Advertisement

Suspended ಲಂಚ ಪ್ರಕರಣ: ಕೋಟ ಠಾಣೆ ಉಪನಿರೀಕ್ಷಕ ಶಂಭುಲಿಂಗಯ್ಯ ಅಮಾನತು

11:39 PM Dec 10, 2023 | Team Udayavani |

ಕೋಟ: ಕೋಟ ಠಾಣೆ ಉಪನಿರೀಕ್ಷಕರಾಗಿದ್ದು, ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗಯ್ಯ ಅವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಅಮಾನತುಗೊಳಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕುಮಾರ್‌ ಪತ್ರಿಕೆಗೆ ತಿಳಿಸಿದ್ದಾರೆ.

Advertisement

ಕಾಲೇಜಿನ ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರು ದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು. ಈ ಕುರಿತು ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ಎಸ್‌.ಪಿ. ತಿಳಿಸಿದ್ದಾರೆ.

ಅಚ್ಲಾಡಿಯ ಖಾಸಗಿ ಕಾಲೇಜಿನಲ್ಲಿ ಆಡಳಿತ ಮಂಡಳಿಯೊಳಗೆ ಗಲಾಟೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್‌ ಹಾಗೂ ಮಹಿಮಾ ಮಧು ಭಾಸ್ಕರ್‌ ಅವರು ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಮಧು ಭಾಸ್ಕರ್‌ ವಿರುದ್ಧ ದೂರು ದಾಖಲಿಸಲು ಹಾಗೂ ಮಹಿಮಾ ವಿರುದ್ಧದ ದೂರಿಗೆ ಬಿ.ರಿಪೋರ್ಟ್‌ ನೀಡುವುದಾಗಿ ಆಗ ಠಾಣಾಧಿಕಾರಿಯಾಗಿದ್ದ ಶಂಭು ಲಿಂಗಯ್ಯ ಲಂಚ ಪಡೆದಿದ್ದರು. ಅದರಲ್ಲೂ ಹತ್ತಿರದ ಸಂಬಂಧಿಯೋರ್ವರ ಖಾತೆಗೆ ಸ್ವಲ್ಪ ಮೊತ್ತದ ಹಣ ವರ್ಗಾಯಿಸಿಕೊಂಡಿದ್ದಾರೆ.

ಈ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ಧವಿದ್ದು ಠಾಣಾಧಿಕಾರಿಗಳನ್ನು ತತ್‌‍ಕ್ಷಣ ಅಮಾನತುಗೊಳಿಸಬೇಕು ಎಂದು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಮುಖ ಎನ್ನಲಾದ ದಿನೇಶ್‌ ಗಾಣಿಗ ಕೋಟ ವೀಡಿಯೋ ಮೂಲಕ ಎಸ್‌.ಪಿ. ಅವರನ್ನು ವಿನಂತಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿತ್ತು.

ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ನಿಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next