Advertisement

ಲಂಚದ ಹಣ ಪ್ರಕರಣ: ಮೋಹನ್‌ಗೆ ಜಾಮೀನಿಲ್ಲ

12:30 AM Jan 19, 2019 | |

ಬೆಂಗಳೂರು: ವಿಧಾನಸೌಧದ ಕಾರಿಡಾರ್‌ನಲ್ಲಿ ದಾಖಲೆಯಿಲ್ಲದ 25.76 ಲಕ್ಷ ರೂ.ಹಣದ ಸಮೇತ ಸಿಕ್ಕಿ
ಬಿದ್ದ ಪ್ರಕರಣದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಎಸ್‌.ಜೆ ಮೋಹನ್‌ ಕುಮಾರ್‌ಗೆ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

Advertisement

ಮೋಹನ್‌ ಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಪ್ರಕರಣ ಸಂಬಂಧ ಎಸಿಬಿ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರ ಹಣವನ್ನು ಸಚಿವರಿಗೆ ಲಂಚದ ರೂಪದಲ್ಲಿ ತಲುಪಿಸಲು ಹೋಗುತ್ತಿದೆ ಎಂದು ಆರೋಪಿ ಮೋಹನ್‌ ಕುಮಾರ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಮನೆ ಕಟ್ಟಲು ಸಂಬಂಧಿಕರೊಬ್ಬರು ನೀಡಿದ ಹಣ ಹಾಗೂ ಚಿನ್ನಾಭರಣ ಅಡವಿಟ್ಟು ಪಡೆದ ಹಣ ಎಂಬ ಆರೋಪಿಯ ಈಗಿನ ವರಸೆಯನ್ನು ಒಪ್ಪಲು ಸಾಧ್ಯವಿಲ್ಲ. ಅದೇ ಹಣವಾಗಿದ್ದರೆ ಆತ ರಿಜಿಸ್ಟ್ರಾರ್‌ ಬುಕ್‌ನಲ್ಲಿ ನಮೂದಿಸಬೇಕಿತ್ತು. ಈಗಾಗಲೇ ಪ್ರಕರಣದಲ್ಲಿ ವಿಚಾರಣೆ ನಡೆಸಬೇಕಿರುವ ಗುತ್ತಿಗೆದಾರರು ಹಾಗೂ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಹಂತದಲ್ಲಿಜಾಮೀನು ನೀಡಿದರೆ ಸಾಕ್ಷ್ಯ ನಾಶಕ್ಕೆ ಯತ್ನಿಸುವ ಸಾಧ್ಯತೆಯಿದೆ ಎಂಬ ಪ್ರಾಸಿಕ್ಯೂಶನ್‌ ವಾದ ಹಾಗೂ ಇನ್ನಿತರ ಕಾನೂನಾತ್ಮಕ ಅಂಶಗಳನ್ನು ಮಾನ್ಯ ಮಾಡಿದ ನ್ಯಾಯಾಲಯ, ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ ಎಂದು ಎಸಿಬಿ ಪರ ವಾದಿಸಿದ್ದ ಸರ್ಕಾರಿ ಅಭಿಯೋಜಕ ಬಿ.ರಮೇಶ್‌ ಬಾಬು ತಿಳಿಸಿದರು. ಪ್ರಕರಣದ ಮತ್ತೂಬ್ಬ ಆರೋಪಿಯಾಗಿರುವ ಅನಂತು, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಹೀಗಾಗಿ, ಎಸಿಬಿ ಜ.22ರಂದು ಆಕ್ಷೇಪಣೆ ಸಲ್ಲಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next