿಮಗೇ ಕೊಡಿಸುತ್ತೇನೆ. ಆದರೆ, ಅದಕ್ಕೆ 50 ಕೋಟಿ ರೂ. ಲಂಚ ನೀಡಬೇಕಾಗುತ್ತದೆ’ ಎಂದು ಹೇಳಿ, ಡೀಲ್‌ಗೆ ಕೈಹಾಕಿದ್ದ. ಭಾನುವಾರ ದೆಹಲಿಯಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರು, ಸುಕೇಶ್‌ ಬಳಿಯಿದ್ದ 1.30 ಕೋಟಿ ರೂ.ಗಳನ್ನು ಹಾಗೂ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್‌ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಸುಕೇಶ್‌ಗೆ ಚುನಾವಣಾ ಅಧಿಕಾರಿಗಳೊಂದಿಗೆ ನಿಜಕ್ಕೂ ನಂಟಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಶಿಕಲಾ ಹಾಗೂ ಪನ್ನೀರ್‌ಸೆಲ್ವಂ ಬಣದ ನಡುವೆ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪಕ್ಷದ ಚಿಹ್ನೆಯಾದ “ಎರಡೆಲೆ’ಗಳನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿತ್ತು. ನಂತರ, ಎರಡೂ ಬಣಗಳಿಗೂ ಪ್ರತ್ಯೇಕ ಚಿಹ್ನೆಗಳನ್ನು ನೀಡಿತ್ತು. ಇನ್ನೊಂದೆಡೆ, ಮತಕ್ಕಾಗಿ ಹಣ ಹಂಚಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಏ.12ರಂದು ನಡೆಯಬೇಕಿದ್ದ ಆರ್‌.ಕೆ.ನಗರ ಉಪಚುನಾವಣೆಯನ್ನೂ ಆಯೋಗ ರದ್ದುಮಾಡಿತ್ತು. ದಿನಕರನ್‌ ಅವರು ಶಶಿಕಲಾ ಬಣದಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

