Advertisement

ಮಹಾ ಪತನದತ್ತ ಬ್ರಿಟನ್‌ ಆರ್ಥಿಕತೆ: 300 ವರ್ಷಗಳ ಬಳಿಕದ ಮಹಾ ಕುಸಿತ

03:12 PM May 11, 2020 | sudhir |

ಲಂಡನ್‌ : ಬ್ರಿಟನ್‌ನ ಆರ್ಥಿಕತೆ ಮಹಾ ಪತನಕ್ಕೆ ಈಡಾಗಲು ಸಿದ್ಧವಾಗುತ್ತಿದೆ. ಬ್ಯಾಂಕ್‌ ಆಫ್ ಇಂಗ್ಲಂಡ್‌ನ‌ ಮುಂಗಾಣ್ಕೆಯ ಪ್ರಕಾರ ಕೋವಿಡ್ ನಿಂದಾಗಿ ಮೂರು ಶತಮಾನಗಳ ಬಳಿಕ ದೇಶದ ಆರ್ಥಿಕತೆ ಇಷ್ಟೊಂದು ತಳಮಟ್ಟಕ್ಕೆ ಜಾರಲಿದೆ.

Advertisement

ಈ ವರ್ಷ ಬ್ರಿಟನ್‌ನ ಆರ್ಥಿಕತೆ ಶೇ. 14 ಕುಸಿತ ಕಾಣಲಿದೆ ಎಂದು ಬ್ಯಾಂಕ್‌ ಅಂದಾಜಿಸಿದೆ. ಇದು 1706ರ ಬಳಿಕದ ಮಹಾ ಪತನ ಎಂದೆನಿಸಿಕೊಳ್ಳಲಿದೆ. 1706ರಲ್ಲಿ ಬ್ರಿಟನ್‌ನ ಆರ್ಥಿಕತೆ ಶೇ. 15 ಕುಸಿತ ಕಂಡಿತ್ತು.

ದೇಶದ ಜಿಡಿಪಿ ಮೊದಲ ತ್ತೈಮಾಸಿಕದಲ್ಲಿ ಶೇ. 3ರಷ್ಟು ಕುಸಿದಿತ್ತು. ಆದರೆ ಎರಡನೇ ತ್ತೈಮಾಸಿಕದಲ್ಲಿ ಈ ಕುಸಿತ ಶೇ. 25ಕ್ಕೆ ತಲುಪಲಿದೆ. ತತ್ಪರಿಣಾಮವಾಗಿ ಆರ್ಥಿಕತೆ 2019ರ ಅಂತ್ಯದಲ್ಲಿ ಇದ್ದುದಕ್ಕಿಂತ ಶೇ. 30ರಷ್ಟು ಕಿರಿದಾಗಲಿದೆ ಮತ್ತು ನಿರುದ್ಯೋಗ ಶೇ.9 ಹೆಚ್ಚಲಿದೆ.

2021ರಲ್ಲಿ ಆರ್ಥಿಕತೆ ಚೇತರಿಕೆಯತ್ತ ಮುಖ ಮಾಡುವ ಸಾಧ್ಯತೆಯಿದ್ದರೂ ಅದು ಸರಕಾರ ಕೈಗೊಳ್ಳುವ ಉತ್ತೆಜನಕಾರಿ ಕ್ರಮಗಳು ಮತ್ತು ಸಾಮಾಜಿಕ ಅಂತರದ ನಿಯಮವನ್ನು ಸಡಿಲಿಸುವ ನಿರ್ಧಾರವನ್ನು ಅವಲಂಬಿಸಿದೆ ಎಂದು ಬ್ಯಾಂಕ್‌ ಅಭಿಪ್ರಾಯಪಟ್ಟಿದೆ.

ಸರಕಾರ ಜಾರಿಗೊಳಿಸುವ ಉತ್ತೇಜನಕಾರಿ ಪ್ಯಾಕೇಜ್‌ಗಳಿಗೆ ಕೈಗಾರಿಕೋದ್ಯಮ, ಗೃಹ ವಾರ್ತೆ ಹಾಗೂ ಇನ್ನಿತರ ವಲಯಗಳು ಯಾವ ರೀತಿಯ ಪ್ರತಿಸ್ಪಂದನೆಯನ್ನು ವ್ಯಕ್ತಪಡಿಸುತ್ತವೆ ಎನ್ನುವುದನ್ನು ಅವಲಂಬಿಸಿ ಆರ್ಥಿಕತೆಯ ಚೇತರಿಕೆಯ ದರ ನಿಗದಿಯಾಗಲಿದೆ. ಇದು ದೀರ್ಘಾವಧಿ ಉಪಕ್ರಮಗಳಾಗಿರುವುದರಿಂದ ಸದ್ಯಕ್ಕೆ ಆರ್ಥಿಕತೆಯ ಪತನವನ್ನು ತಡೆಯುವುದು ಅಸಾಧ್ಯ ಎಂದು ಬ್ಯಾಂಕ್‌ ಲೆಕ್ಕ ಹಾಕಿದೆ.

Advertisement

ಇದೇ ವೇಳೆ ಕಾಮರ್ಸ್‌ ಬ್ಯಾಂಕ್‌ನ ಆರ್ಥಿಕ ತಜ್ಞರೂ ಆರ್ಥಿಕತೆಯ ಕುಸಿತದ ಎಚ್ಚರಿಕೆ ನೀಡಿದ್ದಾರೆ. ಉತ್ಪಾದನಾ ವಲಯಕ್ಕೆ ಶಾಶ್ವತವಾದ ನಷ್ಟಗಳು ಆಗಲಿವೆ ಹಾಗೂ ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ. ಏನೇ ಕ್ರಮ ಕೈಗೊಂಡರೂ ಆರ್ಥಿಕತೆ ಚೇತರಿಕೆಯ ಗತಿ ನಿಧಾನವಾಗಿರಲಿದೆ ಎಂದಿದ್ದಾರೆ ಈ ತಜ್ಞರು.

ಇದು ನಾವು ಹಿಂದೆಂದೂ ಕಂಡು ಕೇಳರಿಯದ ಬಿಕ್ಕಟ್ಟು. ಈಗ ಆರ್ಥಿಕತೆ ಎಲ್ಲಿಗೆ ಬಂದು ನಿಂತಿದೆಯೋ ಅಲ್ಲಿಂದಲೇ ಅಭಿವೃದ್ಧಿ ಪರ್ವವನ್ನು ಪ್ರಾರಂಭಿಸಬೇಕು. ಭವಿಷ್ಯದಲ್ಲಿ ಏನಾಗಲಿದೆ ಎಂದು ತಲೆಕೆಡಿಸಿಕೊಳ್ಳುವುದಕ್ಕಿಂತ ಸದ್ಯದಲ್ಲಿ ಈ ಗಂಡಾಂತರದಿಂದ ಪಾರಾಗುವುದು ಹೇಗೆ ಎಂದು ಆಲೋಚಿಸುವುದು ಸಮುಚಿತವಾದ ನಡೆಯಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next