Advertisement

ಕೋವಿಡ್‌ 19 ಸಂದರ್ಭದಲ್ಲಿ ಸ್ತನ್ಯಪಾನ

04:43 PM Aug 09, 2020 | Suhan S |

ಅಂತಾರಾಷ್ಟ್ರೀಯ ಸ್ತನ್ಯಪಾನ ಸಪ್ತಾಹ ಆಚರಣೆ ಹಿನ್ನೆಲೆಯಲ್ಲಿ ಪ್ರಸ್ತುತ ಕೋವಿಡ್‌-19 ಸಾಂಕ್ರಾಮಿಕ ಮತ್ತು ಈ ಸಂದರ್ಭದಲ್ಲಿ ಸೋಂಕು ಶಂಕಿತ ಮತ್ತು ದೃಢಪಟ್ಟ ತಾಯಂದಿರು ಶಿಶುವಿಗೆ ಎದೆಹಾಲು ಉಣಿಸುವ ವಿಚಾರದಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಕೆಲವು ಸಂದೇಹ- ಪ್ರಶ್ನೆಗಳನ್ನು ನಿವಾರಿಸುವ ಪ್ರಯತ್ನ ಇಲ್ಲಿದೆ.

Advertisement

ಕೋವಿಡ್‌ 19 ಕಾಣಿಸಿಕೊಂಡಿರುವ ಸಮುದಾಯಗಳಲ್ಲಿ ತಾಯಂದಿರು ಶಿಶುವಿಗೆ ಸ್ತನ್ಯಪಾನ ಮಾಡಬಹುದೇ?

– ಹೌದು. ಎಲ್ಲ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಲ್ಲಿ ಎದೆಹಾಲು ಉಣಿಸುವಿಕೆಯು ಶಿಶುವಿನ ಪ್ರಾಣ ಉಳಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆಯಲ್ಲದೆ ನವಜಾತ ಶಿಶುಗಳು ಮತ್ತು ಎಳೆಯರ ಆಜೀವನಪರ್ಯಂತ ಆರೋಗ್ಯ ಹಾಗೂ ಅಭಿವೃದ್ಧಿಯ ಅನುಕೂಲವನ್ನು ವೃದ್ಧಿಸುತ್ತದೆ. – ಎದೆಹಾಲು ಉಣಿಸುವಿಕೆಯು ತಾಯಂದಿರ ಆರೋಗ್ಯವನ್ನೂ ವೃದ್ಧಿಸುತ್ತದೆ. ಇದಲ್ಲದೆ, ಎದೆಹಾಲಿನ ಮೂಲಕ ಮತ್ತು ಎದೆಹಾಲು ಉಣಿಸುವುದರ ಮೂಲಕ ಕೋವಿಡ್‌-19 ವೈರಸ್‌ ಪ್ರಸರಣ ಇನ್ನೂ ದೃಢಪಟ್ಟಿಲ್ಲ. ಹೀಗಾಗಿ ಎದೆಹಾಲು ಉಣಿಸುವುದನ್ನು ತ್ಯಜಿಸುವುದು ಅಥವಾ ಮುಂದೂಡುವುದಕ್ಕೆ ಯಾವುದೇ ಕಾರಣಗಳಿಲ್ಲ.

­ಕೋವಿಡ್‌-19 ಶಂಕಿತ / ದೃಢಪಟ್ಟ ಗರ್ಭಿಣಿಗೆ ಹೆರಿಗೆಯಾದಾಗ, ಶಿಶುವನ್ನು ತತ್‌ ಕ್ಷಣ ಆಕೆಯ ದೇಹಸ್ಪರ್ಶ ಮತ್ತು ಸ್ತನ್ಯಪಾನಕ್ಕೆ ಒಡ್ಡಬಹುದೇ?

– ಹೌದು. ಕಾಂಗರೂ ಆರೈಕೆಯ ಸಹಿತ ತತ್‌ಕ್ಷಣದ ಮತ್ತು ಸತತ ದೈಹಿಕ ಸ್ಪರ್ಶವು ಶಿಶುಗಳ ದೇಹೋಷ್ಣ ಸ್ಥಿರೀಕರಣಕ್ಕೆ ಸಹಾಯ ಮಾಡುತ್ತದೆಯಲ್ಲದೆ ಇತರ ಹಲವು ದೈಹಿಕ ಫ‌ಲಿತಾಂಶಗಳನ್ನು ಒದಗಿಸುತ್ತದೆ. ಜತೆಗೆ ಶಿಶುಮರಣ ಕಡಿಮೆಯಾಗುವುದರ ಜತೆಗೂ ಇದು ಸಂಬಂಧ ಹೊಂದಿದೆ. ಕೋವಿಡ್‌-19ಗೆ ಸಂಬಂಧಿಸಿದ ಇತರ ಸಹಕಾಯಿಲೆಗಳು ಮತ್ತು ಸ್ವತಃಕೋವಿಡ್‌-19 ಸೋಂಕು ತಗಲುವ ಸಂಭಾವ್ಯ ಅಪಾಯವನ್ನೂ ಸ್ತನ್ಯಪಾನ ಮತ್ತು ತಾಯಿಯ ಜತೆಗೆ ನೇರ ದೈಹಿಕ ಸಂಪರ್ಕವು ನಿವಾರಿಸುತ್ತದೆ.

Advertisement

­ ಕೋವಿಡ್‌-19 ಶಂಕಿತ/ ಸೋಂಕು ದೃಢಪಟ್ಟ ತಾಯಿ ಎದೆಹಾಲು ಉಣಿಸುವುದನ್ನು ಮುಂದುವರಿಸಬಹುದೇ?

