Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಘ-ಸಂಸ್ಥೆಗಳ ಅನುದಾನಕ್ಕೆ ಬ್ರೇಕ್‌

11:20 PM Jul 03, 2019 | Lakshmi GovindaRaj |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವರ್ಷ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿ, ಸಕ್ರಿಯವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಅರ್ಹ ಸಂಘ-ಸಂಸ್ಥೆಗಳಿಗೆ ಜಿಲ್ಲಾಮಟ್ಟದಲ್ಲಿಯೇ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಸಂಘ-ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸದೆ ಬೋಗಸ್‌ ಬಿಲ್ಲುಗಳನ್ನು ಸೃಷ್ಠಿಸಿ ಅನುದಾನ ಪಡೆಯುವ ಪ್ರವೃತ್ತಿ ಹೆಚ್ಚಾಗಿದೆ. ಒಂದೇ ಕಾರ್ಯಕ್ರಮಕ್ಕೆ ಕಾರ್ಪೊರೇಷನ್‌, ಬಿಡಿಎ ಹಾಗೂ ಸರ್ಕಾರದ ಇತರ ಇಲಾಖೆಗಳಿಂದ ಅನುದಾನ ಪಡೆದಿರುವ ಉದಾಹರಣೆಗಳಿವೆ. ಈ ಬಗ್ಗೆ ಲೋಕಾಯುಕ್ತದಲ್ಲಿಯೂ ದೂರುಗಳು ದಾಖಲಾಗಿವೆ.

ಇದರಿಂದ ಪ್ರಾಮಾಣಿಕವಾಗಿ ಕಲಾ ಸೇವೆ ಮಾಡುತ್ತಿರುವ ಅರ್ಹ ಸಂಘ ಸಂಸ್ಥೆಗಳಿಗೆ ಅನುದಾನ ಸಿಗದಂತಾಗಿದೆ. ಹೀಗಾಗಿ, ಜಿಲ್ಲಾಮಟ್ಟದಲ್ಲಿಯೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ ಅನುದಾನ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಸಂಘ-ಸಂಸ್ಥೆಗಳಿಗೆ ವಾರ್ಷಿಕವಾಗಿ ಅನುದಾನ ನೀಡುವ ಪದ್ಧತಿ ಹಳೆಯ ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿದೆ. ಇದು ಸರ್ಕಾರದ ಅನುದಾನದ ದುರುಪಯೋಗಕ್ಕೆ ಕಾರಣವಾಗಿದೆ. ಈ ವರ್ಷದಿಂದ ರಾಜ್ಯಮಟ್ಟದಲ್ಲಿ ವಾರ್ಷಿಕ ಅನುದಾನ ನೀಡುವ ಪ್ರಕ್ರಿಯೆ ಕೈ ಬಿಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಸಂಸ್ಕೃತಿ ಕಾರ್ಯಕ್ರಮ: ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು “ಕರ್ನಾಟಕ ಸಂಸ್ಕೃತಿ’ ಎಂಬ ಹೊಸ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ. ಗ್ರಾಮೀಣ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಎಲ್ಲ ಕಲಾವಿದರಿಗೂ ಅವಕಾಶ ದೊರೆಯಬೇಕು. 18 ವರ್ಷ ಒಳಗಿನ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಕನ್ನಡ ಸಂಸ್ಕೃತಿ, ನಾಟಕ, ಕಲೆ, ಸಂಗೀತ, ನೃತ್ಯ ಮತ್ತಿತರ ರಂಗಗಳಲ್ಲಿ ಆಯಾ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಬಹುಮಾನ ನೀಡಿ ಪುರಸ್ಕರಿಸಲಾಗುವುದು ಎಂದರು.

Advertisement

ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿ ವಿಜೇತರಾದ ಕಲಾವಿದರಿಗೆ ರಾಜ್ಯಮಟ್ಟದ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿ ಪಡೆದ ಯುವ ಕಲಾವಿದರಿಗೆ ಇಲಾಖೆಯಿಂದ ನಡೆಸುವ ಉತ್ಸವಗಳಲ್ಲಿ ಅವಕಾಶ ನೀಡಲಾಗುವುದು. ಸ್ಥಳೀಯ ಮಟ್ಟದಲ್ಲಿ ಕಲಾವಿದರ ಆಯ್ಕೆಗೆ ಜಿಲ್ಲಾ ಪಂಚಾಯತಿ ಸಿಇಒ, ಕಲಾವಿದರು, ಸಂಘ-ಸಂಸ್ಥೆಗಳು, ಜಿಲ್ಲಾ ಪಂಚಾಯತಿ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ಅವರ ಮೂಲಕ ಅವಕಾಶ ನೀಡಿ, ಅನುದಾನ ನೀಡಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಗೆ ಅನುದಾನ ನೀಡುವ ಕುರಿತು ಮುಖ್ಯಮಂತ್ರಿಯವರ ಅನುಮತಿ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಅದಕ್ಕಾಗಿ ಇಲಾಖೆಯಲ್ಲಿ ಪ್ರತ್ಯೇಕ ಹಣ ಇಡಲಾಗುವುದು ಎಂದು ಹೇಳಿದರು.

ಅಭಿಪ್ರಾಯ ಸಂಗ್ರಹ: ರಾಜ್ಯ ಸರ್ಕಾರದ ಹೊಸ ಕಾರ್ಯಕ್ರಮ ಕುರಿತು ಸಾಹಿತಿಗಳು, ಕಲಾವಿದರು, ಸಂಘ ಸಂಸ್ಥೆಗಳು, ಶಾಸಕರು, ಸಂಸದರ ಸಲಹೆ ಪಡೆಯಲು ಪತ್ರ ಬರೆದು 15 ದಿನದಲ್ಲಿ ಅಭಿಪ್ರಾಯ ತಿಳಿಸಲು ಸೂಚನೆ ನೀಡಲಾಗುವುದು. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 9886670864 ಅಥವಾ 7899664101ಗೆ ವಾಟ್ಸ್‌ಆಪ್‌ ಮೂಲಕ ಅಥವಾ developkanaja@gmail.com ಅಥವಾ dkc.kanaja@gmail.com ಸಲ್ಲಿಸಬಹುದು. ಜಾನಪದ ಜಾತ್ರೆ ಮಾಡುವ ಬಗ್ಗೆಯೂ ಸಾರ್ವಜನಿಕರು ಅಭಿಪ್ರಾಯಗಳನ್ನು ಕಳುಹಿಸಲಿ ಎಂದು ಸಚಿವ ಶಿವಕುಮಾರ್‌ ಹೇಳಿದರು.

ಜಯಚಾಮರಾಜೇಂದ್ರ ಒಡೆಯರ್‌ ಜನ್ಮ ಶತಮಾನೋತ್ಸವ: ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್‌ ಅವರ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಅವರ ಜನ್ಮಶತಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಜಯಚಾಮರಾಜೇಂದ್ರ ಒಡೆಯರ್‌ ಅವರು, 1919 ಜುಲೈ 18 ರಂದು ಜನಿಸಿದ್ದು ಇದೇ 18ಕ್ಕೆ ಅವರ ಜನ್ಮಶತಮಾನೋತ್ಸವ ಇದೆ. ಈ ಕಾರ್ಯಕ್ರಮ ಆಚರಣೆ ಕುರಿತಂತೆ ರಾಜಮಾತೆ ಪ್ರಮೋದಾ ದೇವಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಜುಲೈ 22 ರಂದು ಕಾರ್ಯಕ್ರಮ ನಡೆಸಲು ಸಲಹೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಚಿವ ಶಿವಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next