ಬೆಂಗಳೂರು: ಎಲೆಕ್ಟ್ರಿಕ್ ಕೇಬಲ್ ಬದಲಾಯಿಸಲು 35 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ಬಿಬಿಎಂಪಿ ಸಹಾಯಕ ಅಭಿಯಂತರ ಹಾಗೂ ಗ್ಯಾಂಗ್ ಮ್ಯಾನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಿಬಿಎಂಪಿಯ ವಿಜಯನಗರ ಪ್ರಶಾಂತ್ ನಗರ ವಾರ್ಡನ ಸಹಾಯಕ ಎಂಜಿನಿಯರ್ ಬಿ.ಪ್ರವೀಣ್, ಗ್ಯಾಂಗ್ ಮ್ಯಾನ್ ಸುರೇಶ್ ಬಂಧಿತರು.
ಶ್ರೀಚಕ್ರ ಎಲೆಕ್ಟ್ರಿಕಲ್ಸ್ ನಲ್ಲಿ ಫೀಲ್ಡ್ ಎಂಜಿ ನಿಯರ್ ಆಗಿರುವ ಬಿ.ಎಸ್.ರಘು ನಂದನ್ ಎಂಬುವವರು ರಸ್ತೆ ಅಗೆದು ತಮ್ಮ ಜಾಗದಲ್ಲಿ ಎಲೆಕ್ಟ್ರಿಕ್ ಕೇಬಲ್ ಬದಲಾಯಿಸಿಕೊಡುವಂತೆ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಸಿಕೊಡಲು ಆರೋಪಿ ಪ್ರವೀಣ್ 35 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ಕೊಡಲು ಇಚ್ಛಿಸದ ರಘುನಂದನ್ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಪ್ರವೀಣ್ ಸೂಚನೆ ಮೇರೆಗೆ ರಘು ನಂದನ್ ಅವರಿಂದ ಗ್ಯಾಂಗ್ ಮ್ಯಾನ್ ಸುರೇಶ್ ಶುಕ್ರವಾರ ಕಚೇರಿಯ ಆವರಣದಲ್ಲೇ 25 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದರು. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಸುರೇಶ್‌ನನ್ನು ವಿಚಾರಣೆ ಮಾಡಿದಾಗ ಎಂಜಿನಿಯರ್ ಪ್ರವೀಣ್ ಸೂಚನೆಯಂತೆ ಲಂಚ ಪಡೆದಿರುವುದಾಗಿ ಆತ ಹೇಳಿದ್ದ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಎಂಜಿನಿಯರ್ ಪ್ರವೀಣ್ ಹಾಗೂ ಸುರೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.