Advertisement

ಆರೋಪ ತಳ್ಳಿಹಾಕಿದ ದಿನಕರನ್‌:
ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿರುವ ದಿನಕರನ್‌, ನಾನು ಯಾರಿಗೂ ಲಂಚ ನೀಡಿಲ್ಲ ಎಂದಿದ್ದಾರೆ. ಜತೆಗೆ, “ಕೆಲವು ಸಚಿವರು ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ ಎಂಬ ಆರೋಪಗಳೆಲ್ಲ ಸುಳ್ಳು. ಇದು ನಮ್ಮ ಹಾಗೂ ಪಕ್ಷದ ವಿರುದ್ಧ ಕೆಲವರು ನಡೆಸುತ್ತಿರುವ ಯೋಜಿತ ಷಡ್ಯಂತ್ರ. ಪಕ್ಷವನ್ನು ನಾಶ ಮಾಡಲು ನಡೆಸಿರುವ ಸಂಚು,’ ಎಂದಿದ್ದಾರೆ. “ಮಧ್ಯವರ್ತಿ ಎನ್ನಲಾಗುತ್ತಿರುವ ವ್ಯಕ್ತಿ ಬಗ್ಗೆಯೂ ನನಗೆ ಗೊತ್ತಿಲ್ಲ. ಮಾಧ್ಯಮಗಳ ವರದಿಗಳಿಂದಷ್ಟೇ ನನಗೆ ಮಾಹಿತಿ ಗೊತ್ತಾಯಿತು. ದೆಹಲಿ ಪೊಲೀಸರು ನನಗೆ ಯಾವ ಸಮನ್ಸ್‌ ಅನ್ನೂ ಜಾರಿ ಮಾಡಿಲ್ಲ. ಸಮನ್ಸ್‌ ಸಿಕ್ಕಿದರೆ ಆ ಮೇಲೆ ಉತ್ತರಿಸುತ್ತೇನೆ. ನಾನು ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇನೆ,’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪನ್ನೀರ್‌ ಬಣದತ್ತ ಸಚಿವರು; ವಿಲೀನವಾಗುತ್ತಾ ಎಐಎಡಿಎಂಕೆ?
ಪಕ್ಷದ ಚಿಹ್ನೆಗೆ ಸಂಬಂಧಿಸಿದ ಬೆಳವಣಿಗೆಗಳು ಸಿಎಂ ಪಳನಿಸ್ವಾಮಿ ಸರ್ಕಾರದ ಸ್ಥಿರತೆ ಬಗ್ಗೆಯೇ ಅನುಮಾನ ಮೂಡಿಸಿದ್ದು, ಹಲವು ನಾಯಕರು ಪನ್ನೀರ್‌ಸೆಲ್ವಂ ಬಣದತ್ತ ವಾಲುತ್ತಿದ್ದಾರೆ. ಶಶಿಕಲಾ ಬಣದಲ್ಲೇ ಬಂಡಾಯದ ಹೊಗೆ ಕಾಣಿಸಿಕೊಂಡಿದೆ. ಹಲವು ಸಚಿವರು ಸೇರಿದಂತೆ ಪಕ್ಷದ ಹಿರಿಯ ನಾಯಕರು ಪನ್ನೀರ್‌ ಬಣ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಎಐಎಡಿಎಂಕೆಯ ಎರಡೂ ಬಣಗಳು ವಿಲೀನಗೊಳ್ಳುತ್ತವೆ ಹಾಗೂ ಪನ್ನೀರ್‌ಸೆಲ್ವಂರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಸೆಲ್ವಂ, “ನನ್ನನ್ನು ಯಾರೂ ಸಂಪರ್ಕಿಸಿಲ್ಲ. ವಿಲೀನವಾಗುವುದಾದರೆ ನಾವು ಮಾತುಕತೆ ನಡೆಸಲು ಸಿದ್ಧರಿದ್ದೇವೆ. ಆದರೆ, ದಿನಕರನ್‌ ನೇತೃತ್ವದ ಬಣವೇ ಮುಂದೆ ಬರಲಿ’ ಎಂದಿದ್ದಾರೆ. ಶಶಿಕಲಾ, ಅವರ ಕುಟುಂಬ ಹಾಗೂ ದಿನಕರನ್‌ರನ್ನು ಪಕ್ಷದಿಂದ ಹೊರಗಿಟ್ಟರಷ್ಟೇ, ವಿಲೀನ ಮಾತುಕತೆ ನಡೆಸುವುದಾಗಿ ಪನ್ನೀರ್‌ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಸಿಂಬಲ್‌ ವಾರ್‌
ಮಾ.10- ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ನೇಮಕದ ಸಿಂಧುತ್ವ ಕುರಿತು ಚುನಾವಣಾ ಆಯೋಗಕ್ಕೆ ಶಶಿಕಲಾ ಮಾಹಿತಿ. ಎರಡೆಲೆ ಚಿಹ್ನೆ ನಮಗೇ ಸೇರಬೇಕೆಂದು ಪಳನಿಸ್ವಾಮಿ ಪ್ರತಿಪಾದನೆ
ಮಾ.16- ಎರಡೆಲೆಯ ಚಿಹ್ನೆ ನಮಗೇ ಕೊಡಬೇಕೆಂದು ಆಯೋಗಕ್ಕೆ ಅರ್ಜಿ ಸಲ್ಲಿಸಿದ ಪನ್ನೀರ್‌ಸೆಲ್ವಂ ಬಣ
ಮಾ. 17- ಎರಡೂ ಬಣಗಳು 22ರಂದು ಚುನಾವಣಾ ಆಯೋಗದ ಮುಂದೆ ಹಾಜರಾಗಬೇಕು ಎಂದು ಸೂಚನೆ
ಮಾ. 21- ಪಕ್ಷದ ಎರಡೆಲೆ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡ ಆಯೋಗ. 23ರೊಳಗೆ ಹೊಸ ಚಿಹ್ನೆ ಆಯ್ಕೆ ಮಾಡುವಂತೆ ಸೂಚನೆ
ಮಾ. 22- 6 ಗಂಟೆಗಳ ವಿಚಾರಣೆ ವೇಳೆ ಎರಡೂ ಬಣಗಳಿಂದ ವಾದ ಮಂಡನೆ. ದಾಖಲೆಗಳ ನೀಡಿಕೆ.
ಮಾ. 23- ಪನ್ನೀರ್‌ಸೆಲ್ವಂ ಬಣಕ್ಕೆ “ವಿದ್ಯುತ್‌ ಕಂಬ’, ಶಶಿಕಲಾ ಬಣಕ್ಕೆ “ಹ್ಯಾಟ್‌’ ಚಿಹ್ನೆ ಪಕ್ಕಾ

ಇದೊಂದು ಆಘಾತಕಾರಿ ವಿದ್ಯಮಾನ. ಅಷ್ಟೇ ಅಲ್ಲ, ಹಣದಿಂದ ಏನನ್ನು ಬೇಕಿದ್ದರೂ ಕೊಳ್ಳಬಹುದು ಎಂದು ಯೋಚಿಸಿರುವುದು ನಾಚಿಕೆಗೇಡಿನ ಸಂಗತಿ. ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಹಣಬಲವು ಹೇಗೆ ಕೊಡಲಿಯೇಟು ಹಾಕುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
– ಡಿ. ರಾಜಾ, ಸಿಪಿಐ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next