ಕಲಬುರಗಿ: ಪೆಟ್ರೋಲ್ ಪಂಪಗೆ NOC ಪ್ರಮಾಣ ಪತ್ರ ಕೊಡಲು ಲಕ್ಷ ರೂ ಲಂಚ ಬೇಡಿಕೆ ಇಟ್ಟು 20 ಸಾವಿರ ರೂ ಲಂಚ ಪಡೆಯುವಾಗ ಅಗ್ನಿ ಶಾಮಕ ದಳದ ಅಧಿಕಾರಿ ಹಾಗೂ ಸಿಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಅಗ್ನಿ ಶಾಮಕ ದಳದ ಕಚೇರಿಯಲ್ಲೇ ಲಂಚ ಪಡೆಯುತ್ತಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ ಹಾಗೂ ಸಿಬ್ಬಂದಿ ಸೋಪನ್ ರಾವ್ ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದಾರೆ.
NOC ಪ್ರಮಾಣ ಪತ್ರ ನೀಡಲು ಲಕ್ಷ ರೂ ಬೇಡಿಕೆ ಇಟ್ಟು 20 ಸಾವಿರ ರೂ ಲೋಕಾಯುಕ್ತರು ಬಲೆ ಬೀಸಿದ್ದಾರೆ. ಚಿತ್ತಾಪುರದ ರಾಜರಾಮಪ್ಪ ನಾಯಕ ಎನ್ನುವರು ದೂರು ನೀಡಿದ ಮೇರೆಗೆ ದಾಳಿ ನಡೆದಿದ್ದು, ತನಿಖಾ ಕಾರ್ಯ ಮುಂದುವರೆದಿದೆ.
ಲೋಕಾಯುಕ್ತ ಎಸ್ ಪಿ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಮಂಜುನಾಥ್, ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಸಿಬಂದಿ ದಾಳಿ ನಡೆಸಿದ್ದಾರೆ.
ಕಡತಗಳಿಗೆ ಸಹಿ ಮಾಡಲು ಸಿಬಂದಿಯಿಂದಲೇ ಲಂಚ ಪಡೆಯುತ್ತಿದ್ದ ಭೂ ದಾಖಲೆಗಳ ಉಪನಿರ್ದೇಶಕ (ಡಿಡಿಎಲ್ ಆರ್) ಪ್ರವೀ ಜಾಧವ್ ಹಾಗೂ ಮಧ್ಯವರ್ತಿ ಶರಣಗೌಡ ಎನ್ನುವರನ್ನು ವಾರದ ಹಿಂದೇಯಷ್ಟೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಖೆಡ್ಡಾ ತೋರಿದ್ದರು. ಅಗ್ನಿ ಶಾಮಕ ದಳದ ಇಲಾಖೆಯಲ್ಲೂ ಲಂಚದ ಹಾವಳಿ ಕಳೆದ ಕೆಲ ವರ್ಷಗಳಿಂದ ಜೋರಾಗಿ ಕೇಳಿ ಬರುತ್ತಿತ್ತು.ಈಗ ದಾಳಿ ನಡೆದಿರುವುದು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.