ಹೌದು. ಎದೆಹಾಲಿನ ಮೂಲಕ ಕೋವಿಡ್‌-19 ಸೋಂಕು ಪ್ರಸರಣ ಪತ್ತೆಯಾಗಿಲ್ಲ. ಆದರೂ ಎದೆಹಾಲು ಉಣಿಸುವಾಗ ತಾಯಿಯು ಮೆಡಿಕಲ್‌ ಮಾಸ್ಕ್ ಧಾರಣೆಯಂತಹ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಮೂಲಕ ಕೋವಿಡ್‌-19 ವೈರಾಣುಗಳುಳ್ಳ ಹನಿಬಿಂದುಗಳನ್ನು ಶಿಶುವನ್ನು ಸೋಕದಂತೆ ಎಚ್ಚರ ವಹಿಸಬೇಕು. ಕೆಲವೇ ಮಕ್ಕಳಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿದ್ದು, ಇಂಥ ಸಂದರ್ಭಗಳಲ್ಲಿ ಲಘು ಲಕ್ಷಣಗಳನ್ನು ಅನುಭವಿಸುತ್ತಾರೆ ಅಥವಾ ಇವು ಸೋಂಕುರಹಿತ ಪ್ರಕರಣಗಳಾಗಿರುತ್ತವೆ ಎಂಬ ಮಾಹಿತಿಯನ್ನು ತಾಯಂದಿರು ಮತ್ತು ಕುಟುಂಬಗಳಿಗೆ ನೀಡಬಹುದು. ಎದೆಹಾಲು ಉಣಿಸುವುದರಿಂದ ಆರ್ಥಿಕವಾಗಿ ಸದೃಢ ವರ್ಗದವರ ಸಹಿತ ಎಲ್ಲ ವರ್ಗಗಳಲ್ಲಿ ಶಿಶು ಮತ್ತು ಮಗು ಮರಣ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಎಲ್ಲ ಭೌಗೋಳಿಕ ಮತ್ತು ಆರ್ಥಿಕ ಸ್ಥಿತಿಗತಿಗಳಲ್ಲಿ ಎದೆಹಾಲು ಉಣಿಸುವುದರಿಂದ ಜೀವನಪರ್ಯಂತ ಆರೋಗ್ಯ ಮತ್ತು ಅಭಿವೃದ್ಧಿ ಹೆಚ್ಚುತ್ತದೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ.

ಕೋವಿಡ್‌-19 ಶಂಕಿತ/ದೃಢಪಟ್ಟ ತಾಯಂದಿರು ಎದೆಹಾಲು ಉಣಿಸುವುದಕ್ಕೆ ಸಂಬಂಧಿಸಿ ಅನುಸರಿಸಬೇಕಾದ ನೈರ್ಮಲ್ಯ ಕ್ರಮಗಳೇನು?

  • ತಾಯಿ ಕೋವಿಡ್‌-19 ಹೊಂದಿರುವ ಶಂಕೆ ಇದ್ದರೆ/ ದೃಢಪಟ್ಟಿದ್ದರೆ ಆಕೆಯು ಆಗಾಗ, ಅದರಲ್ಲೂ ವಿಶೇಷವಾಗಿ ಶಿಶುವನ್ನು ಸ್ಪರ್ಶಿಸುವುದಕ್ಕೆ ಮುನ್ನ ಸಾಬೂನು ಉಪಯೋಗಿಸಿ ನೀರಿನಿಂದ ಅಥವಾ ಆಲ್ಕೊಹಾಲ್‌ಯುಕ್ತ ಸ್ಯಾನಿಟೈಸರ್‌ ಉಪಯೋಗಿಸಿ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು.

ಎದೆಹಾಲು ಉಣಿಸುವ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಮುಖ್ಯವಾದುದೆಂದರೆ,

  • ಮಾಸ್ಕ್ ಒದ್ದೆಯಾದರೆ ಬದಲಾಯಿಸಬೇಕು.
  • ಮಾಸ್ಕ್ ಗಳನ್ನು ತತ್‌ಕ್ಷಣ ವರ್ಜಿಸಬೇಕು.
  • ಮಾಸ್ಕನ್ನು ಪುನರ್‌ಬಳಕೆ ಮಾಡಬಾರದು.
  • ಮಾಸ್ಕ ನ್ನು ಎದುರುಗಡೆಯಿಂದ ಮುಟ್ಟಬಾರದು, ಹಿಂದಿನಿಂದ ಬಿಚ್ಚಿಕೊಳ್ಳಬೇಕು.
  • ಕೆಮ್ಮಿದಾಗ ಅಥವಾ ಸೀನಿದಾಗ ಟಿಶ್ಯೂ ಉಪಯೋಗಿಸಬೇಕು, ಬಳಿಕ ಅದನ್ನು ತ್ಯಜಿಸಿ ಕೈಗಳನ್ನು ಆಲ್ಕೊಹಾಲ್‌ಯುಕ್ತ ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಅಥವಾ ಸಾಬೂನು ಉಪಯೋಗಿಸಿ ನೀರಿನಿಂದ ತೊಳೆದುಕೊಳ್ಳಬೇಕು.
  • ಎದೆಹಾಲು ನೀಡುವಾಗ ಸ್ತನಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.    (ಮುಂದಿನ ವಾರಕ್ಕೆ)

 ಯಶೋದಾ ಸತೀಶ್‌

ಅಸಿಸ್ಟೆಂಟ್‌ ಪ್ರೊಫೆಸರ್‌,

ಚೈಲ್ಡ್‌ ಹೆಲ್ತ್‌ ನರ್ಸಿಂಗ್‌ ವಿಭಾಗ,

ಮಣಿಪಾಲ ಕಾಲೇಜ್‌ ಆಫ್

ನರ್ಸಿಂಗ್‌, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next